ಸೋಮವಾರ, ಏಪ್ರಿಲ್ 6, 2020
19 °C
ಷೇರುಪೇಟೆ ಮಹಾ ಕುಸಿತ

1,448 ಅಂಶ ಕುಸಿದ ಸೆನ್ಸೆಕ್ಸ್: ನಿಮಿಷಗಳಲ್ಲಿ ಕರಗಿದ ₹5 ಲಕ್ಷ ಕೋಟಿ ಸಂಪತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆ

ಬೆಂಗಳೂರು: ದೇಶದ ಷೇರುಪೇಟೆ ಶುಕ್ರವಾರ ದಿಢೀರ್‌ ಕುಸಿತ ಕಂಡಿದೆ. ಕೊರೊನಾ ವೈರಸ್‌ ಪ್ರಭಾವ ಚೀನಾದಿಂದ ಹೊರಗೂ ವ್ಯಾಪಿಸಿರುವುದರಿಂದ ಜಾಗತಿಕ ಷೇರುಪೇಟೆಗಳಲ್ಲೂ ಮಾರಾಟ ಒತ್ತಡ ಸೃಷ್ಟಿಯಾಗಿದೆ. ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್‌ 1000ಕ್ಕೂ ಅಧಿಕ ಅಂಶಗಳ ತೀವ್ರ ಕುಸಿತದಿಂದ ಆತಂಕದ ಸ್ಥಿತಿ ಎದುರಾಯಿತು. ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,448 ಅಂಶಗಳ ಇಳಿಕೆಯೊಂದಿಗೆ 38,297 ಅಂಶ ತಲುಪಿತು. 

ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 423 ಅಂಶ ಇಳಿಕೆಯಾಗಿ 11,210 ಅಂಶಗಳನ್ನು ಮುಟ್ಟಿತು. ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ ₹5 ಲಕ್ಷ ಕೋಟಿ ಕೊಚ್ಚಿ ಹೋಯಿತು. ಮುಂಬೈ ಷೇರುಪೇಟೆಯ ಸುಮಾರು 1,700 ಕಂಪನಿಗಳ ಷೇರು ನಷ್ಟಕ್ಕೆ ಒಳಗಾದವು. 

ಫೆಬ್ರುವರಿ 24ರಿಂದ 28ರ ವರೆಗೂ, ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 2,300 ಅಂಶಗಳಿಗೂ ಅಧಿಕ ಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್‌ ಭೀತಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಪರಿಣಾಮ ದೇಶದ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ. 2008ರಲ್ಲಿ ಉಂಟಾಗಿದ್ದ ಜಾಗತಿಕ ಮಟ್ಟದ ಷೇರುಪೇಟೆ ಮಹಾ ಕುಸಿತದ ನಂತರ ಇದೀಗ ಅತಿ ದೊಡ್ಡ ಪತನ ದಾಖಲಾಗಿದೆ. 

ಕೊರೊನಾ ಪ್ರಭಾವದಿಂದ ಅಮೆರಿಕ ಷೇರುಪೇಟೆ ಡೌ ಜೋನ್ಸ್‌ನಲ್ಲಿ 1,190.95 ಅಂಶಗಳ ಕುಸಿತ ಕಂಡಿರುವುದು ಏಷ್ಯಾ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಜಪಾನ್‌ದ ಟೋಕಿಯೊ ಷೇರುಪೇಟೆ ಶೇ 3.5 ಹಾಗೂ ಚೀನಾದ ಶಾಂಘೈ ಷೇರುಪೇಟೆ ಶೇ 2.5ರಷ್ಟು ಇಳಿ ಮುಖವಾಗಿವೆ. 

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ಟಿಸಿಎಸ್‌, ಎಚ್‌ಡಿಎಫ್‌ಸಿ ಹಾಗೂ ಇನ್ಫೊಸಿಸ್‌ ಷೇರುಗಳು ಶೇ 3–4ರಷ್ಟು ಕುಸಿತ ಕಂಡಿವೆ. ಬಜಾಜ್‌ ಫೈನಾನ್ಸ್‌, ಟೆಕ್‌ ಮಹೀಂದ್ರಾ ಮತ್ತು ಟಾಟಾ ಸ್ಟೀಲ್‌ ಷೇರುಗಳು ಶೇ 4–5ರಷ್ಟು ಇಳಿಕೆಯಾಗಿವೆ. ಹೂಡಿಕೆದಾರರಲ್ಲಿ ಮಹಾ ಭೀತಿ ಎದುರಾಗಿದೆ. 

ಸರ್ಕಾರ ಡಿಸೆಂಬರ್‌ ತ್ರೈಮಾಸಿಕದ ಆರ್ಥಿಕ ವೃದ್ಧಿ ದರದ ಅಂಕಿ ಅಂಶಗಳನ್ನು ಇಂದು ಪ್ರಕಟಿಸಲಿದೆ. ಕೆಲವು ಸಮೀಕ್ಷೆಗಳ ಪ್ರಕಾರ, ಹಿಂದಿನ ತ್ರೈಮಾಸಿಕದ ಜಿಡಿಪಿಗಿಂತಲೂ ಹೆಚ್ಚಾಗಲಿದ್ದು, ಶೇ 4.7 ಆಗಿರಲಿದೆ. ಇನ್ನೂ ಕೆಲವು ವಿಶ್ಲೇಷಕರ ಪ್ರಕಾರ ಜಿಡಿಪಿ ಶೇ 4.5 ತಲುಪುವುದೇ ಸವಾಲಿನ ಕಾರ್ಯ. 

ಮುಂಬೈ ಷೇರುಪೇಟೆಯಲ್ಲಿ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿದ್ದು, ಸೂಚ್ಯಂಕ ಶೇ 2.5ರಷ್ಟು ಇಳಿಕೆಯಾಗಿದೆ. 

ಕೊರೊನಾ ವೈರಸ್‌ ಸೋಂಕಿನಿಂದ ಸುಮಾರು 2,800 ಮಂದಿ ಸಾವಿಗೀಡಾಗಿದ್ದು, ಜಾಗತಿಕವಾಗಿ 83,000 ಜನರಿಗೆ ಸೋಂಕು ತಗುಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು