ಮುಂಬೈ: ದೇಶದ ಷೇರುಪೇಟೆಗಳಲ್ಲಿ ಬುಧವಾರವೂ ಗೂಳಿ ಓಟ ಮುಂದುವರಿಯಿತು. ಎಫ್‌ಎಂಸಿಜಿ ಮತ್ತು ಹೆಲ್ತ್‌ಕೇರ್ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 102 ಅಂಶ ಏರಿಕೆಯಾಗಿ 80,905 ಅಂಶಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 71 ಅಂಶ ಏರಿಕೆ ಕಂಡು, 24,770 ಅಂಶಗಳಲ್ಲಿ ಸ್ಥಿರಗೊಂಡಿತು.
ಅಲ್ಟ್ರಾಟೆಕ್ ಸಿಮೆಂಟ್, ಟೆಕ್ ಮಹೀಂದ್ರ, ಟಾಟಾ ಸ್ಟೀಲ್, ಪವರ್ ಗ್ರಿಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್‌ನ ಷೇರಿನ ಮೌಲ್ಯ ಕುಸಿದಿದೆ.
ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,457 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹2,252 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.