ಶನಿವಾರ, ಏಪ್ರಿಲ್ 4, 2020
19 °C

ವೈದ್ಯಕೀಯ ವೆಚ್ಚಕ್ಕೆ ಉಳಿತಾಯ ಯೋಜನೆ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಭವಿಷ್ಯದ ವೈದ್ಯಕೀಯ ವೆಚ್ಚಗಳಿಗೆ ಇಂದು ಉಳಿಸಿ – ನಾಳೆ ಪಾವತಿಸಿ ತತ್ವದಡಿ, ಉಳಿತಾಯ ಯೋಜನೆ ಸೌಲಭ್ಯ ಒದಗಿಸುವ ನವೋದ್ಯಮ ಅಫೋರ್ಡ್‌ಪ್ಲ್ಯಾನ್‌ನ ಕಾರ್ಯವೈಖರಿಯನ್ನು ಇಲ್ಲಿ ವಿವರಿಸಲಾಗಿದೆ.

ದೇಶದಲ್ಲಿ ಈಗ ಹೃದ್ರೋಗ, ಮಧುಮೇಹ, ಕ್ಯಾನ್ಸರ್‌ನಿಂದ ಬಳಲುವರ ಸಂಖ್ಯೆ ಏರುಗತಿಯಲ್ಲಿ ಇದೆ. ಇದರ ಜತೆಗೆ ವೈದ್ಯಕೀಯ ವೆಚ್ಚವೂ ದಿನೇ ದಿನೇ ದುಬಾರಿಯಾಗುತ್ತಿದೆ. ವಯಸ್ಸಾದವರ ಸಂಖ್ಯೆ ಜತೆಗೆ ಕಾಯಿಲೆಗಳೂ ಹೆಚ್ಚುತ್ತಿವೆ. ಕಾರ್‌ – ಮನೆ ಖರೀದಿ, ಮಕ್ಕಳ ಶಿಕ್ಷಣ - ಮದುವೆ, ವಿದೇಶ ಪ್ರವಾಸ, ಚಿನ್ನಾಭರಣ ಖರೀದಿ ಮತ್ತಿತರ ಉದ್ದೇಶಕ್ಕೆ ಭಾರತೀಯರು ಹಣ ಉಳಿಸಲು ಮುಂದಾಗುತ್ತಾರೆ. ಆದರೆ, ಆರೋಗ್ಯ ರಕ್ಷಣೆ ಉದ್ದೇಶದ ವೈದ್ಯಕೀಯ ವೆಚ್ಚ ಭರಿಸಲು ಉಳಿತಾಯ ಮಾಡಲು ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ. ಉಳಿತಾಯಕ್ಕೆ ಸಂಬಂಧಿಸಿದಂತೆ ಭಾರತೀಯರ ವಿಶಿಷ್ಟ ಮನಸ್ಥಿತಿ ಇದಾಗಿದೆ. ಇದೇ ಕಾರಣಕ್ಕೆ ಬಹುತೇಕ ಜನರು ದುಬಾರಿ ವೈದ್ಯಕೀಯ ವೆಚ್ಚ ಭರಿಸುವ ಸಂದರ್ಭದಲ್ಲಿ ಸಕಾಲದಲ್ಲಿ ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ದುಬಾರಿ ಬಡ್ಡಿ ಹಣಕ್ಕೆ ಕೈಚಾಚುತ್ತಾರೆ. ಹಣ ದೊರೆಯದೆ ಇದ್ದರೆ ಸೂಕ್ತ ವೈದ್ಯಕೀಯ ಚಿಕಿತ್ಸೆಯಿಂದಲೂ ವಂಚಿತರಾಗುತ್ತಾರೆ.

ಆಸ್ಪತ್ರೆಗಳಲ್ಲಿನ ಆರೋಗ್ಯ ವೆಚ್ಚಕ್ಕೆ ಇನ್ನು ಮುಂದೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಯೋಜಿತ ಆರೋಗ್ಯ ರಕ್ಷಣೆಗೆ ಅಗತ್ಯವಾದ ಹಣವನ್ನು ಮುಂಚಿತವಾಗಿಯೇ ಉಳಿತಾಯ ಮಾಡಿ ವೈದ್ಯಕೀಯ ವೆಚ್ಚದ ಭಾರ ಕಡಿಮೆ ಮಾಡಿಕೊಳ್ಳಬಹುದು. ಆರೋಗ್ಯ ತಂತ್ರಜ್ಞಾನ ಸ್ಟಾರ್ಟ್‌ಅಪ್‌ ಅಫೊರ್ಡ್‌ ಪ್ಲ್ಯಾನ್‌ (AffordPlan),  ವೈದ್ಯಕೀಯ ಕ್ಷೇತ್ರದಲ್ಲಿ ಹಣಕಾಸು ಸೌಲಭ್ಯ ಕಲ್ಪಿಸುವ ವಿಶಿಷ್ಟ ಸೇವೆ ಒದಗಿಸಲು ಮುಂದಾಗಿದೆ. 2015–16– ದೆಹಲಿಯಲ್ಲಿ ಆರಂಭವಾಗಿರುವ ಈ ನವೋದ್ಯಮವು ವೈದ್ಯಕೀಯ ವೆಚ್ಚ ಭರಿಸುವುದಕ್ಕೆ ಉಳಿತಾಯ ಯೋಜನೆಯ ಪರಿಹಾರ ಒದಗಿಸಿ ವಿಶಿಷ್ಟ ರೀತಿಯಲ್ಲಿ ನೆರವಾಗುತ್ತಿದೆ.

ಹೆರಿಗೆ, ಮಂಡಿಚಿಪ್ಪು ಬದಲಾವಣೆ, ನೇತ್ರ – ದಂತ ಚಿಕಿತ್ಸೆ ಪಡೆಯುವ ಆಸ್ಪತ್ರೆಗಳಲ್ಲಿನ ವೆಚ್ಚ ಭರಿಸಲು ಮುಂಚಿತವಾಗಿಯೇ ಹಣ ಉಳಿಸುವ ಸೌಲಭ್ಯವನ್ನು ಇದು ಒದಗಿಸುತ್ತಿದೆ. ಕಂಪನಿಯ ಜತೆ ಪಾಲುದಾರಿಕೆ ಮಾಡಿಕೊಂಡ ಆಸ್ಪತ್ರೆಗಳಲ್ಲಿ ಇರುವ ಹಣಕಾಸು ಸಲಹೆಗಾರರು ಅಫೋರ್ಡ್‌ ಪ್ಲ್ಯಾನ್‌ ಆ್ಯಪ್‌ ಮೂಲಕ ಉಳಿತಾಯ ಯೋಜನೆ ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತಾರೆ.

‘ವ್ಯಕ್ತಿಯ ಆದಾಯ, ಉಳಿತಾಯದ ಸಾಮರ್ಥ್ಯ, ವೆಚ್ಚಗಳನ್ನು ಪರಿಗಣಿಸಿ ಕಂತಿನ ಪ್ರಮಾಣ ನಿಗದಿಪಡಿಸಲಾಗುವುದು. ಅಫೋರ್ಡ್‌ ಪ್ಲ್ಯಾನ್‌ ಬಗ್ಗೆ ವೈದ್ಯರು ನೀಡಿದ ಸಲಹೆಯನ್ನು ಚಿಕಿತ್ಸೆ ಪಡೆಯುವವರು ಒಪ್ಪಿಕೊಂಡರೆ ಮಾತ್ರ ಕಂಪನಿಯ ಪ್ರತಿನಿಧಿಯು ಅವರ ಜತೆ ಚರ್ಚಿಸಿ ಉಳಿತಾಯ ಖಾತೆ ತೆರೆಯಲು ಮುಂದುವರೆಯುತ್ತಾರೆ. ಈ ಖಾತೆಯಲ್ಲಿ ಆನ್‌ಲೈನ್‌ ಮೂಲಕವೇ ಹಣ ಉಳಿಸಬಹುದು. ಈ ಉಳಿತಾಯ ಯೋಜನೆ ಆಯ್ಕೆ ಮಾಡಿಕೊಂಡವರಿಗೆ ಔಷಧಿ ಖರೀದಿ, ಪ್ರಯೋಗಾಲಯ ವೆಚ್ಚದಲ್ಲಿ ರಿಯಾಯ್ತಿಯೂ ದೊರೆಯಲಿದೆ. ಈ ಸೇವಿಂಗ್ಸ್‌ ಪ್ಲ್ಯಾನ್‌ ಅನ್ನು ದೀರ್ಘಾವಧಿವರೆಗೂ ಮುಂದುವರೆಸಬಹುದು’ ಎಂದು ಕಂಪನಿಯ ಸಿಒಒ ಆದಿತ್ಯ ಶರ್ಮಾ ಹೇಳುತ್ತಾರೆ.

‘ಮಧ್ಯಮ ವರ್ಗ ಮತ್ತು ಕಡಿಮೆ ಆದಾಯದವರಿಗಾಗಿ ವೈದ್ಯಕೀಯ ವೆಚ್ಚ ಭರಿಸಲು ಸಾಲದ ಸೌಲಭ್ಯವನ್ನೂ ಒದಗಿಸಿಕೊಡಲಾಗುವುದು. ಮಗು ಜನಿಸಿದ ನಂತರದ ಮೂರ್ನಾಲ್ಕು ವರ್ಷಗಳವರೆಗಿನ ವೆಚ್ಚ ಭರಿಸಲು ಉಳಿತಾಯ ಯೋಜನೆ ಮುಂದುವರೆಸಲೂಬಹುದು. ಆಸ್ಪತ್ರೆಗಳು ಮತ್ತು ಗ್ರಾಹಕರ ಅಗತ್ಯ ಆಧರಿಸಿ ಉಳಿತಾಯದ ಸೌಲಭ್ಯ ಕಲ್ಪಿಸಲಾಗುವುದು. ಕೆಲವು ಸಂದರ್ಭಗಳಲ್ಲಿ ವ್ಯಕ್ತಿ ಪಡೆದುಕೊಂಡಿರುವ ಆರೋಗ್ಯ ವಿಮೆಯ ಮೊತ್ತಕ್ಕೆ ಹೋಲಿಸಿದರೆ ಚಿಕಿತ್ಸಾ ವೆಚ್ಚ ಹೆಚ್ಚಿಗೆ ಇರುತ್ತದೆ. ಆಗ ಈ ಉಳಿತಾಯ ಯೋಜನೆಯೂ ಪ್ರಯೋಜನಕ್ಕೆ ಬರುತ್ತದೆ. ಪ್ರತಿ ತಿಂಗಳೂ ₹ 8 ದಿಂದ ₹ 10 ಸಾವಿರದವರೆಗೆ ಉಳಿತಾಯ ಮಾಡಬಹುದು. ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದಂತೆ ವೈದ್ಯ ಮತ್ತು ರೋಗಿ ಮಧ್ಯೆ ಕಂಪನಿಯು ಯಾವುದೇ ಪಾತ್ರ ನಿರ್ವಹಿಸುವುದಿಲ್ಲ. ಚಿಕಿತ್ಸೆ ನಂತರ ಉಳಿತಾಯ ಖಾತೆಯಲ್ಲಿ ಹಣ ಉಳಿದಿದ್ದರೆ ರೋಗಿ ಸಮ್ಮತಿ ಪಡೆದ ನಂತರ, ಉಳಿದ ಮೊತ್ತವನ್ನು ಆನ್‌ಲೈನ್‌ ಮೂಲಕ ಬ್ಯಾಂಕ್‌ ಖಾತೆಗೆ ಮರಳಿಸಲಾಗುವುದು.

‘ಇದರಿಂದಾಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚವೂ ಶೇ 15 ರಿಂದ ಶೇ 20ರಷ್ಟು ಕಡಿಮೆಯಾಗಲಿದೆ. ವ್ಯಕ್ತಿಯೊಬ್ಬನ ಇಲ್ಲವೆ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ ತಗುಲುವ ವೆಚ್ಚವನ್ನು ಮುಂಚಿತವಾಗಿಯೇ ಕಂತುಗಳಲ್ಲಿ ಉಳಿತಾಯ ಮಾಡಲು ಅವಕಾಶ ಒದಗಿಸಲಿದೆ. ಮಧ್ಯಮವರ್ಗದವರು ಮತ್ತು ಬಡವರೇ ಹೆಚ್ಚಾಗಿ ಈ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ.

‘ಆಸ್ಪತ್ರೆಗಳೂ ಇದರಿಂದ ಪ್ರಯೋಜನ ಇದೆ. ಪ್ರತಿ ತಿಂಗಳೂ ಕಂತು ಪಾವತಿಸುವುದರಿಂದ ಚಿಕಿತ್ಸಾ ವೆಚ್ಚದ ಹಣವು ಮುಂಚಿತವಾಗಿಯೇ ಆಸ್ಪತ್ರೆಗಳಿಗೆ ಜಮೆ ಆಗಿರುತ್ತದೆ. ರೋಗಿಗಳು ಯಾವುದೇ ಸಂದರ್ಭದಲ್ಲಾದರೂ ತಮ್ಮ ಉಳಿತಾಯದ ಹಣ ವಾಪಸ್‌ ಪಡೆಯಲು ಅವಕಾಶ ಇದೆ. ಉದಾಹರಣೆಗೆ ಹೆರಿಗೆ ವೆಚ್ಚ ಭರಿಸಲು ಉಳಿತಾಯ ಆರಂಭಿಸಿದ ಸಂದರ್ಭದಲ್ಲಿ ಗರ್ಭಪಾತವಾದರೆ ಅಲ್ಲಿವರೆಗಿನ ಹಣ ಹಿಂದಿರುಗಿಸಲಾಗುವುದು. ಇಡೀ ಕುಟುಂಬಕ್ಕೆ ಸಮಗ್ರ ಚಿಕಿತ್ಸಾ ವೆಚ್ಚ ಭರಿಸಲೂ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಬೆಂಗಳೂರಿನಲ್ಲಿ 50ಕ್ಕಿಂತ ಹೆಚ್ಚು ಆಸ್ಪತ್ರೆಗಳು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. ರೋಗಿ ಮತ್ತು ಆಸ್ಪತ್ರೆಗಳ ಮಧ್ಯೆ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುವ ಅಫೋರ್ಡ್‌ಪ್ಲ್ಯಾನ್‌, ಇದಕ್ಕೆ ಪ್ರತಿಯಾಗಿ ಆಸ್ಪತ್ರೆಗಳಿಂದ ಶುಲ್ಕ ಪಡೆಯುತ್ತದೆ.

‘ಮುಂಬರುವ ದಿನಗಳಲ್ಲಿ ಇನ್ನೂ ಕೆಲ ಹೊಸ ಸೇವೆಗಳನ್ನು ಆರಂಭಿಸಲು, ಇತರ ನಗರಗಳಿಗೂ ಸೇವೆ ವಿಸ್ತರಿಸಲು ಅಫೊರ್ಡ್‌ಪ್ಲ್ಯಾನ್‌ ಉದ್ದೇಶಿಸಿದೆ. ಸದ್ಯಕ್ಕೆ ಬೆಂಗಳೂರು, ದೆಹಲಿ, ಮುಂಬೈ, ಪುಣೆ ಸೇರಿದಂತೆ 5 ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೇವೆ ಪಡೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ’ ಎಂದೂ ಆದಿತ್ಯ ಶರ್ಮಾ ಹೇಳುತ್ತಾರೆ.

  • 800 ದೇಶದಾದ್ಯಂತ ಇರುವ ಆಸ್ಪತ್ರೆಗಳ ಸಹಭಾಗಿತ್ವ
  • 5 ಬೆಂಗಳೂರು ಸೇರಿದಂತೆ ಸೇವೆ ಲಭ್ಯ ಇರುವ ಮಹಾನಗರಗಳು
  • 50ಕ್ಕೂ ಬೆಂಗಳೂರಿನಲ್ಲಿನ ಆಸ್ಪತ್ರೆಗಳ ಸಂಖ್ಯೆ
  • 4 ಲಕ್ಷ ಇದುವರೆಗೆ ಪ್ರಯೋಜನ ಪಡೆದುಕೊಂಡವರ ಸಂಖ್ಯೆ

ಕೆಲಸ ಮಾಡುವ ಪರಿ

ಯೋಜಿತ ವೈದ್ಯಕೀಯ ಚಿಕಿತ್ಸೆಗೆ ಪೂರಕವಾಗಿ ಕಂತುಗಳಲ್ಲಿ ಸಣ್ಣ ಮೊತ್ತವನ್ನು ಉಳಿತಾಯ ಮಾಡಲು ಅನುವು ಮಾಡಿಕೊಡುತ್ತದೆ. ಚಿಕಿತ್ಸೆ ಪಡೆಯುವವರು ಆಸ್ಪತ್ರೆಯಲ್ಲಿ ವ್ಯವಸ್ಥಿತವಾಗಿ ಹಣ ಉಳಿತಾಯ ಮಾಡುವ ವಿಶಿಷ್ಟ ಸೌಲಭ್ಯ ಇದಾಗಿದೆ. ಇದೊಂದು ವಿಮೆ ಸೌಲಭ್ಯವಲ್ಲ, ಸಾಲವೂ ಅಲ್ಲ. ಚಿಕಿತ್ಸೆ ಪಡೆಯುವ ನಿರ್ದಿಷ್ಟ ಆಸ್ಪತ್ರೆಯಲ್ಲಿ ಕಂತುಗಳ ರೂಪದಲ್ಲಿ ಹಣ ಠೇವಣಿ ಇರಿಸಬೇಕಾಗುತ್ತದೆ. ಇದು ವ್ಯಕ್ತಿಗಳ ಆರೋಗ್ಯ ರಕ್ಷಣೆಯ ಅಗತ್ಯಗಳನ್ನು ಈಡೇರಿಸುವುದಲ್ಲದೆ ವೈದ್ಯಕೀಯ ವೆಚ್ಚವನ್ನು ಸುಲಭವಾಗಿ ಭರಿಸಲೂ ನೆರವಾಗಲಿದೆ.

ಭವಿಷ್ಯದ ವೈದ್ಯಕೀಯ ವೆಚ್ಚಗಳಿಗೆ ಇಂದು ಉಳಿಸಿ – ನಾಳೆ ಪಾವತಿಸಿ ತತ್ವದಡಿ ಈ ಉಳಿತಾಯ ಯೋಜನೆ ಕಾರ್ಯನಿರ್ವಹಿಸುತ್ತದೆ. ಅಮೆಜಾನ್‌, ಡೊಯಿಚ್‌ ಬ್ಯಾಂಕ್‌ ಮತ್ತಿತರ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ತೇಜಬಿರ್‌ ಸಿಂಗ್‌ ಮತ್ತು ಇಂದೋರ್‌ನ ಐಐಎಂನಲ್ಲಿ ಮ್ಯಾನೇಜ್‌ಮೆಂಟ್‌ ಪದವಿ ಪಡೆದಿರುವ ಸೇನೆಯ ಮಾಜಿ ಕ್ಯಾಪ್ಟನ್‌ ಆಗಿರುವ ಹೇಮಲ್‌ ಭಟ್‌ ಅವರು ಈ ನವೋದ್ಯಮದ ಸಹಸ್ಥಾಪಕರಾಗಿದ್ದಾರೆ.

ಪ್ರಯೋಜನಗಳೇನು?

  • ಚಿಕಿತ್ಸೆ ಪಡೆಯುವವರ ವೈದ್ಯಕೀಯ ವೆಚ್ಚದ ಹೊರೆ ತಗ್ಗಿಸುತ್ತದೆ
  • ಸುಲಭ ಮತ್ತು ಕೈಗೆಟುಕುವ ದರದ ಚಿಕಿತ್ಸಾ ಸೌಲಭ್ಯ
  • ದಿನ, ವಾರ ಮತ್ತು ತಿಂಗಳ ಲೆಕ್ಕದಲ್ಲಿ ಉಳಿತಾಯಕ್ಕೆ ಅವಕಾಶ
  • ಅನುಕೂಲಕ್ಕೆ ತಕ್ಕಂತೆ ಕಂತು ಪಾವತಿ ಸೌಲಭ್ಯ
  • ಕಾಯಿಲೆ ಪತ್ತೆ, ವೈದ್ಯಕೀಯ ವೆಚ್ಚದಲ್ಲಿ ಕಡಿತದ ಪ್ರಯೋಜನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು