ಗುರುವಾರ , ಡಿಸೆಂಬರ್ 12, 2019
16 °C
ಮಾರಾಟದ ಒತ್ತಡಕ್ಕೆ ನಡುಗಿದ ಷೇರುಪೇಟೆ

ಮುಂದುವರಿದ ನಕಾರಾತ್ಮಕ ವಹಿವಾಟು: 4 ದಿನದಲ್ಲಿ ₹ 5.66 ಲಕ್ಷ ಕೋಟಿ ಖೋತಾ

Published:
Updated:

ಮುಂಬೈ: ನಾಲ್ಕು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 5.66 ಲಕ್ಷ ಕೋಟಿಯಷ್ಟು ಕರಗಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ಶುಕ್ರವಾರದ ಅಂತ್ಯಕ್ಕೆ ₹ 150.34 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದಕ್ಕೂ ಹಿಂದಿನ ವಾರ ಅಂದರೆ ಸೆ. 14ರ ಅಂತ್ಯಕ್ಕೆ ಬಂಡವಾಳ ಮೌಲ್ಯ 156 ಲಕ್ಷ ಕೋಟಿ ಇತ್ತು. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ)  37,278 ಅಂಶಗಳಲ್ಲಿ ವಹಿವಾಟು ಆರಂಭಿಸಿತು. ಮಧ್ಯಾಹ್ನದ ನಂತರ ದಿಢೀರನೆ 1,127 ಅಂಶಗಳ ಭಾರಿ ಕುಸಿತ ಕಂಡಿತು. ಇದರಿಂದ ಕನಿಷ್ಠ ಮಟ್ಟವಾದ 35,994 ಅಂಶಗಳಿಗೆ ಇಳಿಕೆಯಾಗಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ  900 ಅಂಶಗಳಷ್ಟು ಚೇತರಿಕೆಯನ್ನೂ ಕಂಡುಕೊಂಡಿತು.

ದಿನದ ವಹಿವಾಟಿನ ಅಂತ್ಯದ ಹೊತ್ತಿಗೆ ನಷ್ಟದ ಪ್ರಮಾಣ ಕಡಿಮೆಯಾಗಿ 280 ಅಂಶಗಳ ಇಳಿಕೆಯೊಂದಿಗೆ 36,841 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 91 ಅಂಶ ಇಳಿಕೆಯಾಗಿ 11,143 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಯೆಸ್‌ ಬ್ಯಾಂಕ್‌ ಹಾಗೂ ಗೃಹ ಹಣಕಾಸು ಸಂಸ್ಥೆಗಳ ಷೇರುಗಳು ಭಾರಿ ಇಳಿಕೆಗೆ ಒಳಗಾಗಿದ್ದರಿಂದ ನಕಾರಾತ್ಮಕ ವಹಿವಾಟು ನಡೆಯಿತು.

ರಿಯಲ್‌ ಎಸ್ಟೇಟ್‌, ಆರೋಗ್ಯ ಸೇವೆ, ಬ್ಯಾಂಕಿಂಗ್‌, ಮಾಹಿತಿ ತಂತ್ರಜ್ಞಾನ, ವಾಹನ, ತಂತ್ರಜ್ಞಾನ, ವಿದ್ಯುತ್‌, ಗ್ರಾಹಕ ಬಳಕೆ ವಸ್ತುಗಳು, ಎಫ್‌ಎಂಸಿಜಿ, ಬೃಹತ್‌ ಯಂತ್ರೋಪಕರಣಗಳು, ಮೂಲಸೌಕರ್ಯ, ಲೋಹ ವಲಯದ ಷೇರುಗಳು ಶೇ 3.65ರವರೆಗೂ ಇಳಿಕೆ ಕಂಡಿವೆ.

ಏರಿಳಿತಕ್ಕೆ ಕಾರಣಗಳೇನು: ಮೂಲಸೌಕರ್ಯ ಹೊರಗುತ್ತಿಗೆ ಮತ್ತು ಹಣಕಾಸು ಸೇವೆಗಳ (ಐಎಲ್‌ಎಫ್‌ಎಸ್‌) ವಲಯವು ₹ 100 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ. ಇದರಿಂದ ಬ್ಯಾಂಕ್‌ಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಬುಧವಾರ ವರದಿ ನೀಡಿತ್ತು.

ಅಲ್ಲದೆ, ಯೆಸ್‌ ಬ್ಯಾಂಕ್‌ ಸಿಇಒ ರಾಣಾ ಕಪೂರ್‌ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಆರ್‌ಬಿಐ ನಿರಾಕರಿಸಿದೆ. ಈ ಬೆಳವಣಿಗೆಗಳು ಶುಕ್ರವಾರದ ವಹಿವಾಟಿನ ಏರಿಳಿತ ಸೃಷ್ಟಿಸಿದವು.

 

ವಾರದ ವಹಿವಾಟು

1,249 ಅಂಶ

ವಾರದ ವಹಿವಾಟಿನಲ್ಲಿ ಬಿಎಸ್‌ಇ ಇಳಿಕೆ 

372 ಅಂಶ

ವಾರದ ವಹಿವಾಟಿನಲ್ಲಿ ನಿಫ್ಟಿ ಇಳಿಕೆ

₹ 2,184 ಕೋಟಿ

ಬುಧವಾರ ವಿದೇಶಿ ಬಂಡವಾಳ ಹೊರಹರಿವು

₹ 1,201 ಕೋಟಿ

ಬುಧವಾರ ದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆ 

ಪ್ರತಿಕ್ರಿಯಿಸಿ (+)