ಗುರುವಾರ , ಮೇ 28, 2020
27 °C

ಮತ್ತೆ ಕುಸಿದ ಬ್ಯಾಂಕಿಂಗ್‌ ವಲಯದ ಷೇರುಗಳು; ಚೇತರಿಕೆ ಕಾಣದ ಸೆನ್ಸೆಕ್ಸ್, ನಿಫ್ಟಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆ

ಬೆಂಗಳೂರು: ಶುಕ್ರವಾರ ದೇಶದ ಷೇರುಪೇಟೆಗಳು ಇಳಿಮುಖವಾಗಿವೆ. ಜಾಗತಿಕ ಷೇರುಪೇಟೆಗಳಲ್ಲಿ ಚೇತರಿಕೆ ಹಾಗೂ ಕಚ್ಚಾ ತೈಲ ದರ ಅಲ್ಪ ಏರಿಕೆ ಕಂಡು ಬಂದಿದ್ದರೂ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದು, ಬ್ಯಾಂಕ್‌ ಹಾಗೂ ಫೈನಾನ್ಶಿಯಲ್‌ ವಲಯದ ಷೇರುಗಳು ಇಳಿಕೆ ಕಂಡಿವೆ. 

ಆರಂಭದಲ್ಲಿಯೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 340 ಅಂಶ (ಶೇ 1.2) ಇಳಿಕೆಯಾಗಿ 27,920 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 105 ಅಂಶ ಇಳಿಕೆಯೊಂದಿಗೆ 8,160 ಅಂಶ ಮುಟ್ಟಿದೆ. 

ಕೊಟ್ಯಾಕ್‌ ಮಹೀಂದ್ರಾ ಬ್ಯಾಂಕ್‌ ಶೇ 7, ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 5, ಐಸಿಐಸಿಐ ಬ್ಯಾಂಕ್‌ ಹಾಗೂ ಎಚ್‌ಡಿಎಫ್‌ಸಿ ಷೇರುಗಳು ಶೇ 4ರಷ್ಟು ಕುಸಿದಿವೆ. ಸಿಪ್ಲಾ, ಐಟಿಸಿ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಸನ್‌ ಫಾರ್ಮಾ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಶೇ 6ರಿಂದ ಶೇ 2ರ ವರೆಗೂ ಏರಿಕೆ ದಾಖಲಿಸಿವೆ. 

ಕೋವಿಡ್‌–19 ಪ್ರಕರಣಗಳು ಏರಿಕೆಯಾದ ಕಾರಣ ಮಾರ್ಚ್‌ನಲ್ಲಿ ಭಾರತದ ಷೇರುಪೇಟೆಗಳಲ್ಲಿ ಗಳಿಕೆ–ಇಳಿಕೆಯ ಆಟ ನಡೆಯಿತು. ಮಾರಾಟ ಒತ್ತಡ ನಿರ್ಮಾಣವಾಗುವ ಮೂಲಕ ಹೂಡಿಕೆದಾರರ ₹3.3 ಲಕ್ಷ ಕೋಟಿ ಸಂಪತ್ತು ಕರಗಿತು. ವಿದೇಶಿ ಹೂಡಿಕೆದಾರರು ₹58,632 ಕೋಟಿ ಮೌ್ಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 

ಬೆಳಿಗ್ಗೆ 10:30ಕ್ಕೆ ಸೆನ್ಸೆಕ್ಸ್‌ 368.67 ಅಂಶ ಕಡಿಮೆಯಾಗಿ 27,896.64 ಅಂಶಗಳಲ್ಲಿ ವಹಿವಾಟು ನಡೆದಿದೆ. ನಿಫ್ಟಿ 100 ಅಂಶ ಕಡಿಮೆಯಾಗಿ 8,153.20 ಅಂಶ ತಲುಪಿದೆ. 

ಕಚ್ಚಾ ತೈಲ ದರ ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್‌ಗಳು ಶೇ 21ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 29.94 ತಲುಪಿದೆ. ತೈಲ ದರ ಏರಿಕೆ ಹಿಂದೆಯೇ ಜಾಗತಿಕ ಷೇರುಪೇಟೆಗಳು ಚೇತರಿಕೆ ಕಂಡಿವೆ. ಬಜಾಜ್ ಕಂಪನಿ ವಾಹನಗಳ ಮಾರಾಟ ಶೇ 55ರಷ್ಟು ಇಳಿಕೆಯಾಗಿದೆ. ಇದು ದೇಶದ ಆಟೊ ವಲಯದ ಪರಿಸ್ಥಿತಿಯನ್ನು ಸಾರುವಂತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು