ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ ಕಲಿಸಿದ ವೈಯಕ್ತಿಕ ಹಣಕಾಸಿನ ಹೊಸ ಸೂತ್ರಗಳು

Last Updated 31 ಡಿಸೆಂಬರ್ 2020, 5:48 IST
ಅಕ್ಷರ ಗಾತ್ರ

ಬೆಂಗಳೂರು: ‘ಹಣಕಾಸು ಗುರಿಗಳನ್ನು ನಿಗದಿಪಡಿಸುವುದು ತುಂಬ ಸುಲಭ. ಆದರೆ, ಈ ಗುರಿಗಳನ್ನು ತಲುಪುವ ಬದ್ಧತೆ ಕಾಯ್ದುಕೊಂಡು ಹೋಗುವುದು ತುಂಬ ಕಠಿಣ. ಹಣಕಾಸು ಗುರಿ ಸಾಧನೆಯ ಬದ್ಧತೆಗಳು ಪ್ರತಿಕೂಲ ಸಂದರ್ಭಗಳಲ್ಲಿಯೇ ಹೆಚ್ಚು ಪರೀಕ್ಷೆಗೆ ಒಳಪಡುತ್ತವೆಯೇ ಹೊರತು ಒಳ್ಳೆಯ ದಿನಗಳಲ್ಲಿ ಅಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು‘ ಎಂದು ಎಡೆಲ್‌ವೈಸ್ ಅಸೆಟ್‌ ಮ್ಯಾನೇಜ್‌ಮೆಂಟ್‌ನ ಸಿಇಒ ರಾಧಿಕಾ ಗುಪ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ.

‘ವೈಯಕ್ತಿಕ ಹಣಕಾಸಿನ ವಿಷಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಹಣಕಾಸಿನ ಗುರಿಗಳನ್ನು ನಿಗದಿಪಡಿಸುವುದು ತುಂಬ ಸುಲಭದ ಕೆಲಸವಾಗಿದ್ದು, ಗುರಿಗಳಿಗೆ ಬದ್ಧವಾಗಿ ಅವುಗಳನ್ನು ಕಾಯ್ದುಕೊಂಡು ಹೋಗುವುದು ಕಠಿಣ ಕೆಲಸವಾಗಿದೆ. ಹೂಡಿಕೆ ಕುರಿತು ಕೈಗೊಳ್ಳುವ ನಿರ್ಧಾರಗಳನ್ನು ಬದಲಿಸದ ದೃಢ ನಿಲವು ತಳೆದರೆ ಖಂಡಿತವಾಗಿಯೂ ಹೆಚ್ಚು ಪ್ರಯೋಜನ ಇದೆ.

‘ನಿಮ್ಮ ಹೂಡಿಕೆಗಳು ನಿಮ್ಮ ಹಣಕಾಸು ಗುರಿ, ನೀವು ಎದುರಿಸುವ ಸಂದರ್ಭಗಳು ಮತ್ತು ನಿಮ್ಮ ಬದುಕಿನ ವಾಸ್ತವತೆ ಆಧರಿಸಿ ನಿಗದಿಯಾಗಿರುತ್ತವೆ. ನೀವು ನಿಮಗಾಗಿ ಯೋಜಿತ ರೀತಿಯಲ್ಲಿ ಹಣ ವೆಚ್ಚ ಮಾಡಿದರೆ ನೀವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೀರಿ ಎಂದರ್ಥ. ವೈಯಕ್ತಿಕ ಹಣಕಾಸು ವಿಷಯದಲ್ಲಿ ವೈಯಕ್ತಿಕ ಅಗತ್ಯಗಳು, ನಿರೀಕ್ಷೆಗಳು ಮತ್ತು ಗುರಿಗಳಿಗೆ ಮೊದಲ ಆದ್ಯತೆ ನೀಡಬೇಕು. ಹಣಕಾಸಿನ ವಿಷಯಗಳು ಮತ್ತು ಹೂಡಿಕೆಯ ನಿರ್ಧಾರಗಳಿಗೆ ಎರಡನೆ ಆದ್ಯತೆ ನೀಡಬೇಕು.

‘ಇಡೀ ವಿಶ್ವವನ್ನೇ ಕಾಡಿದ 2008ರ ಮತ್ತು 2020ನೇ ವರ್ಷದ ಹಣಕಾಸಿನ ಸಂಕಷ್ಟಗಳು ಉತ್ತಮ ಹೂಡಿಕೆಯ ಬಗ್ಗೆ ಹೊಸ ಪಾಠಗಳನ್ನೂ ಕಲಿಸಿವೆ. ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಈ ಹೊಸ ಪಾಠಗಳಿಂದ ಹೂಡಿಕೆದಾರರು ಸಾಕಷ್ಟು ಕಲಿಯಬೇಕಾಗಿದೆ. ಬದುಕಿನ ಪೂರ್ತಿ ಅನಿರೀಕ್ಷಿತ ಘಟನೆಗಳೇ ತುಂಬಿರುತ್ತವೆ. ನಾಳೆ ಏನು ಘಟಿಸಲಿದೆ ಎನ್ನುವುದು ಯಾರ ಊಹೆಗೂ ನಿಲುಕುವುದಿಲ್ಲ. ಷೇರುಪೇಟೆಗೂ ಈ ಮಾತು ಅನ್ವಯಿಸುತ್ತದೆ. ಮಾರ್ಚ್‌ನಲ್ಲಿ ಪ್ರಪಾತ ಕಂಡು ಹೂಡಿಕೆದಾರರಿಗೆ ಕಹಿ ಉಣಿಸಿದ್ದ ಷೇರುಪೇಟೆಯು, ನಂತರದ ದಿನಗಳಲ್ಲಿ ಗಮನಾರ್ಹ ಬಗೆಯಲ್ಲಿ ಚೇತರಿಕೆ ದಾಖಲಿಸಿ ಸಿಹಿ ಪಾಯಸ ಉಣಬಡಿಸುತ್ತಿದೆ.

‘2020ರ ವರ್ಷಕ್ಕೆ ವಿದಾಯ ಮತ್ತು ಹೊಸ ವರ್ಷ 2021ರ ಆರಂಭದ ಹೊಸ್ತಿಲಲ್ಲಿ ಹಿಂತಿರುಗಿ ನೋಡಿದಾಗ, ವೈಯಕ್ತಿಕ ಹಣಕಾಸಿನ ವಿಷಯದಲ್ಲಿ ಹೂಡಿಕೆದಾರರು ಅತಿಯಾಗಿ ಚಿಂತಿಸಬಾರದು. ಹೆಚ್ಚೆಚ್ಚು ಗಂಭೀರವಾಗಿ ಚಿಂತಿಸುತ್ತ ಹೋದಂತೆ ಕೈಗೊಳ್ಳಬೇಕಾದ ನಿರ್ಧಾರಗಳು ದುರ್ಬಲವಾಗುತ್ತ ಹೋಗುತ್ತವೆ. 2020ನೇ ವರ್ಷವು ನಮಗೆ ಸಾಕಷ್ಟು ಚಿಂತನೆಗೆ ಹಚ್ಚಿತ್ತು. ಅನಿರೀಕ್ಷಿತ ಘಟನಾವಳಿಗಳಿಗಾಗಿ ಎದುರು ನೋಡುವುದು, ಆ ಘಟನೆಯ ಫಲಿತಾಂಶದ ಬಗ್ಗೆ ಅಂದಾಜು ಮಾಡುವುದು ಮತ್ತು ಆ ಫಲಿತಾಂಶದ ಪರಿಣಾಮವನ್ನು ಊಹಿಸುವುದು– ಹೀಗೆ ಚಿಂತನೆಗೆ ವಿಪುಲ ಸಾಮಗ್ರಿ ನಮ್ಮ ಬಳಿ ಇತ್ತು. ಅತಿಯಾದ ಮಾಹಿತಿಯ ಭಾರದ ಕಾರಣಕ್ಕೆ ಕೈಗೊಳ್ಳುವ ನಿರ್ಧಾರಗಳು ದುರ್ಬಲವಾಗಿರುತ್ತವೆ. ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮತ್ತು ಸ್ವಯಂಚಾಲಿತ ಸಂಪತ್ತು ಹಂಚಿಕೆಗಳು ಯಾವತ್ತೂ ಚಿಂತೆ ಮಾಡುವುದಿಲ್ಲ. ಅವು ಸ್ವಯಂಚಾಲಿತವಾಗಿದ್ದು, ತಮ್ಮಷ್ಟಕ್ಕೆ ತಾವೇ ನಿರ್ಧಾರ ತೆಗೆದುಕೊಳ್ಳುತ್ತವೆ.

‘ಒಳ್ಳೆಯ ನಡವಳಿಕೆಯೇ ಕೋವಿಡ್‌ ಪಿಡುಗಿನ ವಿರುದ್ಧದ ಅತಿದೊಡ್ಡ ಲಸಿಕೆ ಮತ್ತು ಹಣ ಹೂಡಿಕೆಯಲ್ಲಿನ ಒಳ್ಳೆಯ ನಿರ್ಧಾರವೂ ಆಗಿರುವುದನ್ನು 2020ನೇ ವರ್ಷವು ಎಲ್ಲರಿಗೂ ನೆನಪಿಸಿದೆ. ಹಣಕಾಸು ಯೋಜನೆಗಳ ಬಗ್ಗೆ ಹೆಚ್ಚು ಸೂಕ್ಷ್ಮತೆ ರೂಢಿಸಿಕೊಂಡವರು ತಮ್ಮ ಸ್ವಂತದ ನಷ್ಟ ಸಾಧ್ಯತೆಗಳನ್ನು ತಿಳಿದುಕೊಂಡಿರಬೇಕು. ತುರ್ತು ಸಂದರ್ಭದ ಬಳಕೆಗೆ ಕೆಲ ಮೊತ್ತವನ್ನು ಪ್ರತ್ಯೇಕವಾಗಿ ತೆಗೆದು ಇರಿಸುವುದನ್ನು ಮರೆಯಬಾರದು. ಹೀಗೆ ಮಾಡಿದ್ದರೆ ಹಣಕಾಸು ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಬಹುದು.

‘2020ನೇ ವರ್ಷವು ಹಲವಾರು ಬಗೆಗಳಲ್ಲಿ ಸವಾಲಿನಿಂದ ಕೂಡಿತ್ತು. ಹಣಕಾಸು ಬದ್ಧತೆಗಳೂ ಈ ವರ್ಷ ಕಠಿಣ ಪರೀಕ್ಷೆಗೆ ಒಳಪಟ್ಟವು. 2020ನೇ ಹಣಕಾಸು ವರ್ಷವು ಅನೇಕ ವಿಧಗಳಲ್ಲಿ ಬಿಕ್ಕಟ್ಟಿನ ಹಾಗೂ ಸಂಕಷ್ಟದ ವರ್ಷವಾಗಿದೆ ಎಂದು ಪರಿಗಣಿಸಿದರೂ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದ ವರ್ಷವೂ ಇದಾಗಿರುವುದನ್ನು ಮರೆಯಬಾರದು. ವರ್ಷಾರಂಭದಲ್ಲಿ ಕಾಡಲು ಆರಂಭಿಸಿದ ಆರೋಗ್ಯ ಬಿಕ್ಕಟ್ಟು ವರ್ಷಾಂತ್ಯದಲ್ಲಿ ಕೊನೆಗೊಳ್ಳುವ ಭರವಸೆ ಮೂಡಿಸಿದೆ. ವಿಶ್ವದಾದ್ಯಂತ ಷೇರುಪೇಟೆಗಳಲ್ಲಿ ಗೆಲುವಿನ ಓಟ ಕಂಡು ಬರುತ್ತಿದೆ. ಭಾರತದಲ್ಲಿಯೂ ಗಳಿಕೆಯು ಚೇತರಿಕೆ ಕಾಣುತ್ತಿದೆ. ಎಲ್ಲರಲ್ಲೂ ಆಶಾವಾದ ಮೂಡಿಸಿದೆ. ಷೇರುಪೇಟೆಯಲ್ಲಿನ ಹೂಡಿಕೆಯು ದೀರ್ಘಾವಧಿಯಲ್ಲಿ ಉತ್ತಮ ಲಾಭ ತಂದು ಕೊಡುತ್ತದೆ. ಷೇರುಪೇಟೆಗಳಲ್ಲಿ ಹಣ ಹೂಡಿಕೆ ಮಾಡುವ ಪ್ರವೃತ್ತಿಯನ್ನು ಮುಂದುವರೆಸಲು ಮರೆಯಬೇಡಿ. ಇದಕ್ಕಾಗಿ ಉತ್ತಮ ನಡತೆ, ಸಹನೆ ಮತ್ತು ಆಶಾವಾದದ ಜತೆ ಮುನ್ನಡೆಯಿರಿ‘ ಎಂದೂ ರಾಧಿಕಾ ಅವರು ಕಿವಿಮಾತು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT