ಬೆಂಗಳೂರು: ದೇಶದ ಷೇರುಪೇಟೆಗಳ ಮಾರುಕಟ್ಟೆ ಮೌಲ್ಯವು ಸದ್ಯ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಲಾಭ ಗಳಿಕೆಯ ವಹಿವಾಟು ನಡೆಯುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಗಳಲ್ಲಿ ಲಾಭ ಮಾಡಿಕೊಳ್ಳುವುದರತ್ತ ಗಮನ ಹರಿಸಿದ್ದಾರೆ. ಹೀಗಾಗಿ ಮೂರು ತಿಂಗಳ ಬಳಿಕ ಆಗಸ್ಟ್ ತಿಂಗಳಿನಲ್ಲಿ ಷೇರುಗಳನ್ನು ಮಾರಾಟ ಮಾಡಲು ಗಮನ ಹರಿಸುತ್ತಿದ್ದಾರೆ. ಆಗಸ್ಟ್ 1ರಿಂದ 11ರವರೆಗೆ ನಡೆದಿರುವ ವಹಿವಾಟಿನಲ್ಲಿ ₹7,543 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಅಮೆರಿಕದ ಡಾಲರ್ ಮೌಲ್ಯ ವೃದ್ಧಿಯಾಗಿದೆ ಹಾಗೂ 10 ವರ್ಷದ ಬಾಂಡ್ ಗಳಿಕೆಯು ಶೇ 4ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇದೆ. ಈ ಅಂಶಗಳು ಅಲ್ಪಾವಧಿಯಲ್ಲಿ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಎಫ್‌ಪಿಐ ಹೂಡಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿವೆ ಎಂದು ಅವರು ಹೇಳಿದ್ದಾರೆ.
ಮೂರು ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಗೂಳಿ ಓಟ ಜೋರಾಗಿತ್ತು. ಹೀಗಾಗಿ ವಿದೇಶಿ ಹೂಡಿಕೆದಾರರು ಲಾಭ ಮಾಡಿಕೊಳ್ಳುವುದರತ್ತ ಹೆಚ್ಚಿನ ಆಸಕ್ತಿ ತೋರುವುದನ್ನು ನಿರೀಕ್ಷೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ನಿಫ್ಟಿಯಲ್ಲಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ. ವಾರದ ವಹಿವಾಟಿನಲ್ಲಿ ಐ.ಟಿ., ಲೋಹ ಮತ್ತು ಸ್ಪಲ್ಪ ಮಟ್ಟಿಗೆ ಇಂಧನ ವಲಯವು ಸ್ಥಿರತೆ ಕಾಯ್ದುಕೊಂಡಿವೆ. ಆದರೆ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ಎಫ್‌ಎಂಸಿಜಿ ಷೇರುಗಳ ಮೌಲ್ಯ ಕಡಿಮೆ ಆಗಿದ್ದರಿಂದ ನಿಫ್ಟಿ ಇಳಿಕೆ ಕಾಣುವಂತಾಯಿತು ಎಂದು ಪ್ರಭುದಾಸ್ ಲೀಲಾಧರ್ ಬ್ರೋಕರೇಜ್ ಸಂಸ್ಥೆಯ ಮುಖ್ಯ ಸಲಹೆಗಾರ ವಿಕ್ರಂ ಕಾಸಟ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.