ಮಂಗಳವಾರ, ಮಾರ್ಚ್ 31, 2020
19 °C

‘ಸಂಡೆ’ ಸ್ಟಾರ್ಟ್‌ಅಪ್‌ ಯಶಸ್ಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೆ ಮ್ಯಾಟ್ರೆಸ್‌

ತಂ ತ್ರಜ್ಞಾನವು ಈಗ ಬದುಕಿನ ಎಲ್ಲ ಹಂತಗಳಲ್ಲಿಯೂ ತನ್ನ ಪ್ರಭಾವ ಬೀರುತ್ತಿದೆ. ಸುಖಕರ ನಿದ್ದೆಗೆ ನೆರವಾಗುವ ಹಾಸಿಗೆ ದಿಂಬುಗಳ ತಯಾರಿಕೆಯಲ್ಲಿಯೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈ ಉತ್ಪನ್ನಗಳ ತಯಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೇ ನೆಚ್ಚಿಕೊಂಡಿರುವ ಬೆಂಗಳೂರಿನ ನವೋದ್ಯಮ ‘ಸಂಡೆ’, ವಹಿವಾಟಿನ ಆರಂಭದಿಂದಲೂ ಲಾಭದಾಯಕವಾಗಿ ಮುನ್ನಡೆದಿದೆ. ಬಿಟ್ಸ್‌ ಪಿಲಾನಿಯ ಪದವೀಧರ ಮತ್ತು ಫ್ರಾನ್ಸ್‌ನ ಇನ್‌ಸೀಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿ ಎಂಬಿಎ ಪೂರ್ಣಗೊಳಿಸಿದ ಅಲ್ಫೋನ್ಸ್‌ ರೆಡ್ಡಿ (38) ಈ ಸ್ಟಾರ್ಟ್‌ಅಪ್‌ನ ಸ್ಥಾಪಕರಾಗಿದ್ದಾರೆ. ಈ ನವೋದ್ಯಮದಲ್ಲಿನ ಇವರ ಆರಂಭಿಕ ಹೂಡಿಕೆ ₹ 40 ಲಕ್ಷ. 2015ರಲ್ಲಿ ಆರಂಭಿಸಿದ್ದ ಉದ್ದಿಮೆಯು ಮೊದಲಿನಿಂದಲೂ ಲಾಭದಾಯಕವಾಗಿಯೇ ನಡೆಯುತ್ತಿದೆ. ಈಗ ₹ 1 ಕೋಟಿಯಷ್ಟು ಲಾಭ ಮಾಡಿ ವಹಿವಾಟನ್ನು ವಿಸ್ತರಿಸಲು ಮುಂದಾಗಿದೆ.

ಆಂಧ್ರಪ್ರದೇಶದ ಮದನಪಲ್ಲಿಯವರಾದ ಅಲ್ಫೋನ್ಸ್‌ ರೆಡ್ಡಿ ಅವರು, ಇಂಗ್ಲೆಂಡ್‌ ಮತ್ತು ಅಮೆರಿಕದಲ್ಲಿ ಕೆಲ ವರ್ಷ ಕೆಲಸ ನಿರ್ವಹಿಸಿದ ನಂತರ 2011ರಲ್ಲಿ ಭಾರತಕ್ಕೆ ಮರಳಿದ್ದರು. ರಿಟೇಲ್‌ ಕ್ಷೇತ್ರದಲ್ಲಿ ಹೊಸ ಉದ್ದಿಮೆ ಆರಂಭಿಸುವ ಕನಸು ಅವರದಾಗಿತ್ತು. ಮದನಪಲ್ಲಿ ರಿಟೇಲ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಸಣ್ಣ ಪಟ್ಟಣಗಳಲ್ಲಿ ಚಿಲ್ಲರೆ ವಹಿವಾಟು ಆರಂಭಿಸಿದ್ದರು. ಬೆಂಗಳೂರಿನ ಅಪಾರ್ಟ್‌ಮೆಂಟ್‌ ಖರೀದಿಸಿ  ಮನೆಗೆ ಹಾಸಿಗೆ – ದಿಂಬು ಖರೀದಿಸಿದಾಗ ಅವರಿಗೆ ಯಾವುದೇ ಬ್ರ್ಯಾಂಡ್‌ನ ಉತ್ಪನ್ನಗಳು ಸರಿ ಹೋಗಲಿಲ್ಲ.

ಮೂರ್ನಾಲ್ಕು ಹಾಸಿಗೆ ಬದಲಿಸಿದರೂ ಸರಿಯಾಗಿ ನಿದ್ದೆ ಬರದೆ ಹೋದಾಗ, ತಮ್ಮಂತೆಯೇ ಇದೇ ಬಗೆಯಲ್ಲಿ ಸಮಸ್ಯೆ ಎದುರಿಸುವವರಿಗೆ ನೆರವಾಗಲು ತಂತ್ರಜ್ಞಾನ ಆಧಾರಿತ ಹಾಸಿಗೆ ಉತ್ಪನ್ನಗಳ ವಹಿವಾಟಿನ ನವೋದ್ಯಮ ಸ್ಥಾಪಿಸಬಾರದೇಕೆ ಎನ್ನುವ ಆಲೋಚನೆ ಅವರಿಗೆ ಹೊಳೆದಿತ್ತು. ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿದ್ದರು. ತಮ್ಮ ಉದ್ದೇಶ ಕಾರ್ಯಗತಗೊಳಿಸಲು ಜಪಾನಿನ ವಿನ್ಯಾಸಕಿ ಹಿರೊಕೊ ಶಿರತೊರಿ ಅವರ ನೆರವು ಪಡೆದರು. ಬೆಲ್ಜಿಯಂನ ಮ್ಯಾಟ್ರೆಸ್‌ ತಯಾರಿಕಾ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಎರಡು ವರ್ಷಗಳ ಹಿಂದೆ ವಹಿವಾಟು ಆರಂಭಿಸಿದರು.

ಹಾಸಿಗೆ – ದಿಂಬುಗಳ ಮಾರುಕಟ್ಟೆಯಲ್ಲಿ ಮಾರಾಟಗಾರ ಮತ್ತು ಖರೀದಿದಾರ ಮಧ್ಯೆ ದೊಡ್ಡ ಅಂತರ ಇರುವುದನ್ನು ಮನಗಂಡ ಅವರು, ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದರು. ಮಾರುಕಟ್ಟೆಯಲ್ಲಿ ಇರುವ ಬ್ರ್ಯಾಂಡ್‌ಗಳ ನೂರಾರು ವಿಭಿನ್ನ ಮಾದರಿಗಳ ಆಯ್ಕೆಯಲ್ಲಿ ಬಳಕೆದಾರರಿಗೆ ಸೂಕ್ತವಾಗಿ ಮಾರ್ಗದರ್ಶನ ನೀಡುವ ವ್ಯವಸ್ಥೆಯೇ ಇಲ್ಲದಿರುವುದು ಅವರ ಗಮನಕ್ಕೆ ಬಂದಿತ್ತು.

‘ಮ್ಯಾಟ್ರೆಸ್‌ಗಳ ಮಳಿಗೆಗೆ ಬರುವ ಶ್ರೀಮಂತ, ಮಧ್ಯಮ ವರ್ಗ ಮತ್ತು ಬಜೆಟ್‌ ಗ್ರಾಹಕರ ಖರೀದಿ ಸಾಮರ್ಥ್ಯ ಅಂದಾಜಿಸುವ ವಿತರಕರು ಅದಕ್ಕೆ ತಕ್ಕಂತೆ ಉತ್ಪನ್ನಗಳನ್ನು ಪರಿಚಯಿಸುತ್ತಾರೆ. ಅವರಿಗೆ ಖರೀದಿದಾರರ ಅಗತ್ಯಗಳು ಮುಖ್ಯವಾಗಿರುವುದಿಲ್ಲ. ಲಾಭವೇ ಮುಖ್ಯವಾಗಿರುತ್ತದೆ’ ಎಂದು ಅಲ್ಫೋನ್ಸ್‌ ಹೇಳುತ್ತಾರೆ.

ಮಾರಾಟಗಾರ ಮತ್ತು ಖರೀದಿದಾರರ ಮಧ್ಯೆ ಇರುವ ಈ ಅಂತರವನ್ನು ತಗ್ಗಿಸಿದರೆ, ಈ ವಹಿವಾಟಿನಲ್ಲಿ ಖಂಡಿತವಾಗಿಯೂ ಲಾಭ ಇದೆ ಎನ್ನುವುದನ್ನು ಮನಗಂಡರು. ಇದಕ್ಕೆಲ್ಲ ಹೊಸ ರೂಪ ಕೊಡುವ ಉದ್ದೇಶದಿಂದ ‘ಸಂಡೆ’ ಹೆಸರಿನ ನವೋದ್ಯಮ ಸ್ಥಾಪಿಸಿದರು.

‘ಒಂದು ಬಾರಿ ಖರೀದಿಸಿದ ಮೇಲೆ ಅದನ್ನು ಮರಳಿಸಲು ಅವಕಾಶ ಇರದ ಕಾರಣಕ್ಕೆ ಬಳಕೆದಾರರು ಅನಿವಾರ್ಯವಾಗಿ ಅವುಗಳನ್ನೇ ಬಳಸುವುದನ್ನು ರೂಢಿ ಮಾಡಿಕೊಳ್ಳುತ್ತಾರೆ. ಬಹುತೇಕರಲ್ಲಿ ಕಂಡುಬರುವ ಬೆನ್ನು ನೋವಿಗೆ ಪರಿಹಾರವೂ ಸಿಗಲಾರದ ಬೇಸರ ಅವರಲ್ಲಿ ಮನೆ ಮಾಡಿರುತ್ತದೆ. ಬೆಲೆ ವಿಷಯದಲ್ಲಿಯೂ ಪಾರದರ್ಶಕತೆ ಇರುವುದಿಲ್ಲ’ ಎಂದು ಅವರು ಹೇಳುತ್ತಾರೆ.

ಇಂತಹ ಸಮಸ್ಯೆಗಳು ಇರುವ ಮ್ಯಾಟ್ರೆಸ್‌ ಮಾರುಕಟ್ಟೆಯಲ್ಲಿ, ತಂತ್ರಜ್ಞಾನ ಆಧರಿಸಿದ ಗುಣಮಟ್ಟದ ಉತ್ಪನ್ನ, 100 ದಿನಗಳಲ್ಲಿ ಮರಳಿಸುವ ಅವಕಾಶ, ಖರೀದಿಗೆ ಪಾವತಿಸಿದ ಹಣ ಪೂರ್ತಿಯಾಗಿ ಮರಳಿಸುವ ವಾಗ್ದಾನ, ಮನೆ ಬಾಗಿಲಿಗೆ ಸರಕು ತಲುಪಿಸುವ, ಮರಳಿಸುವ ಉತ್ಪನ್ನವನ್ನು ಸಂಸ್ಥೆಯೇ ಮರಳಿ ತೆಗೆದುಕೊಂಡು ಹೋಗುವ ಸೌಲಭ್ಯವು ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಬಳಕೆದಾರರಿಗೆ ಸೂಕ್ತವಾಗಿ ಹೊಂದಾಣಿಕೆಯಾಗದ ಹಾಸಿಗೆ – ದಿಂಬುಗಳನ್ನು ಮರಳಿಸುವ ಆಯ್ಕೆ ಸ್ವಾತಂತ್ರ್ಯ ನೀಡಿದರೆ ಗ್ರಾಹಕ ಖಂಡಿತವಾಗಿಯೂ ಸಂತಸಪಡುತ್ತಾನೆ. ಅದರಿಂದ ವಹಿವಾಟೂ ಹೆಚ್ಚುತ್ತದೆ ಎನ್ನುವ ಮಾರಾಟ ತಂತ್ರ ಅನುಸರಿಸಿ ಇವರು ಯಶಸ್ವಿಯಾಗಿದ್ದಾರೆ.

ಪ್ರತಿಯೊಬ್ಬರೂ ಒತ್ತಡ ಮುಕ್ತ 8 ಗಂಟೆಗಳ ಕಾಲ ಸುಖ ನಿದ್ದೆ ಮಾಡಲು ಹಾಸಿಗೆ – ದಿಂಬುಗಳೂ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎನ್ನುವುದು ಅವರ ಅಭಿಮತವಾಗಿದೆ. ಜನರು ಹೆಚ್ಚು ಸಮಯವನ್ನು ಸುಖನಿದ್ದೆಯಲ್ಲಿ ಕಳೆಯಬೇಕು ಎನ್ನುವ ಆಶಯ ಸಾಕಾರಗೊಳಿಸುವ ಹಾಸಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದಿಮೆಗೆ ಕೈಹಾಕಿ ಯಶಸ್ವಿಯಾಗಿದ್ದಾರೆ.

‘ವಿಶ್ವದ ಅತಿ ದೊಡ್ಡ ಮ್ಯಾಟ್ರೆಕ್ಸ್‌ ತಯಾರಿಕಾ ಸಂಸ್ಥೆಯಾಗಿರುವ ಬೆಲ್ಜಿಯಂನ ಲೇಟೆಕ್ಸ್‌ ಮ್ಯಾಟ್ರೆಸ್‌ನ ಸಹಯೋಗದಲ್ಲಿ ಎರಡು ವರ್ಷಗಳ ಹಿಂದೆ ಈ ಉತ್ಪನ್ನಗಳನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಬೇಸಿಗೆಯಲ್ಲಿಯೂ ಹಾಸಿಗೆಯು ದೇಹ ತಂಪಾಗಿಡಲು ನೆರವಾಗುವಂತೆ ಇರುವುದಕ್ಕೆ ಈ ತಂತ್ರಜ್ಞಾನದಲ್ಲಿ ಆದ್ಯತೆ ನೀಡಲಾಗಿದೆ. ಅನೇಕರಲ್ಲಿ ಸಾಮಾನ್ಯವಾಗಿ ಕಂಡು ಬರುವ ಬೆನ್ನು ನೋವಿಗೆ ಉಪಶಮನಕಾರಿಯಾದ ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಾಣಿಕೆಯಾಗುವ ಉತ್ಪನ್ನಗಳನ್ನು 15 ತಿಂಗಳ ಸಂಶೋಧನೆ ನಂತರ ಅಭಿವೃದ್ಧಿಪಡಿಸಲಾಗಿದೆ’ ಎಂದು ಅವರು ಹೇಳುತ್ತಾರೆ.

‘ಇತರ ಬ್ರ್ಯಾಂಡ್‌ಗಳಲ್ಲಿ ಹಾಸಿಗೆ – ದಿಂಬುಗಳ ಮಾರುಕಟ್ಟೆಯಲ್ಲಿ ಅಸಂಖ್ಯ ಮಾದರಿಗಳಿದ್ದರೆ, ಸಂಡೆ ಮ್ಯಾಟ್ರೆಸ್‌ನಲ್ಲಿ ಮೂರ್ನಾಲ್ಕು ಮಾದರಿಗಳು ಮಾತ್ರ ಇವೆ. ಈ ಉತ್ಪನ್ನಗಳು ಯುರೋಪ್‌ನ ನಿಯಂತ್ರಣ ಕ್ರಮಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ. ಯುರೋಪ್‌ನ ನಿಯಂತ್ರಣ ಕ್ರಮಗಳು ಅಮೆರಿಕಕ್ಕಿಂತ ಕಠಿಣವಾಗಿವೆ. ಜಾಗತಿಕ ಗುಣಮಟ್ಟದ 3 ಮಾದರಿಗಳನ್ನು ಮಾತ್ರ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗ್ರಾಹಕರಿಗೆ ಮನೆ ಬಾಗಿಲಿಗೆ ನೇರ ಪೂರೈಕೆ ಇದರ ಇನ್ನೊಂದು ವಿಶೇಷತೆಯಾಗಿದೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ಬೆಲೆಯೂ ಶೇ 30ರಿಂದ ಶೇ 40ರಷ್ಟು ಅಗ್ಗವಾಗಿದೆ. ಮೂರು ತಿಂಗಳ ಕಾಲ ಬಳಸಿದ ನಂತರವೂ (100 ರಾತ್ರಿ) ಇಷ್ಟವಾಗದಿದ್ದರೆ ಹಾಸಿಗೆ ಮರಳಿಸುವ ಸೌಲಭ್ಯ ಕಲ್ಪಿಸಿದ ದೇಶದ ಮೊದಲ ಸಂಸ್ಥೆ ಇದಾಗಿದೆ’ ಎಂದು ಅವರು ಹೇಳುತ್ತಾರೆ.

(ಸಂಡೆ ಮ್ಯಾಟ್ರೆಸ್‌ನ ಸಿಇಒ ಅಲ್ಫೋನ್ಸ್‌ ರೆಡ್ಡಿ)

ನವೋದ್ಯಮಗಳು ಆರಂಭದ ದಿನಗಳಲ್ಲಿ ವಹಿವಾಟಿನ ಸ್ಥಿರತೆ ಸಾಧಿಸಲು ಹೆಣಗಾಡುತ್ತವೆ. ಲಾಭದ ಹಾದಿಗೆ ಮರಳಲು ತುಂಬ ಕಷ್ಟಪಡಬೇಕಾಗುತ್ತದೆ. ಆರಂಭದ ದಿನದಿಂದಲೂ ಲಾಭದಾಯಕವಾಗಿ ನಡೆಯುತ್ತಿರುವುದು ಈ ಸ್ಟಾರ್ಟ್‌ಅಪ್‌ನ ಇನ್ನೊಂದು ವಿಶೇಷತೆಯಾಗಿದೆ. ಮಾರಾಟವಾದ ಸರಕಿನಲ್ಲಿ ಇದುವರೆಗೆ ಶೇ 4 ರಿಂದ 5 ಮಾತ್ರ ವಾಪಸ್‌ ಬಂದಿವೆ. ಮೂರು ತಿಂಗಳ ಬಳಕೆ ನಂತರ ಮರಳಿಸುವ ಸೌಲಭ್ಯವನ್ನು ಬಳಕೆದಾರರು ದುರ್ಬಳಕೆ ಮಾಡಿಕೊಂಡ ಪ್ರಮಾಣ ಇಲ್ಲವೇ ಇಲ್ಲ ಎನ್ನಬಹುದು. ಸಂಸ್ಥೆಯ ಉತ್ಪನ್ನಗಳಿಗೆ ಗ್ರಾಹಕರು ನೀಡುವ ಮನ್ನಣೆಗೆ ಇದು ಕನ್ನಡಿ ಹಿಡಿಯುತ್ತದೆ. ವಿನೂತನ ಬಗೆಯ ಮಾರಾಟ ತಂತ್ರ ಅನುಸರಿಸುತ್ತಿರುವ ಸಂಸ್ಥೆಯ ವಹಿವಾಟಿನ ಯಶಸ್ಸಿಗೆ ಗ್ರಾಹಕರ ವಿಶ್ವಾಸವೇ ಮುಖ್ಯವಾಗಿದೆ. ಎರಡು ವರ್ಷಗಳಲ್ಲಿ ₹ 1 ಕೋಟಿ ಲಾಭ ಮಾಡಿದೆ. ದೇಶದಾದ್ಯಂತ ಮಾರುಕಟ್ಟೆ ವಿಸ್ತರಿಸಲಾಗಿದೆ.

‘ಆರಂಭದಲ್ಲಿ ತಂತ್ರಜ್ಞಾನ ನೆರವಿನಿಂದ, ಸಾಮಾಜಿಕ ಮಾಧ್ಯಮ, ಫೇಸ್‌ಬುಕ್‌, ಗೂಗಲ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಚಾರದ ಮೂಲಕ ಗ್ರಾಹಕರಿಗೆ ಉತ್ಪನ್ನ ಪರಿಚಯಿಸಲಾಗಿತ್ತು. ಪ್ರಮುಖ ಕೊರಿಯರ್‌ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಸರಕನ್ನು ಗ್ರಾಹಕರ ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ. ಹೊಸೂರು ಮತ್ತು ಕೊಯಿಮತ್ತೂರ್‌ನಲ್ಲಿ ಇರುವ ಘಟಕಗಳಲ್ಲಿ ಉತ್ಪನ್ನಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಕಟ್ಟುನಿಟ್ಟಾಗಿ ಗುಣಮಟ್ಟ ಪರೀಕ್ಷಿಸಿದ ನಂತರವೇ ಪೂರೈಕೆ ಮಾಡಲಾಗುತ್ತಿದೆ. ಸಂಸ್ಥೆಯ ಉತ್ಪನ್ನಗಳಿಗೆ ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿದೆ. ಹೊಸ ಸಂಗತಿಗಳನ್ನು ಕುತೂಹಲದಿಂದ ಸ್ವಾಗತಿಸುವ ಬೆಂಗಳೂರಿನ ಜನತೆಯ ಪ್ರವೃತ್ತಿಯೂ ತಮ್ಮ ನವೋದ್ಯಮದಯ ಯಶಸ್ಸಿಗೆ ಕಾರಣ’ ಎಂದು ಅವರು ಹೇಳುತ್ತಾರೆ.

ತಂತ್ರಜ್ಞಾನ ನೆರವಿನಿಂದ ವಹಿವಾಟಿನ ವೆಚ್ಚದಲ್ಲಿ ಉಳಿತಾಯ ಮಾಡಲಾಗುತ್ತಿದೆ. ವಹಿವಾಟಿನ ಎಲ್ಲ ಹಂತಗಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆ ಆಗುತ್ತಿದೆ. ಎಲ್ಲವನ್ನೂ ಸ್ವಯಂಚಾಲಿತಗೊಳಿಸಲಾಗಿದೆ. ಸಂಡೆ ಎನ್ನುವುದು ಎಲ್ಲರ ದಿನಚರಿಯಲ್ಲಿ ಬಿಡುವಿನ ದಿನ. ಕೆಲಸದ ಧಾವಂತಕ್ಕೆ ವಿರಾಮ ಇರುವ ದಿನ. ಹೀಗಾಗಿ ಅದನ್ನೇ ತಮ್ಮ ನವೋದ್ಯಮಕ್ಕೆ ಬಳಸಿರುವುದಾಗಿ ಹೇಳುತ್ತಾರೆ. ಭಾನುವಾರದ ಆರಾಮ, ವಿಶ್ರಾಂತಿಯ ಮನೋಭವವು ಸಂಡೆ ಉತ್ಪನ್ನಗಳನ್ನು ಬಳಸುವವರಲ್ಲಿ ವಾರದ ಎಲ್ಲ ದಿನವೂ ಕಾಣುವಂತಿರಬೇಕು ಎನ್ನುವುದು ಅವರ ಆಶಯವಾಗಿದೆ.

‘ಉತ್ಪನ್ನವೇ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿದೆ. ಬಳಕೆದಾರರ ಬಾಯಿಂದ ಬಾಯಿಗೆ ದೊರೆತ ಪ್ರಚಾರವೇ ಮಾರುಕಟ್ಟೆ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ’ ಎಂದೂ ಅವರು ಹೇಳುತ್ತಾರೆ. ಮಾಹಿತಿಗೆ www.sundayrest.com

ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)