ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ನಾಶಕ ಅಲ್ಲ ಎಲ್‌ಐಸಿ; ಸಣ್ಣ ಹೂಡಿಕೆದಾರರಿಗೆ ತಜ್ಞರ ಕಿವಿಮಾತು

Last Updated 16 ಜೂನ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ದೇಶದ ಷೇರುಪೇಟೆಗಳಲ್ಲಿ ವಹಿವಾಟು ಆರಂಭಿಸಿದ ಒಂದು ತಿಂಗಳಲ್ಲಿ ಷೇರು ಮೌಲ್ಯವು ನೀಡಿಕೆ ಬೆಲೆಗೆ ಹೋಲಿಸಿದರೆ ಶೇಕಡ 29.66ರಷ್ಟು ಕುಸಿದಿದೆ.

ಎಲ್‌ಐಸಿ ಷೇರು ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿ ಶುಕ್ರವಾರಕ್ಕೆ ಒಂದು ತಿಂಗಳು ಆಗುತ್ತಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಸಂದರ್ಭದಲ್ಲಿ ಎಲ್‌ಐಸಿಯ ಪ್ರತಿ ಷೇರನ್ನು ಹೂಡಿಕೆದಾರರಿಗೆ ₹ 949ಕ್ಕೆ ನೀಡಲಾಗಿದೆ. ಗುರುವಾರದ ಅಂತ್ಯಕ್ಕೆ ಷೇರು ಮೌಲ್ಯವು ₹ 667.50ಕ್ಕೆ ತಲುಪಿದೆ.

‘ಎಲ್‌ಐಸಿಯ ಲಾಭ, ಅದು ಹೊಂದಿರುವ ಆಸ್ತಿ, ಸರ್ಕಾರದ ಮಾಲೀಕತ್ವ ಕಂಡು ಸಣ್ಣ ಹೂಡಿಕೆದಾರರು ಐಪಿಒ ವೇಳೆ ಮುಗಿಬಿದ್ದು ಹೂಡಿಕೆ ಮಾಡಿದ್ದರು. ಆದರೆ, ಷೇರು ಖರೀದಿಸಿದ್ದವರು ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಈಗ ಏನು ಮಾಡುವುದು ಎಂದು ಪ್ರಶ್ನಿಸುತ್ತಿದ್ದಾರೆ’ ಎಂದು ಷೇರು ಬ್ರೋಕರೇಜ್ ಸೇವಾ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

ಎಲ್‌ಐಸಿಯು ಷೇರು ಮಾರುಕಟ್ಟೆ ಪ್ರವೇಶಿಸಿ ಒಂದು ತಿಂಗಳು ಮಾತ್ರವೇ ಆಗಿರುವ ಕಾರಣ, ಅದನ್ನು ‘ಸಂಪತ್ತು ನಾಶಕ’ ಎಂದು ಹೇಳುವುದು ಸರಿಯಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಅಪಾರ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಸಿರುವ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಕೋಟಕ್ ಬ್ಯಾಂಕ್, ಇನ್ಫೊಸಿಸ್ ಮತ್ತು ಎಚ್‌ಯುಎಲ್‌ ಕಂಪನಿಗಳ ಷೇರುಗಳು ಕೂಡ ದೀರ್ಘಾವಧಿಗೆ ಒಳ್ಳೆಯ ಸಾಧನೆ ತೋರಿಸಿರದಿದ್ದ ನಿದರ್ಶನಗಳು ಇವೆ. ಈಗಿನ ಸಂದರ್ಭದಲ್ಲಿ ಹಣಕಾಸು ವಲಯದ ಷೇರುಗಳು ಏರುಗತಿಯಲ್ಲಿಲ್ಲ. ವಿದೇಶಿ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುತ್ತಿರುವುದು ಇದಕ್ಕೆ ಮುಖ್ಯ ಕಾರಣ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ಡಾ.ವಿ.ಕೆ. ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಪರಿಸ್ಥಿತಿಯು ಬದಲಾಗುತ್ತದೆ. ಮಾರುಕಟ್ಟೆಯಲ್ಲಿ ತೇಜಿ ವಹಿವಾಟು ಶುರುವಾದ ನಂತರದಲ್ಲಿ ಎಲ್‌ಐಸಿ ಮೌಲ್ಯ ಕೂಡ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಎಲ್‌ಐಸಿಗೆ ಮೊದಲು ಷೇರು ಮಾರುಕಟ್ಟೆ ಪ್ರವೇಶಿಸಿರುವ ಕೇಂದ್ರ ಸರ್ಕಾರದ ಮಾಲೀಕತ್ವದ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (ಐಆರ್‌ಎಫ್‌ಸಿ), ರೇಲ್‌ಟೆಲ್‌ ಕಂಪನಿಗಳ ಷೇರುಗಳೂ ನೀಡಿಕೆ ಬೆಲೆಗಿಂತ ಕಡಿಮೆ ಮಟ್ಟದಲ್ಲಿವೆ. ರೇಲ್‌ಟೆಲ್‌ ಷೇರುಗಳನ್ನು ₹ 94ರಂತೆ ನೀಡಲಾಗಿತ್ತು. 2021ರ ಫೆಬ್ರುವರಿಯಲ್ಲಿ ಮಾರುಕಟ್ಟೆ ಪ್ರವೇಶಿಸಿದ ಇದರ ಬೆಲೆ ಗುರುವಾರದ ಅಂತ್ಯಕ್ಕೆ ₹ 91.75 ಆಗಿತ್ತು.

ಐಆರ್‌ಎಫ್‌ಸಿ ಷೇರುಗಳನ್ನು ₹ 26ರಂತೆ ನೀಡಲಾಗಿತ್ತು. 2021ರ ಜನವರಿಯಲ್ಲಿ ಮಾರುಕಟ್ಟೆ ಪ್ರವೇಶಿಸಿದ ಇದರ ಬೆಲೆ ಗುರುವಾರದ ಅಂತ್ಯಕ್ಕೆ ₹ 20.05 ಆಗಿತ್ತು.‘ಎಲ್‌ಐಸಿ ಷೇರುಗಳ ಈಗಿನ ಬೆಲೆ ಆಕರ್ಷಕವಾಗಿದೆ.

ಐಪಿಒ ಸಂದರ್ಭದಲ್ಲಿ ಎಲ್‌ಐಸಿ ಷೇರು ಖರೀದಿಸಿದವರೂ ಈಗ ಮತ್ತಷ್ಟು ಖರೀದಿಸಿ, ಸರಾಸರಿ ಖರೀದಿ ಬೆಲೆಯನ್ನು ತಗ್ಗಿಸಿಕೊಳ್ಳಬಹುದು’ ಎಂದು ಅವರು ಸಲಹೆ ನೀಡಿದರು.

‘ಐಪಿಒ ಮೂಲಕ ಷೇರು ಖರೀದಿಸಿ, ರಾತ್ರೋರಾತ್ರಿ ಲಾಭ ಮಾಡಿಕೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂಬ ಪಾಠವನ್ನು ಎಲ್‌ಐಸಿ ವಿದ್ಯಮಾನವು ಸಣ್ಣ ಹೂಡಿಕೆದಾರರಿಗೆ ಕಲಿಸಿದೆ’ ಎಂದು ವೆಂಚುರಾ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ವಿನೀತ್ ಬೊಲಿಂಜ್ಕರ್ ಹೇಳಿದರು.

‘ಯುದ್ಧ, ಕಚ್ಚಾ ತೈಲದ ಬೆಲೆ ಏರಿಕೆ, ಬಡ್ಡಿ ದರ ಏರಿಕೆಯ ಸಂದರ್ಭವು ಐಪಿಒಗೆ ಸೂಕ್ತವಾಗಿರಲಿಲ್ಲ’ ಎಂದು ಅವರು ಹೇಳಿದರು. ಐಆರ್‌ಸಿಟಿಸಿ ಹೊರತುಪಡಿಸಿದರೆ, ಕೇಂದ್ರ ಸರ್ಕಾರದ ಕಂಪನಿಗಳು ಹೂಡಿಕೆದಾರರ ಹಣದಮೌಲ್ಯ ತಗ್ಗಿಸಿದ ಉದಾಹರಣೆಗಳಿವೆ ಎಂದರು. ಭೀತಿಗೆ ಒಳಗಾಗಿ ಷೇರುಗಳನ್ನು ಮಾರಾಟ ಮಾಡುವುದಕ್ಕಿಂತ,ಅವುಗಳನ್ನು ಇರಿಸಿಕೊಳ್ಳುವುದು ಒಳ್ಳೆಯದು ಎಂದು ಅವರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT