ಮಂಗಳವಾರ, ಮಾರ್ಚ್ 31, 2020
19 °C
ವಿಶಿಷ್ಟ ಪರಿಕಲ್ಪನೆಯ ಸ್ಟಾರ್ಟ್‌ಅಪ್‌ ‘ರೆಹಮೊ’

ವೈದ್ಯಕೀಯ ಪರಿಕರಗಳ ಸ್ಟಾರ್ಟ್‌ಅಪ್ ‘ರೆಹಮೊ’

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Deccan Herald

ಗಂಭೀರ ಸ್ವರೂಪದ ಚಿಕಿತ್ಸೆ ಪಡೆದು ಮನೆಗೆ ಮರಳಿದವರು ತ್ವರಿತವಾಗಿ ಗುಣಮುಖರಾಗಲು, ವಯೋಸಹಜ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಂದ ಬಳಲುವ ವಯೋವೃದ್ಧರನ್ನು ಜೋಪಾನವಾಗಿ ನೋಡಿಕೊಳ್ಳಲು, ಅಂಗವಿಕಲರೂ ಇತರರಂತೆ ಸಹಜ ರೀತಿಯಲ್ಲಿ ಬದುಕಲು ಮತ್ತು ವಿಶೇಷ ಗಮನ ಹರಿಸಬೇಕಾದ ಚಿಣ್ಣರ ಆರೈಕೆಗೆ ವೈವಿಧ್ಯಮಯ ವೈದ್ಯಕೀಯ ಉಪಕರಣಗಳು ನೆರವಿಗೆ ಬರುತ್ತವೆ. ಕುಟುಂಬದ ಸದಸ್ಯರಿಗಾಗಿ ಇಂತಹ ಪರಿಕರಗಳನ್ನು ಖರೀದಿಸುವವರಿಗೆ ಮಾತ್ರ ಮಾರುಕಟ್ಟೆಯಲ್ಲಿ ಇಂತಹ ಬಹೂಪಯೋಗಿ ಪರಿಕರಗಳ ಲಭ್ಯತೆ  ಮತ್ತು ಅವುಗಳನ್ನು ಬಳಸುವುದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ವೈದ್ಯರ ಸಲಹೆ ಮೇರೆಗೆ ಯಾವುದನ್ನು ಖರೀದಿಸಿದರೆ ಹೆಚ್ಚು ಉಪಯುಕ್ತ ಎನ್ನುವ ಗೊಂದಲವೂ ಅನೇಕರನ್ನು ಕಾಡುತ್ತದೆ. ಇಂತಹ ಸಲಕರಣೆಗಳ ಮಾರುಕಟ್ಟೆಯೂ ಸಂಘಟಿತ ಸ್ವರೂಪದಲ್ಲಿ ಇಲ್ಲ. ಅಂತಹ ದೊಡ್ಡ ಕೊರತೆಯನ್ನು ಬೆಂಗಳೂರಿನ ‘ರೆಹಮೊ’ ಸ್ಟಾರ್ಟ್‌ಅಪ್‌ ದೂರ ಮಾಡಿದೆ. ರಿಹ್ಯಾಬ್‌ ಆ್ಯಂಡ್‌ ಮೊಬಿಲಿಟಿಯು ‘ರೆಹಮೊ’ದ ಮೂಲ ಉದ್ದೇಶವಾಗಿದೆ.

ವೈದ್ಯಕೀಯ ಪರಿಕರಗಳ ಶಿಕ್ಷಣ ಕೇಂದ್ರವಾಗಿಯೂ ಇದು ಕಾರ್ಯನಿರ್ವಹಿಸಲಿದೆ. ವೈದ್ಯಕೀಯ ಪರಿಕರಗಳ ಸಗಟು ಮಾರಾಟ ಸಂಸ್ಥೆ ಪ್ರಜ್ವಲ್‌ ಹೆಲ್ತ್‌ ಕೇರ್‌ನ ಸುನಿಲ್‌ ಬಫ್ನಾ ಮತ್ತು  ದೀಪಕ್‌ ಬಫ್ನಾ ಅವರು ಮತ್ತು ಅನಿವಾಸಿ ಭಾರತೀಯ ಪ್ರಜ್ಞೇಶ್‌ ಶಾ ಅವರ ಜತೆಗೂಡಿ ರೆಹಮೊ (Rehamo) ನವೋದ್ಯಮ ಸ್ಥಾಪಿಸಿದ್ದಾರೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಈ ನವೋದ್ಯಮವು, ಕಾಯಿಲೆಪೀಡಿತರು ಮನೆಯಲ್ಲಿಯೇ ತ್ವರಿತವಾಗಿ ಚೇತರಿಸಿಕೊಳ್ಳಲು ನೆರವಾಗುವ ವೈದ್ಯಕೀಯ ಪರಿಕರಗಳನ್ನೆಲ್ಲ ಒಂದೆ ಚಾವಣಿಯಡಿ ಒದಗಿಸುತ್ತಿದೆ. ಕಾಯಿಲೆಪೀಡಿತರು, ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಬಗೆಯ ಸಮಸ್ಯೆಗಳಿಂದ ಬಳಲುವವರೂ ಆರೋಗ್ಯವಂತರಂತೆ ಸಹಜವಾಗಿ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಇಲ್ಲಿಯ ಪರಿಕರಗಳು ನೆರವಾಗುತ್ತವೆ.

ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರು, ಹಲವು ಬಗೆಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುವವರು ತ್ವರಿತವಾಗಿ ಚೇತರಿಸಿಕೊಳ್ಳಲೂ ಇವುಗಳನ್ನು ಬಳಸಬಹುದು. ಬಳಕೆದಾರರ ಅಗತ್ಯಗಳನ್ನೆಲ್ಲ ಸಕಾಲದಲ್ಲಿ ಒದಗಿಸಲು ‘ರೆಹಮೊ’ ನೆರವಾಗುತ್ತಿದೆ. ಪರಿಕರಗಳ ಬಳಕೆ ಬಗ್ಗೆ ಪರಿಣತ ಸಿಬ್ಬಂದಿ ಅಗತ್ಯ ಮಾಹಿತಿ ಮತ್ತು ತರಬೇತಿಯನ್ನೂ ನೀಡುತ್ತದೆ. ಇಲ್ಲಿ ಲಭ್ಯ ಇರುವ ಪರಿಕರಗಳ ಬೆಲೆ ₹4 ಸಾವಿರದಿಂದ ₹ 4 ಲಕ್ಷದವರೆಗೆ ಇದೆ.

ಇಂತಹ ವೈದ್ಯಕೀಯ ಪರಿಕರಗಳಿಗೆ ದೇಶದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಅವುಗಳ ಸಾಂಪ್ರದಾಯಿಕ ಮಾರಾಟ ಬದಲಿಸುವ ಮತ್ತು ಬಳಕೆದಾರರಿಗೆ ಉಪಯುಕ್ತವಾಗುವ ರೀತಿಯಲ್ಲಿ ವಹಿವಾಟು ವಿಸ್ತರಿಸುವ ಉದ್ದೇಶದಿಂದ ಈ ಸ್ಟಾರ್ಟ್‌ಅಪ್‌ ಸ್ಥಾಪಿಸಲಾಗಿದೆ.
‘ರೆಹಮೊ’ ಷೋರೂಂಗೆ ಭೇಟಿ ಕೊಟ್ಟವರು ತಮ್ಮ ಅಗತ್ಯಗಳಿಗೆ ತಕ್ಕಂತೆ ಸೂಕ್ತ ಪರಿಕರ ಖರೀದಿಸಬಹುದು. ಇಲ್ಲಿ ವೈದ್ಯಕೀಯ ಉಪಕರಣಗಳ ಎಲ್ಲ ಜನಪ್ರಿಯ ಬ್ರ್ಯಾಂಡ್‌ಗಳ ಸರಕುಗಳು ಮಾರಾಟಕ್ಕೆ ಇವೆ. ಬಹುಬಗೆಯ ಆಯ್ಕೆಗಳಿವೆ. ಗ್ರಾಹಕರು ತಮ್ಮ ಬಜೆಟ್‌, ಅಗತ್ಯಗಳಿಗೆ ತಕ್ಕಂತೆ ಖರೀದಿಸಬಹುದು.

ಕೆಲ ದಿನಗಳ ಮಟ್ಟಿಗೆ ಮಾತ್ರ ಬಾಡಿಗೆಗೆ ಮಾತ್ರ ಬೇಕು ಎಂದರೂ ‘ರೆಹಮೊ’ ಅಂತಹ ಅಗತ್ಯಗಳನ್ನು ಈಡೇರಿಸುತ್ತದೆ. ಆಸ್ಪತ್ರೆಗಳು ಗಂಟೆ, ದಿನಗಳ ಲೆಕ್ಕದಲ್ಲಿ ವಿಧಿಸುವ ದುಬಾರಿ ಶುಲ್ಕಕ್ಕಿಂತ ತುಂಬ ಕಡಿಮೆ ದರದಲ್ಲಿ ಪರಿಕರಗಳನ್ನು ಇಲ್ಲಿ ಬಾಡಿಗೆಗೆ ಪಡೆಯಬಹುದು.

ಗ್ರಾಹಕರು ‘ರೆಹಮೊ’ ಮಳಿಗೆಗೆ ಬಂದರೆ, ಅವರ ಅಗತ್ಯಗಳನ್ನು ತಿಳಿದುಕೊಂಡು ಯಾವ ಪರಿಕರ ಖರೀದಿಸಬೇಕು ಎಂದು ಅವರಿಗೆ ಮಾರ್ಗದರ್ಶನ ಮಾಡಲಾಗುವುದು. ಖರೀದಿ ಆಯ್ಕೆಯನ್ನು ಗ್ರಾಹಕರಿಗೆ ಬಿಡಲಾಗಿರುತ್ತದೆ. ಇಂತಹದ್ದೇ ಪರಿಕರ ಖರೀದಿಸಬೇಕು ಎಂದು ಒತ್ತಾಯವನ್ನೇನೂ ಮಾಡುವುದಿಲ್ಲ ಎಂದು ಸಹ ಸ್ಥಾಪಕ ಸುನಿಲ್‌ ಬಾಫ್ನಾ ಅವರು ಹೇಳುತ್ತಾರೆ.

‘ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಂತಹ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಆಸ್ಪತ್ರೆ ಮತ್ತು ವೈದ್ಯರಿಂದಲೂ ಇಂತಹ ಅಪರೂಪದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸುವ ಮತ್ತು ಕಾಯಿಲೆಗಳಿಂದ ಚೇತರಿಸಿಕೊಳ್ಳಲು ನೆರವಾಗುವ ಪರಿಕರಗಳೂ ಇಲ್ಲಿರುವುದು ಇದರ ಇನ್ನೊಂದು ವಿಶೇಷತೆಯಾಗಿದೆ. ವಿಶ್ವದ 8 ಅತ್ಯುತ್ತಮ ಸಂಸ್ಥೆಗಳ 4,600 ಬಗೆಯ ಸರಕುಗಳು ಇಲ್ಲಿ ಲಭ್ಯ ಇವೆ. ಹಾಸಿಗೆ ಹಿಡಿದ ಕಾಯಿಲೆ ಪೀಡಿತರೂ ಶೀಘ್ರ ಗುಣಮುಖರಾಗಲು ‘ರೆಹಮೊ’ದ ವೈವಿಧ್ಯಮಯ ಪರಿಕರಗಳು ನೆರವಾಗುತ್ತವೆ’ ಎಂದು ಸಲಹೆಗಾರ ಪ್ರಜ್ಞೇಶ್ ಶಾ ಹೇಳುತ್ತಾರೆ.

ರೋಗಿಗಳ ನೋವನ್ನು ತ್ವರಿತವಾಗಿ ಶಮನ ಮಾಡಲು ನೆರವಾಗುವ ಉದ್ದೇಶದಿಂದಲೇ ‘ರೆಹೆಮೊ’ಗೆ ಚಾಲನೆ ನೀಡಲಾಗಿದೆ. ‘ರೆಹಮೊ’ದ ಮಳಿಗೆಗಳನ್ನು ಬೆಂಗಳೂರಿನಲ್ಲಿ ವಿಸ್ತರಣೆ ಮಾಡಿದ ನಂತರ ರಾಜ್ಯದ ಇತರ ನಗರಗಳಾದ ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲಿಯೂ ವಹಿವಾಟು ವಿಸ್ತರಿಸುವ ಉದ್ದೇಶ ಇದೆ.ಕಾಯಿಲೆಪೀಡಿತರಲ್ಲಿ ಚೈತನ್ಯ ಮೂಡಿಸುವುದು ಮತ್ತು ಇತರರಂತೆ ಸಹಜವಾಗಿ ಬದುಕಲು ನೆರವಾಗುವ ಸದುದ್ದೇಶವು ಈ ‘ರೆಹಮೊ’ (rehab and mobility) ಪರಿಕಲ್ಪನೆಯ ಹಿಂದೆ ಇದೆ. ಈ ನವೋದ್ಯಮಕ್ಕೆ ಉತ್ತಮ ಸ್ಪಂದನ ಸಿಕ್ಕಿದೆ. ಫ್ರಾಂಚೈಸಿ ಮಾದರಿಯಲ್ಲಿ ವಹಿವಾಟು ವಿಸ್ತರಣೆ ಮಾಡಲು ಉದ್ದೇಶಿಸಿದೆ. ವೈದ್ಯಕೀಯ ಲೋಕದಲ್ಲಿಯೂ ಈ ಪರಿಕಲ್ಪನೆಗೆ ಶ್ಲಾಘನೆ ವ್ಯಕ್ತವಾಗಿದೆ. ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ, ವೆಂಟಲೇಟರ್‌ ಸೌಲಭ್ಯಕ್ಕೆ ದುಬಾರಿ ಶುಲ್ಕ ವಸೂಲಿ ಮಾಡಿದರೆ, ರೆಹಮೊ– ತಿಂಗಳ ಲೆಕ್ಕದಲ್ಲಿ (₹ 3,000) ಕಡಿಮೆ ದರಕ್ಕೆ ಇವುಗಳನ್ನು ಒದಗಿಸುತ್ತದೆ. ಗಾಲಿ ಖುರ್ಚಿಗಳೂ ಬಾಡಿಗೆಗೆ (₹ 700) ದೊರೆಯುತ್ತವೆ. ಇದರಿಂದ ಮನೆಯಲ್ಲಿ ಚಿಕಿತ್ಸೆ ಮುಂದುವರೆಸುವ ವೈದ್ಯಕೀಯ ವೆಚ್ಚವೂ ಕಡಿಮೆಯಾಗಲಿದೆ.
ಕಾಯಿಲೆಪೀಡಿತರಿಗೆ ಕೊನೆಗಾಲ ದಲ್ಲಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಮಾಡಿ ಚಿಕಿತ್ಸೆ ಮುಂದುವರೆಸುವ ಅಗತ್ಯ ಇಲ್ಲದ ಸಂದರ್ಭದಲ್ಲಿ ಮನೆಗೆ ಕರೆತಂದು ಜೋಪಾನವಾಗಿ ನೋಡಿಕೊಳ್ಳಲು ನೆರವಾಗುವ ವೈದ್ಯಕೀಯ ಉಪಕರಣಗಳೆಲ್ಲ ಇಲ್ಲಿ ದೊರೆಯಲಿವೆ.

ದುಡ್ಡು ಇದ್ದವರು ಬಾಡಿಗೆ ಬದಲಿಗೆ ಪರಿಕರ ಖರೀದಿಸುತ್ತಾರೆ. ಬಳಕೆ ಮುಗಿದ ನಂತರ ಧರ್ಮಾರ್ಥವಾಗಿ ಅಗತ್ಯ ಇದ್ದವರಿಗೆ ನೀಡುತ್ತಾರೆ. ಬಾಡಿಗೆ ಪರಿಕರಗಳ ಮರು ಬಳಕೆ ಸಂದರ್ಭದಲ್ಲಿ ಸಂಪೂರ್ಣವಾಗಿ ಬ್ಯಾಕ್ಟಿರಿಯಾ ಮುಕ್ತಗೊಳಿಸಿಯೇ (ಸ್ಟೆರಲೈಸ್‌) ನೀಡಲಾಗುವುದು. ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆಗೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದೂ ಪ್ರಜ್ಞೇಶ್‌ ಹೇಳುತ್ತಾರೆ.

ಆರೋಗ್ಯ ರಕ್ಷಣೆ ಮಾರುಕಟ್ಟೆ: 2022ರ ವೇಳೆಗೆ ದೇಶಿ ಆರೋಗ್ಯ ರಕ್ಷಣೆ ಮಾರುಕಟ್ಟೆಯು  ₹ 26.78 ಲಕ್ಷ ಕೋಟಿಗೆ ತಲುಪಲಿದೆ. ವೈದ್ಯಕೀಯ ಪರಿಕರಗಳ ಮಾರುಕಟ್ಟೆಯೂ ₹ 79,200 ಕೋಟಿಗಳಿಗೆ ತಲುಪಲಿದೆ.

ವೃದ್ಧರ ಸಂಖ್ಯೆಯಲ್ಲಿನ ಹೆಚ್ಚಳ, ಬದಲಾದ ಜೀವನಶೈಲಿ ಮತ್ತು ಮರುಕಳಿಸುವ ಕಾಯಿಲೆಗಳ ಕಾರಣಕ್ಕೆ ಮಾರುಕಟ್ಟೆ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. ವೈದ್ಯಕೀಯ ಪರಿಕರಗಳ ಮಾರುಕಟ್ಟೆಯಲ್ಲಿ ಶೇ 75ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಮಾಹಿತಿಗೆ https://www.rehamo.com/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.


ರೆಹಮೊದ ಸಲಹೆಗಾರ ಪ್ರಜ್ಞೇಶ್‌ ಶಾ ಮತ್ತು ಸಹ ಸ್ಥಾಪಕ  ಸುನಿಲ್‌ ಬಫ್ನಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)