ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳತ್ತ ಬೆರಳು ತೋರಿದ ಸಿ.ಎಂ

ತೂತ್ತುಕುಡಿ ಗೋಲಿಬಾರ್‌: ಪೊಲೀಸ್‌ ಕ್ರಮದ ವಿರುದ್ಧ ಸ್ಟಾಲಿನ್ ಪ್ರತಿಭಟನೆ
Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಚೆನ್ನೈ/ತೂತ್ತುಕುಡಿ: ತೂತ್ತುಕುಡಿಯಲ್ಲಿ 11 ಜನರನ್ನು ಬಲಿ ತೆಗೆದುಕೊಂಡ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಹಿಂಸಾಚಾರಕ್ಕೆ ವಿರೋಧ ಪಕ್ಷಗಳು ಮತ್ತು ಸಮಾಜ ಘಾತುಕ ಶಕ್ತಿಗಳು ಕಾರಣ ಎಂದು ಹೇಳಿದ್ದಾರೆ.

‘ನಡೆದಿರುವ ಘಟನೆಗಳು ದುರದೃಷ್ಟಕರ’ ಎಂದು ಹೇಳಿ, ಸಂತಾಪ ಸೂಚಿಸಿದ್ದಾರೆ. ಕಾರ್ಖಾನೆ ಸ್ಥಗಿತಕ್ಕೆ ಆಗ್ರಹಿಸಿ ಈ ಹಿಂದೆ ನಡೆದಿದ್ದ ಎಲ್ಲ ಪ್ರತಿಭಟನೆಗಳು ಶಾಂತಿಯುತವಾಗಿದ್ದವು ಎಂದು ಹೇಳಿದ್ದಾರೆ.

‘ಈ ಬಾರಿ ಮಾತ್ರ ಅದು ಹಿಂಸಾಚಾರಕ್ಕೆ ತಿರುಗಿತು. ಕೆಲವು ರಾಜಕೀಯ ಪಕ್ಷಗಳ ಪ್ರಚೋದನೆ ಮತ್ತು ಸಮಾಜ ವಿರೋಧಿ ಶಕ್ತಿಗಳ ಒಳನುಸುಳುವಿಕೆಯಿಂದ ಈ ರೀತಿ ಆಗಿದೆ’ ಎಂದು ಅವರು ಹೇಳಿದ್ದಾರೆ.

ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಸ್ತಾಪಿಸಿದ ಅವರು, ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಉದ್ದೇಶಪೂರ್ವಕವಾಗಿ ಹಿಂಸಾಚಾರ ಸೃಷ್ಟಿಸಲಾಗಿದೆ ಎಂದು ದೂರಿದ್ದಾರೆ.

ಪರಿಸ್ಥಿತಿ ಶಾಂತ: ತೂತ್ತುಕುಡಿಯಲ್ಲಿ ಗುರುವಾರ ಹಿಂಸಾಚಾರ ನಡೆದಿಲ್ಲ. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆಯಾದರೂ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಪ್ರಕರಣ ದಾಖಲು?: ಬುಧವಾರ ತೂತ್ತುಕುಡಿಗೆ ಭೇಟಿ ನೀಡಿ ನಿಷೇಧಾಜ್ಞೆ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಟಾಲಿನ್‌, ನಟ–ರಾಜಕಾರಣಿ ಕಮಲ್‌ ಹಾಸನ್‌ ಮತ್ತು ಎಂಡಿಎಂಕೆ ನಾಯಕ ವೈಕೋ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

**

ಅಂಗಡಿಗೆ ಹೊರಟವಳ ತಲೆಗೆ ಗುಂಡು

ಚೆನ್ನೈ: ತೂತ್ತುಕುಡಿ ಕಡಲ ಕಿನಾರೆಯ ಸಮೀಪದ ತಿರುಸೇಪುರದ ಮನೆಯಿಂದ ಝಾನ್ಸಿ ರಾಣಿ ಮಂಗಳವಾರ ಸಂಜೆ ಹೊರಬಂದದ್ದು ಹತ್ತಿರದ ಕಿರಾಣಿ ಅಂಗಡಿಗೆ ಹೋಗುವುದಕ್ಕೆ. ಆಗಲೇ ದೊಡ್ಡ ಪೊಲೀಸ್‌ ತುಕಡಿಯೊಂದು ನಿತ್ಯದ ಗಸ್ತಿಗೆ ಎಂಬಂತೆ ಅಲ್ಲಿಗೆ ಬಂತು. ಅಲ್ಲಿ ಸೇರಿದ್ದ ಯುವಕರ ಗುಂಪನ್ನು ಸುತ್ತುವರಿಯಿತು.

‘ಯುವಕರನ್ನು ಯಾಕೆ ಸುತ್ತುವರಿದಿದ್ದೀರಿ’ ಎಂದು ಝಾನ್ಸಿ ರಾಣಿ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಹಾಗೆ ಪ್ರಶ್ನಿಸುವ ಧೈರ್ಯ ಆಕೆಯ ಸ್ವಭಾವವೇ ಆಗಿತ್ತು ಎಂದು ನೆರೆಯವರು ಹೇಳುತ್ತಾರೆ. ರಾಣಿ ಅವರು ಪ್ರಶ್ನಿಸುತ್ತಿದ್ದಂತೆಯೇ ಎರಡೂ ಕಡೆಗಳಿಂದ ಪೊಲೀಸರತ್ತ ಕಲ್ಲುಗಳು ತೂರಿ ಬಂದವು. ಆರಂಭದಲ್ಲಿ ಲಘು ಲಾಠಿ ಪ್ರಹಾರದ ಮೊರೆ ಹೋದ ಪೊಲೀಸರು ನಂತರ ಗುಂಪು ಚದುರಿಸಲು ಬಂದೂಕು ಬಳಸಿದರು.

ತಲೆ ಬುರುಡೆಗೆ ಗುಂಡು ಹೊಕ್ಕ ರಾಣಿ ಸ್ಥಳದಲ್ಲೇ ಮೃತಪಟ್ಟರು. ‘ಆ ಸಾವು ಎಷ್ಟು ಘೋರವಾಗಿತ್ತು ಎಂದರೆ ತಲೆಬುರುಡೆ ಒಡೆದು ಮಿದುಳು ರಸ್ತೆಯಲ್ಲಿ ಚೆಲ್ಲಾಡಿತು. ಪೊಲೀಸರು ಅಲ್ಲಿಗೆ ನಿಲ್ಲಿಸಲಿಲ್ಲ. ಅವರು ಆಕೆಯ ದೇಹವನ್ನು ಎಳೆದು ವಾಹನವೊಂದಕ್ಕೆ ತುರುಕಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು’ ಎಂದು ರಾಣಿಯ ಸಂಬಂಧಿಕ ರಾಬರ್ಟ್‌ ವಿಲ್ಲವರಯಾರ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಶಾಂತಿಯುತವಾಗಿಯೇ ಇದ್ದ ಸ್ಥಳಕ್ಕೆ ನಿತ್ಯದ ಗಸ್ತಿಗೆ ಬರುವಾಗ ಪೊಲೀಸರು ಬಂದೂಕುಗಳನ್ನು ಯಾಕೆ ತಂದಿದ್ದರು? ಪೊಲೀಸರ ಉದ್ದೇಶವೇ ಪ್ರಶ್ನಾರ್ಹ’ ಎಂದು ರಾಬರ್ಟ್‌ ಹೇಳುತ್ತಾರೆ. ಯಾವ ಪ್ರಚೋದನೆಯೂ ಇಲ್ಲದೆ ರಾಣಿಯತ್ತ ಪೊಲೀಸರು ಗುಂಡು ಹಾರಿಸಿದರು. ಅಲ್ಲಿದ್ದ ಗಂಡಸರ ಮೇಲೆ ಹಲ್ಲೆ ನಡೆಸಿ, ಹಲವು ಯುವಕರನ್ನು ವಶಕ್ಕೆ ಪಡೆದರು ಎಂದು ರಾಣಿಯ ನೆರೆಯವರು ಆರೋಪಿಸುತ್ತಾರೆ.

ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಚದುರಿಸುವುದಕ್ಕಾಗಿಯೇ ಪೊಲೀಸರು ಈ ಹಿಂಸೆಯನ್ನು ಸೃಷ್ಟಿಸಿದ್ದಾರೆ ಎಂದು ಈ ಪ್ರದೇಶದ ಹಲವರು ಹೇಳುತ್ತಾರೆ. ಪ್ರತಿಭಟನಕಾರರ ಮೇಲೆ ಮುಗಿ ಬೀಳುವುದಕ್ಕಾಗಿಯೇ ಅವರನ್ನು ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಆವರಣದ ಒಳಗೆ ಬಿಟ್ಟರು ಎಂದು ಬೆಸ್ತ ರಾಬರ್ಟ್‌ ಹೇಳಿದ್ದಾರೆ.

‘ಜಿಲ್ಲಾಧಿಕಾರಿ ಕಚೇರಿ ಹತ್ತಿರದಲ್ಲಿ ನಾವು ಗುಂಪಾಗಿ ನಿಂತಿದ್ದೆವು. ಜನರ ಕಿರುಚಾಟ ಮತ್ತು ಗುಂಡಿನ ಸದ್ದು ಅಲ್ಲಿಗೆ ಕೇಳಿಸುತ್ತಿತ್ತು. ಗೋಲಿಬಾರ್‌ನ ನಿರ್ಧಾರ ಕೊನೆಯ ಕ್ಷಣದಲ್ಲಿ ಕೈಗೊಂಡಿದ್ದಾದರೆ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲುವುದು ಹೇಗೆ ಸಾಧ್ಯವಾಯಿತು’ ಎಂದು ಅವರು ಪ್ರಶ್ನಿಸುತ್ತಾರೆ.

ಇದು ಉದ್ದೇಶಪೂರ್ವಕ ಗೋಲಿಬಾರ್‌ ಮತ್ತು ಜನರನ್ನು ಗುರುತಿಸಿ ಗುರಿಯಿಟ್ಟು ಗುಂಡು ಹಾರಿಸಲಾಗಿದೆ ಎಂಬ ಆರೋಪವನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಅಲ್ಲಗಳೆದಿದ್ದಾರೆ.

**

ಶುಕ್ರವಾರ ತಮಿಳುನಾಡು ಬಂದ್‌ಗೆ ಕರೆ

ತೂತ್ತುಕುಡಿಯಲ್ಲಿ ಪೊಲೀಸರ ಕ್ರಮ ಖಂಡಿಸಿ ಡಿಎಂಕೆ ಮತ್ತು ಮಿತ್ರಪಕ್ಷಗಳು ಶುಕ್ರವಾರ ತಮಿಳುನಾಡು ಬಂದ್‌ಗೆ ಕರೆ ನೀಡಿವೆ.

25ರಂದು (ಶುಕ್ರವಾರ) ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್ವ ಪಕ್ಷಗಳು ಪ್ರತಿಭಟನೆ ನಡೆಸಬೇಕು ಎಂದು ಡಿಎಂಕೆ ಮಂಗಳವಾರ ಕರೆ ನೀಡಿತ್ತು. ಪೊಲೀಸರ ಕ್ರಮದ ವಿರುದ್ಧ ಮತ್ತು ತೂತ್ತುಕುಡಿಯಲ್ಲಿರುವ ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕವನ್ನು ಮುಚ್ಚುವಂತೆ ಬಂದ್‌ ನಡೆಸಲಾಗುವುದು ಎಂದು ಡಿಎಂಕೆ ಬುಧವಾರ ತಡರಾತ್ರಿ ತಿಳಿಸಿದೆ.

**

ಘಟನೆಯ ಬಗ್ಗೆ ವಿಷಾದವಿದೆ. ನಾನು ಜನರ ಪರವಾಗಿದ್ದೇನೆ. ಅವರ ಇಚ್ಛೆಗೆ ಅನುಗುಣವಾಗಿ ಅದೇ ಸ್ಥಳದಲ್ಲಿ ಉದ್ಯಮ ಮುಂದುವರಿಸಲು ಬಯಸುತ್ತೇನೆ.

–ಅನಿಲ್‌ ಅಗರ್‌ವಾಲ್‌, ಸ್ಟೆರ್‌ಲೈಟ್‌ನ ಮಾತೃಸಂಸ್ಥೆ ವೇದಾಂತ ಕಂಪನಿಯ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT