ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯ ಏರಿಳಿತದ ಹಾದಿ ನಿರೀಕ್ಷಿತ

Last Updated 27 ಜನವರಿ 2019, 20:15 IST
ಅಕ್ಷರ ಗಾತ್ರ

ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಕೆಲ ವಾರಗಳಿಂದ ಷೇರು ಮಾರುಕಟ್ಟೆಯಲ್ಲಿ ತೀವ್ರತರವಾದ ಏರಿಳಿತ ಕಂಡು ಬರುತ್ತಿದೆ. ಕಳೆದ ವಾರವೂ ಷೇರು ಮಾರುಕಟ್ಟೆ ಬೆಳವಣಿಗೆಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸಿದೆ. ಪರಿಣಾಮ ವಾರಾಂತ್ಯಕ್ಕೆ ಸೆನ್ಸೆಕ್ಸ್ ಶೇ 0.99 ರಷ್ಟು (36,025) ಇಳಿಕೆ ದಾಖಲಿಸಿದ್ದರೆ, ನಿಫ್ಟಿ ಶೇ 1.15 ರಷ್ಟು(10,780) ಕುಸಿದಿದೆ.

ಫೆಬ್ರವರಿ 1 ರಂದು ಮಂಡನೆಯಾಗಲಿರುವ ಮಧ್ಯಂತರ ಬಜೆಟ್ , ಈಗಾಗಲೇ ಪ್ರಕಟಗೊಂಡಿರುವ ತ್ರೈಮಾಸಿಕ ವರದಿಗಳು ಮತ್ತು ಬಾಹ್ಯ ಬೆಳವಣಿಗೆಗಳು ಕಳೆದ ವಾರದ ಪೇಟೆಯ ಒಟ್ಟಾರೆ ಫಲಿತಾಂಶದ ಮೇಲೆ ಪ್ರಭಾವ ಬೀರಿವೆ. ಮಾರುಕಟ್ಟೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವ ವರೆಗೂ ಮುಂದುವರಿಯಲಿದೆ.

ಪ್ರಮುಖ ಬೆಳವಣಿಗೆ: ಮಾರುತಿಯ ಲಾಭಾಂಶ ತ್ರೈಮಾಸಿಕ ಸಾಧನೆಯಲ್ಲಿ ಶೇ 17 ರಷ್ಟು ಕುಸಿದಿದೆ. ಡಿಸೆಂಬರ್‌ಗೆ ಕೊನೆಯಾದ ತ್ರೈಮಾಸಿಕದಲ್ಲಿ ಕಂಪನಿ ₹ 1,489 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರುತಿ ₹ 1,799 ಕೋಟಿ ನಿವ್ವಳ ಲಾಭ ಗಳಿಸಿತ್ತು. ಪರಿಣಾಮ ವಾರದ ಅವಧಿಯಲ್ಲಿ ಷೇರುಗಳು ನಿಫ್ಟಿ (50) ಯಲ್ಲಿ ಶೇ 11.57 ರಷ್ಟು ಕುಸಿತ ಕಂಡಿವೆ.

ಝೀ ಮತ್ತು ಎಸ್ಸೆಲ್ ಗ್ರೂಪ್‌ನ ಇತರೆ ಕಂಪನಿಗಳು ದೊಡ್ಡ ಪ್ರಮಾಣದ ನಗದು ವಹಿವಾಟು ನಡೆಸಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡಿದ ಪರಿಣಾಮ ಕಂಪನಿಯ ಷೇರುಗಳು ಶೇ 30.73 ರ ಭಾರಿ ಕುಸಿತ ದಾಖಲಿಸಿದವು.ಯೆಸ್ ಬ್ಯಾಂಕ್ ಅಧ್ಯಕರಾಗಿ ರವ್ನೀತ್ ಗಿಲ್ ನೇಮಕಗೊಂಡಿದ್ದಾರೆ. ಇದರ ಪರಿಣಾಮ ಕಂಪನಿಯ ಷೇರುಗಳು ವಾರದ ಅವಧಿಯಲ್ಲಿ ಶೇ 10.67 ರಷ್ಟು ಏರಿಕೆ ದಾಖಲಿಸಿವೆ.‌

ಇಂಡಿಯನ್ ಬ್ಯಾಂಕ್‌ನ ನಿವ್ವಳ ಲಾಭ ₹ 152.26 ಕೋಟಿ ಗೆ ಇಳಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದಾಗ ವರಮಾನ ಶೇ 50 ರಷ್ಟು ಕುಸಿತ ಕಂಡಿದೆ. ಪರಿಣಾಮ ಕಂಪನಿಯ ಷೇರುಗಳು ಶೇ 7 ರಷ್ಟು ಕುಸಿತ ದಾಖಲಿಸಿವೆ.

ಲಾರ್ಸನ್ ಆ್ಯಂಡ್‌ ಟುಬ್ರೊ (ಎಲ್ ಆ್ಯಂಡ್‌ ಟಿ) ಕಂಪನಿಯ ₹ 9 ಸಾವಿರ ಕೋಟಿ ಮೊತ್ತದ ಷೇರುಗಳ ಮರು ಖರೀದಿ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿರಾಕರಿಸಿದೆ.

ದೇಶದ ಅತಿ ದೊಡ್ಡ ಟೆಲಿಕಾಂ ಅಪರೇಟರ್ ವೊಡಾಫೋನ್‌ ಐಡಿಯಾ ಕಂಪನಿಯು ₹ 25 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದು ₹ 7,500 ಕೋಟಿಗಳನ್ನು ಸಾರ್ವಜನಿಕ ಹೂಡಿಕೆಯ ಮೂಲಕ ಪಡೆದುಕೊಳ್ಳಲು ಚಿಂತಿಸಿದೆ.

ಮುನ್ನೋಟ:ವಿತ್ತೀಯ ಕೊರತೆ ದತ್ತಾಂಶ ಬಿಡುಗಡೆ, ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ವಾರ್ಷಿಕ ಅಂದಾಜು, ಮಧ್ಯಂತರ ಬಜೆಟ್ ಸೇರಿ ಈ ವಾರ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ.

ಆಕ್ಸಿಸ್, ಬಜಾಜ್ ಫೈನಾನ್ಸ್ , ಎಚ್‌ಸಿಎಲ್, ಎಚ್‌ಡಿಎಫ್‌ಸಿ ಲಿಮಿಟೆಡ್, ಇಂಡಿಯನ್ ಆಯಿಲ್, ಐಸಿಐಸಿಐ ಬ್ಯಾಂಕ್, ಹಿರೋ, ಬಜಾಜ್ ಆಟೊ, ಬಜಾಜ್ ಫಿನ್ ಸರ್ವ್, ಎನ್‌ಟಿಪಿಸಿ, ಏರ್‌ಟೆಲ್‌, ಪವರ್ ಗ್ರಿಡ್, ಎಸ್‌ಬಿಐ , ಡಾ. ರೆಡ್ಡಿಸ್, ಟೈಟಾನ್ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸುತ್ತಿವೆ. ಈ ಎಲ್ಲ ವಿದ್ಯಮಾನಗಳಿಗೆ ಪೇಟೆ ಪ್ರತಿಕ್ರಿಯಿಸಲಿದೆ.

ಸರ್ಕಾರಿ ಬಾಂಡ್‌ಗಳ ಜನವರಿ ತಿಂಗಳ ವಾಯಿದಾ ವಹಿವಾಟು ಗುರುವಾರ ಅಂತ್ಯವಾಗಲಿದೆ. ಹೀಗಾಗಿ ಚಂಚಲ ವಹಿವಾಟು ನಿರೀಕ್ಷಿಸಬಹುದು. ಶುಕ್ರವಾರ ತಯಾರಿಕಾ ವಲಯದ ಪಿಎಂಐ ಅಂಕಿ–ಅಂಶ ಹೊರಬೀಳಲಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್ ರಿಸರ್ವ್‌ ಇದೇ 29 ಮತ್ತು 30ರಂದು ಸಭೆ ಸೇರಲಿದ್ದು, ಬಡ್ಡಿದರ ಪರಾಮರ್ಶೆ ನಡೆಸಲಿದೆ. ಬಡ್ಡಿದರ ಏರಿಕೆಯಾದಲ್ಲಿ ಹೂಡಿಕೆದಾರರಿಗೆ ಬಂಡವಾಳ ಲಭ್ಯತೆ ಪ್ರಮಾಣ ಕಡಿಮೆಯಾಗಲಿದೆ. ಈ ಬೆಳವಣಿಗೆಗಳು ಭಾರತದ ಬಂಡವಾಳ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT