ಗುರುವಾರ , ಮಾರ್ಚ್ 4, 2021
18 °C

ಹಣಕಾಸು ಸಾಕ್ಷರತೆ: ಇದು ತೆರಿಗೆ ಉಳಿಸುವ ಕಾಲ

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

‘ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಮಾರ್ಚ್ 31ರತನಕ ಸಮಯ ಇರೋವಾಗ, ಈಗಲೇ ಅದರ ಬಗ್ಗೆ ಚಿಂತೆ ಯಾಕೆ...’ ಈ ಬಗೆಯ ಯೋಚನೆಯಲ್ಲಿ ನೀವು ಇದ್ದರೆ, ಕೊನೆ ಗಳಿಗೆಯಲ್ಲಿ ಉಳಿತಾಯದ ಗುರಿ ಮುಟ್ಟಲು ಸಾಧ್ಯವಿಲ್ಲ. ಇನ್ನಿರುವ ಒಂದು ತಿಂಗಳ ಅವಧಿಯನ್ನಾದರೂ ಹೂಡಿಕೆಗೆ ವ್ಯವಸ್ಥಿತವಾಗಿ ಬಳಸಿಕೊಂಡರೆ, ತೆರಿಗೆ ಉಳಿಸುವ ಹಾದಿ ಸುಗಮವಾಗುತ್ತದೆ. ಕಾನೂನಿನ ಅನ್ವಯ ತೆರಿಗೆ ಉಳಿಸಲು ಇರುವ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ.

ಸೆಕ್ಷನ್ 80ಸಿ: ಆದಾಯ ತೆರಿಗೆಯ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ₹ 1.50 ಲಕ್ಷದವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯ ಪಡೆಯಬಹುದು. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಜೀವ ವಿಮೆ ಪ್ರೀಮಿಯಂ, ಯುಲಿಪ್ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) , ಐದು ವರ್ಷಗಳ ಅವಧಿ ಠೇವಣಿ (ಎಫ್.ಡಿ.), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಕ್ಕಳ ಶಾಲೆಯ ಬೋಧನಾ ಶುಲ್ಕ, ಮನೆ ಸಾಲದ ಮೇಲಿನ ಅಸಲು ಪಾವತಿಗೆ ಈ ವಿನಾಯಿತಿ ಪಡೆಯಬಹುದು.

ಸೆಕ್ಷನ್ 80ಡಿ: ಈ ಸೆಕ್ಷನ್ ಅಡಿಯಲ್ಲಿ ಕುಟುಂಬಕ್ಕೆ (ಸ್ವಂತಕ್ಕೆ, ಪತ್ನಿ, ಮಕ್ಕಳಿಗೆ) ಪಡೆಯುವ ಆರೋಗ್ಯ ವಿಮೆಗೆ ₹ 25 ಸಾವಿರದ ವರೆಗೆ ವಿನಾಯಿತಿ ಇದೆ. 60 ವರ್ಷ ಮೇಲ್ಪಟ್ಟ ಪೋಷಕರಿಗೆ ವಿಮೆ ಮಾಡಿಸಿದ್ದರೆ ₹ 50 ಸಾವಿರದವರೆಗೆ ತೆರಿಗೆ ಅನುಕೂಲವಿದೆ.

ಸೆಕ್ಷನ್ 80ಇ: ಸ್ವಂತಕ್ಕೆ, ಪತ್ನಿ, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದರೆ ನಿಗದಿತ ಆರ್ಥಿಕ ವರ್ಷದಲ್ಲಿ ಪಾವತಿಸಿದ ಬಡ್ಡಿಯ ಮೇಲೆ ವಿನಾಯಿತಿ ಸಿಗುತ್ತದೆ.

ಸೆಕ್ಷನ್ 80ಜಿಜಿ: ಬಾಡಿಗೆಗೆ ಪಡೆದಿರುವ ಮನೆಗೆ ವಾರ್ಷಿಕ ₹ 60 ಸಾವಿರದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ವಿನಾಯಿತಿ ಪಡೆಯಬೇಕಾದಲ್ಲಿ ವೇತನದಲ್ಲಿ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಪಡೆಯುತ್ತಿರಬಾರದು ಮತ್ತು ವಾಸದ ಸ್ಥಳದಲ್ಲಿ ಸ್ವಂತ ಮನೆ ಹೊಂದಿರಬಾರದು.

ಸೆಕ್ಷನ್ 80ಟಿಟಿಎ, 80ಟಿಟಿಬಿ: ವ್ಯಕ್ತಿ ಗಳಿಸಿರುವ ₹ 10 ಸಾವಿರದ ವರೆಗಿನ ಬಡ್ಡಿ ಆದಾಯಕ್ಕೆ ವಿನಾಯಿತಿ ಲಭ್ಯ. ಅಂಚೆ ಕಚೇರಿ, ಉಳಿತಾಯ ಖಾತೆ ಹೂಡಿಕೆಗಳ ಮೇಲೆ ಬರುವ ಬಡ್ಡಿಗೆ ಇದು ಅನ್ವಯ. ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಳಿತಾಯ ಖಾತೆ ಮತ್ತು ಅವಧಿ ಠೇವಣಿ ಮೇಲೆ ಸಿಗುವ ಬಡ್ಡಿಗೆ ₹ 50 ಸಾವಿರದ ತನಕ ವಿನಾಯಿತಿ ಇದೆ.

ಸೆಕ್ಷನ್ 80 ಸಿಸಿಡಿ (1) ಮತ್ತು ಸೆಕ್ಷನ್ 80 ಸಿಸಿಡಿ (1ಬಿ): ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿ ಈ ಅನುಕೂಲ ಪಡೆಯಬಹುದು. ನಿಮ್ಮ ವೇತನದ ಶೇ 10ರಷ್ಟು ವಿನಾಯಿತಿ ಪಡೆಯಲು ಅವಕಾಶವಿದೆ. ಸ್ವಂತ ಉದ್ಯೋಗಿಗಳಿಗೆ ಶೇ 20ರಷ್ಟು ವಿನಾಯಿತಿ ಸಿಗುತ್ತದೆ. 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ₹ 50 ಸಾವಿರದವರೆಗಿನ ಎನ್‌ಪಿಎಸ್ ಹೂಡಿಕೆಗೆ ವಿನಾಯಿತಿ ಇದೆ.

ಸೆಕ್ಷನ್ 24(ಬಿ), ಸೆಕ್ಷನ್ 80 ಇಇ, ಸೆಕ್ಷನ್ 80 ಇಇಎ: 1999ರ ನಂತರ ಪಡೆದಿರುವ ಗೃಹ ಸಾಲಗಳ ಮೇಲಿನ ಬಡ್ಡಿ ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 24(ಬಿ) ಅಡಿಯಲ್ಲಿ ₹ 2 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಮೊದಲ ಬಾರಿಗೆ ಮನೆ ಖರೀದಿಸುವವರು ಸೆಕ್ಷನ್ 80ಇಇ ಅಡಿಯಲ್ಲಿ ಹೆಚ್ಚುವರಿ ₹ 50 ಸಾವಿರದವರೆಗೆ ವಿನಾಯಿತಿ ಪಡೆಯಬಹುದು. ₹ 35 ಲಕ್ಷಕ್ಕಿಂತ ಕಡಿಮೆ ಸಾಲ ಪಡೆದಿದ್ದು ನಿಮ್ಮ ಆಸ್ತಿಯ ಮೌಲ್ಯ ರೂ. 50 ಲಕ್ಷ ಇದ್ದಲ್ಲಿ ಮಾತ್ರ ಈ ವಿನಾಯಿತಿ ಲಭ್ಯ. ಜತೆಗೆ 2017ನೇ ವರ್ಷದಲ್ಲಿ ಅಥವಾ ನಂತರದಲ್ಲಿ ಪಡೆದಿರುವ ಸಾಲಗಳಿಗೆ ಮಾತ್ರ ಇದು ಮಾನ್ಯ.

ಸೆಕ್ಷನ್ 24(ಬಿ)ನಲ್ಲಿ ಸಾಲದ ಮೇಲಿನ ಬಡ್ಡಿ ಪಾವತಿಗೆ ₹ 2 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದಕ್ಕಿಂತ ಹೆಚ್ಚಿಗೆ ಬಡ್ಡಿ ಕಟ್ಟಿದ್ದರೆ ಸೆಕ್ಷನ್ 80 ಇಇಎ ಅಡಿಯಲ್ಲಿ ವಿನಾಯಿತಿ ಲಭ್ಯ. 2019ರಲ್ಲಿ ಜಾರಿಗೆ ಬಂದಿರುವ ಈ ಸೆಕ್ಷನ್ ಅಡಿಯಲ್ಲಿ ನೀವು ₹ 1.5 ಲಕ್ಷದವರೆಗೆ ಹೆಚ್ಚುವರಿಯಾಗಿ ಗೃಹ ಸಾಲದ ಮೇಲಿನ ಬಡ್ಡಿ ಪಾವತಿಗೆ ವಿನಾಯಿತಿ ಪಡೆಯಬಹುದು. ಹಣಕಾಸು ವರ್ಷ 2020ರಲ್ಲಿ ಸಾಲ ಪಡೆದಿದ್ದು, ಮನೆಯ ನೋಂದಣಿ ಮೊತ್ತ ₹ 45 ಲಕ್ಷದ ಒಳಗಿದ್ದರೆ ಮಾತ್ರ ಈ ಅನುಕೂಲ ಸಿಗುತ್ತದೆ.

ಲಾಭ ಗಳಿಕೆಯತ್ತ ಚಿತ್ತ, ಸೂಚ್ಯಂಕ ಕುಸಿತ

ಷೇರುಪೇಟೆಯಲ್ಲಿ ಲಾಭ ಗಳಿಕೆಯತ್ತ ಹೂಡಿಕೆದಾರರು ಗಮನ ಹರಿಸಿರುವುದರಿಂದ ಸೂಚ್ಯಂಕಗಳು ಸತತ ಎರಡನೆಯ ವಾರವೂ ಕುಸಿತ ಕಂಡಿವೆ. 50,889 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 1.2ರಷ್ಟು ಕುಸಿತ ದಾಖಲಿಸಿದ್ದರೆ 14,981 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.2ರಷ್ಟು ತಗ್ಗಿದೆ. ಸೆನ್ಸೆಕ್ಸ್ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 0.63ರಷ್ಟು ಮತ್ತು ಶೇ 1.23ರಷ್ಟು ಹೆಚ್ಚಳವಾಗಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,408.26 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿಯ ಹೂಡಿಕೆದಾರರು ₹ 6,283.73 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 10.7ರಷ್ಟು ಜಿಗಿದಿದ್ದರೆ ನಿಫ್ಟಿ ಎನರ್ಜಿ ಸೂಚ್ಯಂತ ಶೇ 5ರಷ್ಟು ಹೆಚ್ಚಳ ದಾಖಲಿಸಿದೆ. ಆದರೆ ಫಾರ್ಮಾ ಮತ್ತು ವಾಹನ ವಲಯ ತಲಾ ಶೇ 3ರಷ್ಟು ಇಳಿಕೆ ದಾಖಲಿಸಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಗೇಲ್ ಶೇ 9.4ರಷ್ಟು, ಪವರ್ ಗ್ರಿಡ್ ಶೇ 9.2ರಷ್ಟು, ಎನ್‌ಟಿಪಿಸಿ ಶೇ 8.6ರಷ್ಟು, ಒಎನ್‌ಜಿಸಿ ಶೇ 8.4ರಷ್ಟು, ಅದಾನಿ ಪೋರ್ಟ್ಸ್ ಶೇ 6ರಷ್ಟು ಏರಿಕೆ ದಾಖಲಿಸಿವೆ. ಐಷರ್ ಮೋಟರ್ಸ್ ಶೇ 7ರಷ್ಟು, ನೆಸ್ಲೆ ಇಂಡಿಯಾ ಶೇ 5.3ರಷ್ಟು ಡಿವೀಸ್ ಲ್ಯಾಬ್ ಶೇ 5.3ರಷ್ಟು, ಸಿಪ್ಲಾ ಶೇ 4.9ರಷ್ಟು ಮತ್ತು ಟೈಟನ್ ಶೇ 4.6ರಷ್ಟು ಕುಸಿತ ಕಂಡಿವೆ.

ಐಪಿಒ: ಹೆರನ್ ಬಾ ಕಂಪನಿಯ ಐಪಿಒ ಫೆಬ್ರವರಿ 23ರಿಂದ 25ರವರೆಗೆ ನಡೆಯಲಿದೆ.

ಮುನ್ನೋಟ: ಬಜೆಟ್ ಕಾರಣದಿಂದ ಫೆಬ್ರವರಿ ತಿಂಗಳ ಮೊದಲ ಎರಡು ವಾರಗಳಲ್ಲಿ ಏರಿಕೆ ಹಾದಿಯಲ್ಲಿದ್ದ ಷೇರುಪೇಟೆಯಲ್ಲೀಗ ನಿಧಾನಗತಿ ಕಂಡುಬಂದಿದೆ. ಸೂಚ್ಯಂಕಗಳಲ್ಲಿ ಏರಿಳಿತದ ಹಾದಿ ಸದ್ಯಕ್ಕೆ ಮುಂದುವರಿಯಲಿದೆ. ಜಾಗತಿಕವಾಗಿ ಅಥವಾ ಸ್ಥಳೀಯವಾಗಿ ಮಾರುಕಟ್ಟೆಗೆ ಶಕ್ತಿ ತುಂಬುವಂತಹ ಮಹತ್ತರ ಬೆಳವಣಿಗೆಗಳು ಆಗದಿದ್ದಲ್ಲಿ ಸೂಚ್ಯಂಕಗಳಲ್ಲಿ ಮಂದಗತಿ ಕಂಡುಬರಲಿದೆ. ಲಾಭ ನೀಡದ, ಕಳಪೆ ಸಾಧನೆ ತೋರಿರುವ ಷೇರುಗಳನ್ನು ಮಾರಾಟ ಮಾಡಿ, ಸೂಚ್ಯಂಕ ಕುಸಿದಂತೆ ಗುಣಮಟ್ಟದ ಕಂಪನಿಗಳ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಗಮನಹರಿಸುವುದು ಸೂಕ್ತ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು