ಭಾನುವಾರ, ಆಗಸ್ಟ್ 18, 2019
23 °C

ಪ್ರವಾಹ ಪರಿಸ್ಥಿತಿಯಲ್ಲಿ ವಿಮೆ ಕ್ಲೇಮ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Published:
Updated:

ಕರ್ನಾಟಕದ ಹಲವು ಭಾಗಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಪ್ರಾಣ ಹಾನಿಯ ಜತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗೂ ನಷ್ಟ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಜೀವ ವಿಮೆ, ವಾಹನ ವಿಮೆ ಮತ್ತು ಗೃಹ ವಿಮೆಯ ಕ್ಲೇಮ್ ಪಡೆದುಕೊಳ್ಳುವುದು ಹೇಗೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

ಇನ್ಶುರೆನ್ಸ್ ಕಂಪನಿಗೆ ಮಾಹಿತಿ ಮುಟ್ಟಿಸಿ: ಜೀವ ವಿಮೆ, ವಾಹನ ವಿಮೆ ಅಥವಾ ಗೃಹ ವಿಮೆ ಸೇರಿದಂತೆ ಇನ್ಯಾವುದೇ ವಿಮೆಯ ಕ್ಲೇಮ್ ಪಡೆಯಬೇಕಾದರೆ ಮೊದಲು ಇನ್ಶುರೆನ್ಸ್ ಕಂಪನಿಗೆ ಮಾಹಿತಿ ಮುಟ್ಟಿಸಿ. ಅಸಲಿ ದಾಖಲೆಗಳಿಲ್ಲ ಎನ್ನುವ ಕಾರಣಕ್ಕೆ ವಿಳಂಬ ಮಾಡಬೇಡಿ. ಇ-ಮೇಲ್ ಮೂಲಕ , ಪೋಸ್ಟ್ ಮೂಲಕ, ನಿಮ್ಮ ಇನ್ಶುರೆನ್ಸ್ ಏಜೆಂಟ್ ಮೂಲಕ ಅಥವಾ ಇನ್ಶುರೆನ್ಸ್ ಕಂಪನಿಯ ಟೋಲ್ ಫ್ರೀ ನಂಬರ್ ಬಳಸಿಕೊಂಡು ವಿಮೆ ಕಂಪನಿಗೆ ನಿಮಗಾಗಿರುವ ನಷ್ಟದ ಬಗ್ಗೆ ವಿಷಯ ಮುಟ್ಟಿಸಿ. ಅಸಲಿ ದಾಖಲೆಗಳು ಪ್ರವಾಹದ ಪರಿಸ್ಥಿತಿಯಿಂದ ಕಳೆದುಹೋಗಿದ್ದ ಪಕ್ಷದಲ್ಲಿ ಇನ್ಶುರೆನ್ಸ್ ಕಂಪನಿಗೆ ಈ ಬಗ್ಗೆ ತಿಳಿಸಿ.

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ 7 ರಿಂದ 20 ದಿನಗಳ ಒಳಗಾಗಿ ಇನ್ಶುರೆನ್ಸ್ ಕ್ಲೇಮ್ ಸಾಧ್ಯವಾಗುತ್ತದೆ.

ಜೀವ ವಿಮೆ ಕ್ಲೇಮ್‌ಗೆ ಬೇಕಾಗುವ ದಾಖಲೆಗಳು: ಸಾವನ್ನಪ್ಪಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ, ನಾಮಿನಿಯ ಗುರುತಿನ ಚೀಟಿ ಮತ್ತು ವಿಳಾಸದ ದಾಖಲೆ ಹಾಗೂ ಹಣ ಸಂದಾಯಕ್ಕೆ ನಾಮಿನಿಯ ಬ್ಯಾಂಕ್ ಪಾಸ್ ಬುಕ್ ಅಥವಾ ಕ್ಯಾನ್ಸಲ್ಡ್ ಚೆಕ್ ಬೇಕಾಗುತ್ತದೆ.

ಆರೋಗ್ಯ ವಿಮೆ ಕ್ಲೇಮ್‌ಗೆ ಅಗತ್ಯ ದಾಖಲೆಗಳು: ಇನ್ಶುರೆನ್ಸ್ ಹೊಂದಿರುವ ವ್ಯಕ್ತಿಯ ಗುರುತಿನ ಚೀಟಿ ಮತ್ತು ವಿಳಾಸದ ದಾಖಲೆ, ಆಸ್ಪತ್ರೆ ವೆಚ್ಚದ ಬಿಲ್ ಗಳು ಮತ್ತು ನಿರ್ದಿಷ್ಟ ವ್ಯಕ್ತಿಯ ಡಿಸ್ಚಾರ್ಜ್ ವಿವರ ಮತ್ತು ಹಣ ಸಂದಾಯಕ್ಕೆ ವಿಮೆ ಹೊಂದಿರುವ ವ್ಯಕ್ತಿಯ ಬ್ಯಾಂಕ್ ಪಾಸ್ ಬುಕ್ ಅಥವಾ ಕ್ಯಾನ್ಸಲ್ಡ್ ಚೆಕ್ ಅಗತ್ಯ.

ಕಾರು ಜಲಾವೃತವಾಗಿದ್ದರೆ ಎಂಜಿನ್ ಸ್ಟಾರ್ಟ್ ಮಾಡಬೇಡಿ: ಕಾರು ಪ್ರವಾಹದಲ್ಲಿ ಸಿಲುಕಿದ್ದರೆ ಯಾವುದೇ ಕಾರಣಕ್ಕೂ ಎಂಜಿನ್ ಸ್ಟಾರ್ಟ್ ಮಾಡಬೇಡಿ. ಕೂಡಲೇ ಈ ಬಗ್ಗೆ ನಿಮ್ಮ ಕಾರು ಕಂಪನಿಯ ಅಧಿಕೃತ ಸೇವಾ ಕೇಂದ್ರ ಮತ್ತು ಇನ್ಶುರೆನ್ಸ್ ಕಂಪನಿಗೆ ಮಾಹಿತಿ ನೀಡಿ. ಕಾರು ಮುಳುಗಡೆಯಿಂದ ಉಂಟಾಗಿರುವ ನಷ್ಟವನ್ನು ಕಾಂಪ್ರಹೆನ್ಸಿವ್ (ಸಮಗ್ರ) ಕಾರ್ ಇನ್ಶುರೆನ್ಸ್ ಭರಿಸುತ್ತದೆ. ಆದರೆ, ಮುಳುಗಡೆಯಾಗಿರುವ ಕಾರ್‌ನ ಎಂಜಿನ್  ಸ್ಟಾರ್ಟ್ ಮಾಡಲು ಹೋಗಿ ತೊಂದರೆಯಾದರೆ ಅದಕ್ಕೆ ಇನ್ಶುರೆನ್ಸ್ ಕಂಪನಿ ಕವರೇಜ್ ನೀಡುವುದಿಲ್ಲ. ಈ ಬಗ್ಗೆ ಇನ್ಶುರೆನ್ಸ್ ಪಾಲಿಸಿ ದಾಖಲೆಯಲ್ಲಿ ಕೂಡ ಮಾಹಿತಿ ನೀಡಲಾಗಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸಿ.

ಗೃಹ ವಿಮೆ ಕ್ಲೇಮ್ ಹೇಗೆ?: ಕಳ್ಳತನದ ಪ್ರಕರಣ ಗಳಲ್ಲಿರುವಂತೆ, ಪ್ರವಾಹದಿಂದ ಉಂಟಾದ ನಷ್ಟಕ್ಕೆ ಕ್ಲೇಮ್ ಪಡೆದುಕೊಳ್ಳಲು ಗೃಹ ವಿಮೆ ಹೊಂದಿರುವ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲೆ ಪಡೆದುಕೊಳ್ಳುವ ಅಗತ್ಯ ಇರುವುದಿಲ್ಲ. ಮನೆಗೆ ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಇನ್ಶುರೆನ್ಸ್ ಕಂಪನಿಯ ಗಮನಕ್ಕೆ ತಂದರೆ ಸಾಕು. ಇನ್ಶುರೆನ್ಸ್ ಕ್ಲೇಮ್ ಪ್ರಕ್ರಿಯೆಯನ್ನು ಮುಂದುವರಿಸಬಹುದು.

ಗೃಹ ವಿಮೆ ಕ್ಲೇಮ್ ಪಡೆಯಲು ವಿಮೆ ಹೊಂದಿರುವ ವ್ಯಕ್ತಿಯ ಪ್ಯಾನ್ ಕಾರ್ಡ್ ನಂಬರ್, ವಯಸ್ಸು ಮತ್ತು ವಿಳಾಸದ ಗುರುತಿನ ಚೀಟಿಯೊಂದಿಗೆ ಮನೆಗೆ ಉಂಟಾಗಿರುವ ನಷ್ಟದ ವಿವರವನ್ನು ನಮೂದಿಸಿ ಇನ್ಶುರೆನ್ಸ್ ಕಂಪನಿಗೆ ಸಲ್ಲಿಸಬೇಕು. ಗೃಹ ವಿಮೆಯ ದಾಖಲೆಗಳು ಸಿಗದಿದ್ದಲ್ಲಿ ಇನ್ಶುರೆನ್ಸ್ ಕಂಪನಿಗೆ ಮನವಿ ಸಲ್ಲಿಸಿ ಅದನ್ನು ಪಡೆಯಬಹುದು. ನಂತರದಲ್ಲಿ ಸ್ಥಳ ಪರಿಶೀಲನೆ ಮಾಡಿ ಇನ್ಶುರೆನ್ಸ್ ಕಂಪನಿಯ ಪ್ರತಿನಿಧಿಗಳು ಕ್ಲೇಮ್ ಜಾರಿಗೊಳಿಸುತ್ತಾರೆ.

ನಾಲ್ಕು ವಾರಗಳ ಬಳಿಕ ಪೇಟೆ ಚೇತರಿಕೆ

ಸತತ ನಾಲ್ಕು ವಾರಗಳ ಕುಸಿತದಿಂದ ಕಂಗೆಟ್ಟಿದ್ದ ಷೇರುಪೇಟೆ ಸೂಚ್ಯಂಕಗಳು ಈಗ ಚೇತರಿಕೆಯ ಹಾದಿಗೆ ಮರಳಿವೆ. ವಿದೇಶಿ ಹೂಡಿಕೆದಾರರಿಗೆ ಸರ್ಚಾರ್ಜ್ ಹೆಚ್ಚಳ ಸೇರಿ ಬಜೆಟ್‌ನ ಕೆಲ ತೆರಿಗೆ ಪ್ರಸ್ತಾವಗಳನ್ನು ಕೈಬಿಡುವ ಬಗ್ಗೆ ಪರಿಶೀಲಿಸುವುದಾಗಿ ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ಪೇಟೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 1.25 ರಷ್ಟು ಏರಿಕೆ ಕಂಡಿದ್ದು 37,582 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದೆ. ನಿಫ್ಟಿ (50)  ಶೇ 1 ರಷ್ಟು ಹೆಚ್ಚಳವಾಗಿದ್ದು 11,110 ರಲ್ಲಿ ವಹಿವಾಟು ಮುಗಿಸಿದೆ.

ವಲಯವಾರು: ವಲಯವಾರು ಸೂಚ್ಯಂಕಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಿಫ್ಟಿಯ ವಾಹನ ತಯಾರಿಕಾ ವಲಯ ಶೇ 3 ರಷ್ಟು ಏರಿಕೆ ಕಂಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ವಲಯಗಳು ಕ್ರಮವಾಗಿ ಶೇ 2.6 ಮತ್ತು ಶೇ 2.2 ರಷ್ಟು ಜಿಗಿದಿವೆ. ನಿಫ್ಟಿ ಲೋಹ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಮಾಧ್ಯಮ ವಲಯಗಳು ಕ್ರಮವಾಗಿ ಶೇ 2 ರಷ್ಟು ಏರಿಕೆಯಾಗಿವೆ.

ಗಳಿಕೆ: ವಾಹನ ನೋಂದಣಿ ಶುಲ್ಕ ಪರಿಷ್ಕರಣೆಯನ್ನು ಸರ್ಕಾರ ಸದ್ಯಕ್ಕೆ ಮುಂದೂಡಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ವಲಯದ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.

ವಾರದ ಅವಧಿಯಲ್ಲಿ ಹೀರೊ ಮೋಟೊ ಕಾರ್ಪ್ ಶೇ 9 ಮತ್ತು ಮಾರುತಿ ಸುಜುಕಿ ಶೇ 7 ರಷ್ಟು ಹೆಚ್ಚಳ ದಾಖಲಿಸಿವೆ. ಷೇರು ಬ್ರೋಕಿಂಗ್ ಕಂಪನಿಗಳು ಏರ್‌ಟೆಲ್ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದ ಕಾರಣದಿಂದಾಗಿ ಷೇರುಗಳಲ್ಲಿ ಶೇ 8 ರಷ್ಟು ಏರಿಕೆಯಾಗಿದೆ.

ತ್ರೈಮಾಸಿಕ ವರದಿಯಲ್ಲಿ ಮಿಶ್ರ ಸಾಧನೆ ತೋರಿದ ಎಚ್‌ಸಿಎಲ್ ಟೆಕ್ನಾಲಜಿಸ್ ವಾರಾಂತ್ಯಕ್ಕೆ 
ಶೇ 7 ರಷ್ಟು ಹೆಚ್ಚಳವಾಗಿದೆ. ಬಜಾಜ್ ಫಿನ್‌ಸರ್ವ್ ಶೇ 6, ಕೋಲ್ ಇಂಡಿಯಾ ಶೇ 5.3 ರಷ್ಟು ಏರಿಕೆ ಕಂಡಿವೆ.

ಇಳಿಕೆ: ತ್ರೈಮಾಸಿಕ ಫಲಿತಾಂಶದಲ್ಲಿ ನಿವ್ವಳ ಲಾಭ ಕುಸಿದ ಪರಿಣಾಮ ಟಾಟಾ ಸ್ಟೀಲ್ ಷೇರುಗಳು ಶೇ 11 ರಷ್ಟು ಕುಸಿದಿವೆ.

ಕಂಪನಿಯ ಉನ್ನತ ಹುದ್ದೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡುವುದಾಗಿ ತಿಳಿಸಿರುವ ಪರಿಣಾಮ ಯೆಸ್ ಬ್ಯಾಂಕ್‌ನ ಷೇರುಗಳು ಶೇ 7 ರಷ್ಟು ತಗ್ಗಿವೆ. ಇನ್ನು, ಟಾಟಾ ಮೋಟರ್ಸ್ ಶೇ 6.6, ಎಸ್‌ಬಿಐ ಶೇ 5.5, ಸಿಪ್ಲಾ ಶೇ 6 ಮತ್ತು ಪವರ್ ಗ್ರಿಡ್ ಶೇ 4.3 ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಒಎನ್‌ಜಿಸಿ, ಆದಿತ್ಯ ಬಿರ್ಲಾ , ಸನ್ ಫಾರ್ಮಾ, ಕೋಲ್ ಇಂಡಿಯಾ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಸಗಟು ದರ ಸೂಚ್ಯಂಕ, ಗ್ರಾಹಕ ದರ ಸೂಚ್ಯಂಕ ಮತ್ತು ವ್ಯಾಪಾರದ ದತ್ತಾಂಶಗಳು ಬಿಡುಗಡೆಗೊಳ್ಳಲಿವೆ.

ಆಗಸ್ಟ್ 12 ರಂದು ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆ ಇದೆ. ವಿದೇಶಿ ಹೂಡಿಕೆದಾರರಿಗೆ ಸರ್ಚಾರ್ಜ್ ಹೆಚ್ಚಳ ಸೇರಿ ಬಜೆಟ್‌ನ ಕೆಲ ತೆರಿಗೆ ಪ್ರಸ್ತಾವಗಳನ್ನು ಕೈಬಿಡುವ ಸಂಬಂಧ ಕೈಗೊಳುವ ನಿರ್ಧಾರ ಸಹ ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

Post Comments (+)