ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಕ್ಯಾಂಟೀನ್‌ಗಳಿಗೆ ಅವಕಾಶವಿಲ್ಲ

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹೆಚ್ಚುವರಿ ಚುನಾವಣಾ ಆಯುಕ್ತ ಜಗದೀಶ ಅಭಿಮತ
Last Updated 29 ಮಾರ್ಚ್ 2018, 5:40 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಯಡಿ ನಡೆಯುವ ಕ್ಯಾಂಟೀನ್‌ ಗಳನ್ನು ಹೊರತುಪಡಿಸಿ ಬೇರೆ ಯಾರಾದರೂ ರಿಯಾಯಿತಿ ದರದಲ್ಲಿ ಕ್ಯಾಂಟಿನ್ ನಡೆಸುವವರು ರಾಜಕೀಯ ಪಕ್ಷಕ್ಕೆ ಸಂಬಂಧಿಸಿದಲ್ಲಿ ಅಂತವುಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವಂತೆ ಹೆಚ್ಚುವರಿ ಚುನಾವಣಾ ಆಯುಕ್ತ ಜಗದೀಶ ಹೇಳಿದರು.

ಬುಧವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ‘ಅನಧಿಕೃತ ಎಂದು ಕಂಡು ಬಂದ ಕ್ಯಾಂಟೀನ್‌ಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳಬೇಕು’ ಎಂದರು.

ರಾಜಕೀಯ ಪಕ್ಷಗಳಿಗೆ ಸಂಬಂಧಿ ಸಿದ ಪೋಟೋಗಳು ಜಿಲ್ಲೆಯಲ್ಲಿ ಕಾಣಬಾರದು. ಪೇಯ್ಡ್ ನ್ಯೂಸ್, ಪತ್ರಿಕಾ ಜಾಹೀರಾತು, ಬ್ಯಾನರ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಯಿತು.

‘ಅಧಿಕ ಮೊತ್ತದ ನಗದು ತೆಗೆದುಕೊಂಡು ಹೋಗುವಾಗ ಅದಕ್ಕೆ ಸಂಬಂಧಿಸಿದ ದಾಖಲೆ ಇಟ್ಟು ಕೊಳ್ಳುವುದು ಕಡ್ಡಾಯವಾಗಿದೆ. ನೀತಿ ಸಂಹಿತೆ ಜಾರಿಯಾದ ಮೇಲೆ ಸರ್ಕಾರದಿಂದ ಯಾವುದೇ ಯೋಜನೆ, ಕಾರ್ಯಕ್ರಮ, ವಿನಾಯಿತಿ, ಭರವಸೆ ಹಾಗೂ ಯಾವುದೇ ರೀತಿಯ ಘೋಷಣೆ ಹಾಗೂ ಶಂಕುಸ್ಥಾಪನೆ ಮಾಡುವಂತಿಲ್ಲ’ ಎಂದರು.

‘ರಾಷ್ಟ್ರೀಯ, ಪ್ರಾದೇಶಿಕ ಹಾಗೂ ರಾಜ್ಯದ ಜನೋಪಯೋಗಿ ಯೋಜನೆಗಳು, ಮುಕ್ತಾಯ ಹಂತದ ಯೋಜನೆಗಳು, ಸಾರ್ವಜನಿಕ ಹಿತಾಸಕ್ತಿ ಯೋಜನೆಗಳಲ್ಲಿ ಅಧಿಕಾರಿಗಳು ಪಾಲ್ಗೊಳ್ಳಬಹುದೇ ವಿನಾ ರಾಜಕಾರಣಿಗಳು ಭಾಗವಹಿಸುವಂತಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿದ ಹಾಗೂ ನೀತಿ ಸಂಹಿತೆ ಜಾರಿಗೆ ಮುನ್ನ ಘೋಷಣೆಯಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತಡೆ ಇಲ್ಲ. ಆದರೆ ಅದು ಮತದಾರರನ್ನು ಸೆಳೆಯುವ ಉದ್ದೇಶದಿಂದ ಕೈಗೊಂಡಿದ್ದಾಗಿರ ಬಾರದು’ ಎಂದು ತಿಳಿಸಿದರು.

‘ಹೊಸದಾಗಿ ಸರ್ಕಾರಿ ಯೋಜನೆ ಗಳಿಗೆ ಅನುದಾನ ನೀಡುವಂತಿಲ್ಲ. ಈಗಾಗಲೇ ಆರಂಭಗೊಂಡ ಕೆಲಸಕ್ಕೆ ಅಡ್ಡಿ ಇಲ್ಲ. ಅಧಿಕಾರಿಗಳ ವರ್ಗಾವಣೆ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ. ಕೇಂದ್ರ ಅಥವಾ ರಾಜ್ಯ ಸಚಿವರು ಚುನಾವಣೆ ಕರ್ತವ್ಯನಿರತ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಲು ಅವಕಾಶವಿಲ್ಲ. ಸಚಿವರಿಗೆ ನೀಡಿದ ವಾಹನವನ್ನು ಅಧಿಕೃತ ನಿವಾಸ ಹಾಗೂ ಕಚೇರಿ ಮಧ್ಯದ ಪ್ರಯಾಣಕ್ಕೆ ಮಾತ್ರ ಬಳಸಬೇಕು. ರಾಜಕೀಯ ಚಟುವಟಿಕೆಗೆ ಬಳಸಲು ಅವಕಾಶವಿಲ್ಲ’ ಎಂದು ತಿಳಿಸಲಾಯಿತು.

‘ಚುನಾವಣಾ ರ‍್ಯಾಲಿ ಮತ್ತು ಚುನಾವಣೆಗೆ ಸಂಬಂಧವಿಲ್ಲದ ಮದುವೆ, ಸಮಾರಂಭ, ವಾಹನಗಳಿಗೆ, ಮೈದಾನ ಬಳಕೆ, ಬ್ಯಾನರ್ ಕಟ್ಟುವ ಸಲುವಾಗಿ ಹಾಗೂ ಧ್ವನಿವರ್ಧಕ ಸೇರಿದಂತೆ ಇತರೆ ವ್ಯವಸ್ಥೆ ಪಡೆಯಲು ಏಕ ಗವಾಕ್ಷಿ ಪದ್ಧತಿ ಮೂಲಕ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

ವಿಡಿಯೊ ಸಂವಾದದಲ್ಲಿ ಜಿಲ್ಲಾ ಧಿಕಾರಿ ಕೆ.ಜಿ.ಶಾಂತಾರಾಮ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಸೇರಿದಂತೆ ವಿವಿಧ ಸಮಿತಿಗೆ ನೇಮಕಗೊಂಡ ನೋಡಲ್ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT