ಗುರುವಾರ , ಡಿಸೆಂಬರ್ 5, 2019
20 °C

ಸೆಪ್ಟೆಂಬರ್‌ನಲ್ಲಿ ಕರಗಿದ ₹14 ಲಕ್ಷ ಕೋಟಿ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವವರಿಗೆ ಸೆಪ್ಟೆಂಬರ್‌ ತಿಂಗಳು ಆಘಾತ ನೀಡಿದೆ. ಕರಡಿ ಕುಣಿತದಿಂದ  ಈ ತಿಂಗಳಿನಲ್ಲಿ ಹೂಡಿಕೆದಾರರ ಸಂಪತ್ತು ₹ 14 ಲಕ್ಷ ಕೋಟಿಯಷ್ಟು ಕೊಚ್ಚಿ ಹೋಗಿದೆ.

ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ಆಗಸ್ಟ್‌ 31ರಲ್ಲಿ ₹ 159 ಲಕ್ಷ ಕೋಟಿ ಇತ್ತು. ಇದು ಸೆಪ್ಟೆಂಬರ್‌ 28ರ ಅಂತ್ಯಕ್ಕೆ  ₹ 145 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಒಂದು ವಾರದ ವಹಿವಾಟಿನಲ್ಲಿಯೇ ಅಂದರೆ ಸೆ. 24 ರಿಂದ ಸೆ. 28ರವರೆಗೆ ಹೂಡಿಕೆದಾರರ ಸಂಪತ್ತು ₹ 5.44 ಲಕ್ಷ ಕೋಟಿ ಕರಗಿದೆ.

ಸೆಪ್ಟೆಂಬರ್‌ನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಶೇ 6 ರಷ್ಟು ಇಳಿಕೆ ಕಂಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ, ಜಾಗತಿಕ ವಾಣಿಜ್ಯ ಸಮರವು ಸೆಪ್ಟೆಂಬರ್‌ನಲ್ಲಿ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ.

ವಾರದ ವಹಿವಾಟು: ಸತತ ನಾಲ್ಕನೇ ವಾರದ ವಹಿವಾಟಿನಲ್ಲಿಯೂ ನಕಾರಾತ್ಮಕ ಪರಿಣಾಮ ಮುಂದುವರಿದಿದ್ದು, ಸೂಚ್ಯಂಕಗಳು ಇಳಿಕೆ ಕಂಡವು.

ಸಂವೇದಿ ಸೂಚ್ಯಂಕ ವಾರದ ವಹಿವಾಟಿನಲ್ಲಿ 614 ಅಂಶ ಇಳಿಕೆ ಕಂಡು 36,227 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 223 ಅಂಶ ಇಳಿಕೆಯಾಗಿ 10,930 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ದರ ಸೂಕ್ಷ್ಮ ವಲಯಗಳು ಅದರಲ್ಲಿಯೂ ಮುಖ್ಯವಾಗಿ ಹಣಕಾಸು ಮತ್ತು ವಾಹನ ವಲಯಗಳು ಹೆಚ್ಚಿನ ನಷ್ಟ ಅನುಭವಿಸಿವೆ. ಈ ವಲಯಗಳು ಷೇರುಪೇಟೆಯ ಬಂಡವಾಳ ಮೌಲ್ಯದ ಶೇ 43 ರಷ್ಟು ಇವೆ. ಮೌಲ್ಯದ ಲೆಕ್ಕದಲ್ಲಿ ₹ 6.14 ಲಕ್ಷ ಕೋಟಿ ಪಾಲು ಹೊಂದಿವೆ. 

ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತ, ಬಾಂಡ್‌ ಗಳಿಕೆ ಹೆಚ್ಚಾಗುತ್ತಿರುವುದು ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟಕ್ಕೆ ಗಮನ ನೀಡಿರುವುದು ವಾರದ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ನಗದು ಕೊರತೆ ಆತಂಕ: ಮೂಲಸೌಕರ್ಯ ಹೊರಗುತ್ತಿಗೆ ಮತ್ತು ಹಣಕಾಸು ಸೇವೆಗಳ ಕಂಪನಿಯು ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸಾಲ ಬಾಕಿ ಉಳಿಸಿಕೊಂಡಿದೆ. ಇದರಿಂದ ಈ ಸಂಸ್ಥೆಗಳಲ್ಲಿ ನಗದು ಕೊರತೆ ಎದುರಾಗುವ ಆತಂಕ ಮೂಡಿತ್ತು. ಹೀಗಾಗಿ ಈ ಸಂಸ್ಥೆಗಳ ಷೇರುಗಳು ಹೆಚ್ಚಿನ ಇಳಿಕೆಗೆ ಒಳಗಾದವು.

ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಷೇರುಗಳು ಶೇ 4.46ರಷ್ಟು, ಇಂಡಿಯಾಬುಲ್ಸ್‌ ಹೌಸಿಂಗ್ ಫೈನಾನ್ಸ್‌ (ಶೇ 8.91) ಮತ್ತು ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಷೇರುಗಳು (ಶೇ 5.08) ಇಳಿಕೆಯಾಗಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು