ಷೇರುಪೇಟೆಯಲ್ಲಿ ನಿಲ್ಲದ ಗೂಳಿ ಓಟ

7
ಸಾರ್ವಕಾಲಿಕ ಗರಿಷ್ಠ ಮಟ್ಟದ ವಹಿವಾಟು l 2ನೇ ವಾರವೂ ಮುಂದುವರಿದ ಖರೀದಿ ಉತ್ಸಾಹ

ಷೇರುಪೇಟೆಯಲ್ಲಿ ನಿಲ್ಲದ ಗೂಳಿ ಓಟ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ವಾರವೂ ಸಕಾರಾತ್ಮಕ ವಹಿವಾಟು ನಡೆಯಿತು. ಉತ್ತಮ ಗಳಿಕೆಯೊಂದಿಗೆ ವಾರದ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 219 ಅಂಶ ಏರಿಕೆ ಕಂಡು 37,556 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 82 ಅಂಶ ಹೆಚ್ಚಾಗಿ 11,360 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಯ ಕಾರಣಕ್ಕಾಗಿ ಷೇರುಪೇಟೆ ವಹಿವಾಟು ಚಂಚಲವಾಗಿತ್ತು.  ಗುರುವಾರದ ವಹಿವಾಟಿನಲ್ಲಿ 356 ಅಂಶ ಕುಸಿದಿತ್ತು. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಹಾಗೂ ಆಗಸ್ಟ್ ಮತ್ತು  ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ಮಳೆ ಸುರಿಯಲಿದೆ ಎನ್ನುವ ಹವಾಮಾನ ಇಲಾಖೆಯ ವರದಿ ಷೇರುಪೇಟೆಗೆ ಚೇತರಿಕೆ ನೀಡಿತು.

ಗೂಳಿ ಮತ್ತು ಕರಡಿ ಮಧ್ಯೆ ತೀವ್ರ ಸ್ಪರ್ಧೆ ಮೂಡಿತ್ತು. ಸೂಚ್ಯಂಕವು ವಾರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದಷ್ಟೇ ಅಲ್ಲದೆ ಮಾರಾಟದ ಒತ್ತಡದ ಒತ್ತಡವನ್ನೂ ಅನುಭವಿಸಿತು. ಆದರೆ, ವಿದ್ಯುತ್‌ ವಲಯದ ಷೇರುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಖರೀದಿ ಚಟುವಟಿಕೆ ಏರಿಕೆ ಕಂಡು ಅಂತಿಮವಾಗಿ ಗೂಳಿ ಮೇಲುಗೈ ಸಾಧಿಸಿತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಹೂಡಿಕೆ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡಿದೆ. ರಿಲಯನ್ಸ್‌, ಎಚ್‌ಯುಎಲ್‌, ಇನ್ಫೊಸಿಸ್‌ ಷೇರುಗಳು ಸೂಚ್ಯಂಕವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪುವಂತೆ ಮಾಡಿದವು.

ವಾಹನ ವಲಯ ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾಯಿತು. ಉಳಿದಂತೆ ಆರೋಗ್ಯ ವಲಯ, ಗ್ರಾಹಕ ಬಳಕೆ ವಸ್ತುಗಳು, ತೈಲ ಮತ್ತು ಅನಿಲ, ಲೋಹ, ಎಫ್‌ಎಂಸಿಜಿ, ವಿದ್ಯುತ್‌, ಬ್ಯಾಂಕ್, ಬೃಹತ್‌ ಯಂತ್ರೋಪಕರಣಗಳು, ತಂತ್ರಜ್ಞಾನ, ರಿಯಲ್‌ ಎಸ್ಟೇಟ್‌ ಮತ್ತು ಐ.ಟಿ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾದವು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !