ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರು ಪೇಟೆ: ಸೆನ್ಸೆಕ್ಸ್‌ 1,272 ಅಂಶ ಕುಸಿತ

Published : 30 ಸೆಪ್ಟೆಂಬರ್ 2024, 13:53 IST
Last Updated : 30 ಸೆಪ್ಟೆಂಬರ್ 2024, 13:53 IST
ಫಾಲೋ ಮಾಡಿ
Comments

ಮುಂಬೈ: ಬ್ಯಾಂಕಿಂಗ್‌, ಹಣಕಾಸು ಮತ್ತು ಆಟೊ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸೋಮವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಶೇ 1.5ರಷ್ಟು ಕುಸಿದಿವೆ.

ಲಾಭ ಗಳಿಕೆಗಾಗಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದು, ವಿದೇಶಿ ಬಂಡವಾಳದ ಹೊರಹರಿವು, ಮಧ್ಯಪ್ರಾಚ್ಯ ಬಿಕ್ಕಟ್ಟು, ಜಪಾನ್‌ನಲ್ಲಿ ಬಡ್ಡಿ ದರ ಮತ್ತೆ ಹೆಚ್ಚಳವಾಗುವ ಸಾಧ್ಯತೆ, ವಿದೇಶದ ಮಾರುಕಟ್ಟೆಗಳ ನಕಾರಾತ್ಮಕ ವಹಿವಾಟು ದೇಶದ ಷೇರುಪೇಟೆಯ ಮೇಲೆ ಪರಿಣಾಮ ಬೀರಿತು. ಇದರಿಂದ ಷೇರು ಸೂಚ್ಯಂಕಗಳು ಇಳಿಕೆಯಾಗಿವೆ.

ಷೇರು ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹3.57 ಲಕ್ಷ ಕೋಟಿ ಕರಗಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹474 ಲಕ್ಷ ಕೋಟಿ ಆಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 1,272 ಅಂಶ (ಶೇ 1.49) ಕುಸಿದು, 84,299ಕ್ಕೆ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 368 ಅಂಶ (ಶೇ 1.53) ಇಳಿಕೆಯಾಗಿ 25,810ಕ್ಕೆ ಸ್ಥಿರಗೊಂಡಿತು.

ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ ಷೇರಿನ ಮೌಲ್ಯ ಶೇ 3ಕ್ಕೂ ಹೆಚ್ಚು ಕಡಿಮೆಯಾಗಿದೆ. ಐಸಿಐಸಿಐ ಬ್ಯಾಂಕ್‌, ಟೆಕ್‌ ಮಹೀಂದ್ರ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಮಾರುತಿ ಸುಜುಕಿ, ಬಜಾಜ್‌ ಫಿನ್‌ಸರ್ವ್‌, ಎಸ್‌ಬಿಐ ಮತ್ತು ಟಾಟಾ ಮೋಟರ್ಸ್‌ನ ಷೇರಿನ ಮೌಲ್ಯ ಇಳಿಕೆಯಾಗಿದೆ.

ಜೆಎಸ್‌ಡಬ್ಲ್ಯು ಸ್ಟೀಲ್‌, ಎನ್‌ಟಿಪಿಸಿ, ಟಾಟಾ ಸ್ಟೀಲ್‌, ಟೈಟನ್‌ ಮತ್ತು ಏಷ್ಯನ್‌ ಪೇಂಟ್ಸ್‌ ಗಳಿಕೆ ಕಂಡಿವೆ. ಏಷ್ಯಾ ಮಾರುಕಟ್ಟೆಯಲ್ಲಿ ಸೋಲ್‌ ಮತ್ತು ಟೋಕಿಯೊ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿದ್ದರೆ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಸಕಾರಾತ್ಮಕ ವಹಿವಾಟು ನಡೆಸಿವೆ. 

ಜಪಾನ್‌ನ ನಿಕೇಯ್ ಸೂಚ್ಯಂಕ ಶೇ 5ರಷ್ಟು ಇಳಿಕೆಯಾಗಿದೆ. ಜಾಗತಿಕ ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಶೇ 0.19ರಷ್ಟು ಇಳಿಕೆಯಾಗಿ, 71.84 ಡಾಲರ್‌ (₹6,019) ಆಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ನಡೆದ ವಹಿವಾಟಿನಲ್ಲಿ ₹1,209 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT