ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಉಳಿಸುವ ‘ಪಿಪಿಎಫ್’

Last Updated 31 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಹಣ ತೊಡಗಿಸಲು ಹತ್ತಾರು ಆಯ್ಕೆಗಳಿದ್ದರೂ, ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್) ಇಂದಿಗೂ ಹೆಚ್ಚು ಪ್ರಸ್ತುತ ಎನಿಸಿಕೊಳ್ಳುವಂತಹ ಹೂಡಿಕೆಯಾಗಿ ಗಮನ ಸೆಳೆಯುತ್ತಿದೆ. ಸಣ್ಣ ಉಳಿತಾಯದ ಮೂಲಕ ದೊಡ್ಡ ಮೊತ್ತದ ಹಣವನ್ನು ಕೂಡಿಡಲು ಪಿಪಿಎಫ್ ಸಹಕಾರಿ. ಹೂಡಿಕೆಯ ಯಾವ ಹಂತದಲ್ಲೂ ಕರದ ಭಾರ ಹೇರದ ಪಿಪಿಎಫ್, ವೇತನದಾರರಿಗೆ ತೆರಿಗೆ ಉಳಿತಾಯಕ್ಕೊಂದು ಉತ್ತಮ ಸಾಧನವಾಗಿದೆ.

1. ಅರ್ಹತೆ: ಭಾರತದ ಯಾವುದೇ ನಾಗರಿಕ ಪಿಪಿಎಫ್ ಖಾತೆ ಆರಂಭಿಸಬಹುದು. ಒಬ್ಬರಿಗೆ ಒಂದೇ ಖಾತೆ ಅನ್ವಯ, ಅಪ್ರಾಪ್ತರ ಹೆಸರಿನಲ್ಲಿ ಖಾತೆ ಪ್ರಾರಂಭಿಸಲು ಅವಕಾಶವಿದೆ. ಹಿಂದೂ ಅವಿಭಕ್ತ ಕುಟುಂಬದ (ಎಚ್‌ಯುಎಫ್) ಹೆಸರಿನಲ್ಲಿ ಖಾತೆ ತೆರೆಯುವಂತಿಲ್ಲ. ಅಂಚೆ ಕಚೇರಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗೂ ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಈ ಖಾತೆ ಸೌಲಭ್ಯವಿದೆ.

2. ಹೂಡಿಕೆ ಮಿತಿ: ಒಂದು ಆರ್ಥಿಕ ವರ್ಷದಲ್ಲಿ ವ್ಯಕ್ತಿಯು ಕನಿಷ್ಠ ₹ 500 ಗರಿಷ್ಠ ₹ 1,50,000 ಗಳನ್ನು ಹೂಡಿಕೆ ಮಾಡಬಹುದು. ಒಂದೇ ಸಲ ಅಥವಾ 12 ಕಂತುಗಳಲ್ಲಿ ಪಿಪಿಎಫ್‌ ಖಾತೆಗೆ ಹಣ ವರ್ಗಾಯಿಸಬಹುದು.

3. ಯೋಜನಾ ಅವಧಿ: ಯೋಜನಾ ಅವಧಿ 15 ವರ್ಷ. ನಂತರದಲ್ಲಿ ಹೂಡಿಕೆದಾರ ಒಪ್ಪಿದಲ್ಲಿ ಐದು ವರ್ಷ ವಿಸ್ತರಣೆಗೆ ಅವಕಾಶವಿದೆ.

4. ಬಡ್ಡಿ ದರ: ಕೇಂದ್ರ ಸರ್ಕಾರ 3 ತಿಂಗಳಿಗೊಮ್ಮೆ ಬಡ್ಡಿದರ ನಿಗದಿಪಡಿಸುತ್ತದೆ. 2019 ಜನವರಿಯಿಂದ 2019 ಮಾರ್ಚ್‌ವರೆಗೆ ಬಡ್ಡಿದರ ಶೇ 8 ರಷ್ಟಿದೆ.

5. ತೆರಿಗೆ ಅನುಕೂಲ: ಈ ಖಾತೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಯಾವ ಹಂತದಲ್ಲೂ ತೆರಿಗೆ ಬರುವುದಿಲ್ಲ. ಪಿಪಿಎಫ್ ಗೆ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ಅನುಕೂಲ ಸಿಗುತ್ತದೆ. ಪಿಪಿಎಫ್ ಹೂಡಿಕೆಯಿಂದ ಬರುವ ಬಡ್ಡಿ ಮತ್ತು ಗಳಿಕೆ ಹಣಕ್ಕೂ ಯಾವುದೇ ತೆರಿಗೆ ಇಲ್ಲ ಹೀಗಾಗಿ ಪಿಪಿಎಫ್‌ ಅನ್ನು ವಿನಾಯ್ತಿ, ವಿನಾಯ್ತಿ ಮತ್ತು ವಿನಾಯ್ತಿ (exempt, exempt and exempt-EEE) ಎಂದು ಗುರುತಿಸಲಾಗುತ್ತದೆ.

6. ನಾಮಿನಿ: ಈ ಯೋಜನೆಗೆ ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ಜನರನ್ನು ನಾಮಿನಿಯಾಗಿಸಬಹುದು.

7. ಖಾತೆ ವರ್ಗಾವಣೆ: ಪಿಪಿಎಫ್ ಖಾತೆಯನ್ನು ಒಂದು ಬ್ಯಾಂಕ್‌ನಿಂದ ಮತ್ತೊಂದಕ್ಕೆ ಅಥವಾ ಅಂಚೆ ಕಚೇರಿಗೆ ಉಚಿತವಾಗಿ ವರ್ಗಾಯಿಸಬಹುದು.

8. ಅವಧಿಗೆ ಮುನ್ನ ಖಾತೆ ಮುಚ್ಚಲು ಸಾಧ್ಯವೇ?: ವಿಶೇಷ ಸಂದರ್ಭಗಳಲ್ಲಿ 5 ವರ್ಷದ ಬಳಿಕ ಪಿಪಿಎಫ್ ಖಾತೆ ಮುಚ್ಚಲು ಅವಕಾಶ ನೀಡಲಾಗುತ್ತದೆ. ಖಾತೆ ತೆರೆದಿರುವ ವ್ಯಕ್ತಿಗೆ ಅಥವಾ ಕುಟುಂಬಸ್ಥರಿಗೆ ಗಂಭೀರ ಅನಾರೋಗ್ಯ ಇದ್ದ ಸಂದರ್ಭದಲ್ಲಿ ದಾಖಲೆ ನೀಡಿ ಖಾತೆ ಮುಚ್ಚಬಹುದು. ಇದಲ್ಲದೆ ಖಾತೆದಾರನ ಮಕ್ಕಳಿಗೆ ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ ಹಣ ಅಗತ್ಯವಿದ್ದಾಗ ಪೂರಕ ದಾಖಲೆ ಒದಗಿಸಿ ಖಾತೆ ಅಂತ್ಯಗೊಳಿಸಬಹುದು.

9. ಸಾಲ ಅಥವಾ ಹಣ ಹಿಂಪಡೆದುಕೊಳ್ಳಬಹುದೇ: ಹೂಡಿಕೆ ಮಾಡಿದ 3ನೇ ಆರ್ಥಿಕ ವರ್ಷದಿಂದ 6ನೇ ಆರ್ಥಿಕ ವರ್ಷದ ಆರಂಭದ ಒಳಗಾಗಿ ಪಿಪಿಎಫ್ ನಿಂದ ಸಾಲ ಪಡೆದುಕೊಳ್ಳಬಹುದು. ಪಿಪಿಎಫ್‌ ಖಾತೆ ಆರಂಭಿಸಿದ 7ನೇ ಹಣಕಾಸು ವರ್ಷದ ಬಳಿಕ ಹಣವನ್ನು ಪ್ರತಿ ವರ್ಷವೂ ಭಾಗಶಃ ತೆಗೆಯಲು ಸಾಧ್ಯವಿದೆ.

10. ತಿಂಗಳ 4ನೇ ತಾರೀಕಿನ ಒಳಗೆ ಹಣ ಜಮೆ ಮಾಡಿ: ಪಿಪಿಎಫ್‌ ಖಾತೆಯಲ್ಲಿನ ಹಣಕ್ಕೆ ಬಡ್ಡಿಯನ್ನು ಪ್ರತಿ ತಿಂಗಳ 5ನೇ ತಾರೀಕಿನಂದು ಲೆಕ್ಕ ಹಾಕಲಾಗುತ್ತದೆ. ಅಂದು ಖಾತೆಯಲ್ಲಿರುವ ಕನಿಷ್ಠ ಬಾಕಿಗೆ ಬಡ್ಡಿ ಅನ್ವಯವಾಗುತ್ತದೆ. ಹೀಗಾಗಿ ತಿಂಗಳ ಆರಂಭದಲ್ಲೇ ಹಣ ಜಮೆ ಮಾಡಿ.

ಭರವಸೆ ಉಳಿಸಿಕೊಂಡ ಷೇರುಪೇಟೆ
ಹಲವು ಏರಿಳಿತಗಳ ನಡುವೆಯೂ 2018-19 ನೇ ಆರ್ಥಿಕ ವರ್ಷದಲ್ಲಿ ಸೆನ್ಸೆಕ್ ಮತ್ತು ನಿಫ್ಟಿ ಸೂಚ್ಯಂಕಗಳು ಭರವಸೆ ಮೂಡಿಸಿವೆ.

ಹಿಂದಿನ ಆರ್ಥಿಕ ವರ್ಷದಲ್ಲಿ ಸೆನ್ಸೆಕ್ಸ್ ಶೇ 17 ರಷ್ಟು ಪ್ರಗತಿ ಸಾಧಿಸಿದ್ದರೆ, ನಿಫ್ಟಿ ಶೇ 14 ರಷ್ಟು ಏರಿಕೆ ಕಂಡಿದೆ.2017-18 ನೇ ಸಾಲಿನಲ್ಲಿ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಕ್ರಮವಾಗಿ ಶೇ 10 ಮತ್ತು ಶೇ 11 ರಷ್ಟು ಪ್ರಗತಿ ದಾಖಲಿಸಿದ್ದವು.

ಜಾಗತಿಕ ಮಾರುಕಟ್ಟೆಗಳಲ್ಲಿ ಹಿಂಜರಿಕೆ ಇದ್ದರೂ, ಭಾರತದ ಆರ್ಥಿಕ ವ್ಯವಸ್ಥೆಗೆ ಇರುವ ಭದ್ರ ಬುನಾದಿ, ವಿದೇಶಿ ಸಾಂಸ್ಥಿಕ ಹೂಡಿಕೆಯಲ್ಲಿ ಹೆಚ್ಚಳ, ದಿನಬಳಕೆ ವಸ್ತುಗಳ ಬೆಲೆ ಕಡಿತ, ಕಚ್ಚಾ ತೈಲ ಬೆಲೆ ಇಳಿಕೆ ಸೇರಿ ಹಲವು ಸಂಗತಿಗಳು ದೇಶಿ ಮಾರುಕಟ್ಟೆಗೆ ಶಕ್ತಿ ತುಂಬಿವೆ. ಕಾರ್ಪೊರೇಟ್ ಗಳಿಕೆಯಲ್ಲಿನ ಸುಧಾರಣೆ ಹಾಗೂ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಾಗಿ ಹೇಳಿರುವ ಸಮೀಕ್ಷೆಗಳು ಹೂಡಿಕೆದಾರ ಉತ್ಸಾಹ ಹೆಚ್ಚಿಸುವೆ.

ಜಾಗತಿಕ ಮಾರುಕಟ್ಟೆಗಳ ಸ್ಥಿತಿಗತಿ: ಜಾಗತಿಕ ಮಾರುಕಟ್ಟೆಗಳ ಪೈಕಿ ಡೋ ಜೋನ್ಸ್ ಸೂಚ್ಯಂಕ ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 8 ರಷ್ಟು ಏರಿಕೆ ಕಂಡಿದ್ದರೆ, ನ್ಯಾಸ್ ಡ್ಯಾಕ್ ಶೇ 10 ರಷ್ಟು ಗಳಿಸಿಕೊಂಡಿದೆ.

ಏಷ್ಯಾದಲ್ಲಿ, ನಿಕೈ 225 ಸೂಚ್ಯಂಕ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಶಾಂಘೈ, ಹ್ಯಾಂಗ್ ಸೇಂಗ್ ಮತ್ತು ಕೋಪ್ಸಿ ಕ್ರಮವಾಗಿ ಶೇ 2, ಶೇ 3, ಹಾಗು ಶೇ 12 ರಷ್ಟು ಕುಸಿತ ಕಂಡಿವೆ.

ವಲಯವಾರು ಅವಲೋಕನ: ನಿಫ್ಟಿ ವಲಯವಾರು ಮಾಹಿತಿಗೆ ಬಂದರೆ, ಬ್ಯಾಂಕಿಂಗ್ ವಲಯ ಶೇ 25 ರಷ್ಟು ಬೆಳವಣಿಗೆ ಸಾಧಿಸಿದೆ.

ಇಂಧನ, ಮಾಹಿತಿ ತಂತ್ರಜ್ಞಾನ, ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಎಫ್ಎಂಸಿಜಿ ವಲಯಗಳು ಶೇ 16 ರಿಂದ ಶೇ 25 ರಷ್ಟು ಪ್ರಗತಿ ಕಂಡಿವೆ. ಮಾಧ್ಯಮ, ವಾಹನ ತಯಾರಿಕೆ, ಲೋಹ, ಮತ್ತು ರಿಯಲ್ ಎಸ್ಟೇಟ್ ವಲಯಗಳು ಕುಸಿದಿವೆ.

ಗಳಿಕೆ-ಇಳಿಕೆ: ನಿಫ್ಟಿ, ಸೆನ್ಸೆಕ್ಸ್ ಸೂಚ್ಯಂಕಗಳಲ್ಲಿ ಬಜಾಜ್ ಫೈನಾನ್ಸ್ ಶೇ 70 ರಷ್ಟು ಪ್ರಗತಿ ದಾಖಲಿಸಿ ಅತ್ಯುನ್ನತ ಸ್ಥಾನದಲ್ಲಿದೆ.

ರಿಲಯನ್ಸ್ ಇಂಡಸ್ಟ್ರೀಸ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಿಸಿಎಸ್ ಕಂಪನಿಗಳು ನಿಫ್ಟಿ (50) ರ ಉನ್ನತ ಪಟ್ಟಿಯಲ್ಲಿವೆ.

ಟಾಟಾ ಮೋಟರ್ಸ್ ಶೇ 45 ರಷ್ಟು ಕುಸಿತ ಕಂಡು ಭಾರಿ ಹಿನ್ನಡೆ ಅನುಭವಿಸಿದೆ. ವೇದಾಂತ, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಹೀರೊ ಮೋಟೊ ಕಾರ್ಪ್ ಮತ್ತು ಐಷರ್ ಮೋಟರ್ಸ್ ನಿಫ್ಟಿ (50) ಯಲ್ಲಿ ಕುಸಿತ ಕಂಡಿರುವ ಪ್ರಮುಖ ಕಂಪನಿಗಳಾಗಿವೆ.

ಆನಂದ್
ಆನಂದ್

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT