ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ: ಹೂಡಿಕೆಗೆ ಮೊದಲು ಇವುಗಳನ್ನು ಗಮನಿಸಿ

Last Updated 3 ಜನವರಿ 2022, 19:30 IST
ಅಕ್ಷರ ಗಾತ್ರ

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಕಂಡುಬರುತ್ತಿರುವ ಉತ್ಸಾಹವು ಭಾರತದಲ್ಲಿಯೂ ಇದೆ. ಭಾರತದಲ್ಲಿನ ಕಂಪನಿಗಳುಈಚಿನ ಕೆಲವುತಿಂಗಳುಗಳಲ್ಲಿ ಐಪಿಒ ಮೂಲಕ ದಾಖಲೆಯ ಮೊತ್ತದ ಬಂಡವಾಳ ಸಂಗ್ರಹ ಮಾಡಿವೆ. ಅರ್ನ್ಸ್ಟ್ ಆ್ಯಂಡ್‌ ಯಂಗ್ ಸಂಸ್ಥೆ ಸಿದ್ಧಪಡಿಸಿದ, ಇತ್ತೀಚಿನ ಐಪಿಒ ಕುರಿತ ಜಾಗತಿಕ ಟ್ರೆಂಡ್ ವರದಿಯಲ್ಲಿ, 2021ರ ಮೊದಲಾರ್ಧದಲ್ಲಿ ಭಾರತದಲ್ಲಿನ ಐಪಿಒ ಗಾತ್ರವು ಶೇಕಡ 163ರಷ್ಟು ಹೆಚ್ಚಾಗಿದೆ ಎಂಬ ವಿವರ ಇದೆ.

ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಐಪಿಒ ಪ್ರವಾಹ ಇರುವ ಕಾರಣ, ಹೂಡಿಕೆದಾರರಿಗೆ ಹಲವು ಅವಕಾಶಗಳು ಲಭ್ಯವಾಗಿವೆ.ಆದಾಗ್ಯೂ, ಐಪಿಒಗಳಲ್ಲಿ ಉತ್ತಮ ಹೂಡಿಕೆ ಅವಕಾಶವನ್ನುಹುಡುಕುವುದು ಕಷ್ಟದ ಕೆಲಸ. ಐಪಿಒದಲ್ಲಿ ಹೂಡಿಕೆ ಮಾಡಲು ಕಂಪನಿಯೊಂದನ್ನು ಆಯ್ಕೆ ಮಾಡುವಾಗ, ಇಲ್ಲಿ ಹೇಳಿರುವ ಅಂಶಗಳನ್ನು ಪರಿಗಣಿಸಬಹುದು.

ವಹಿವಾಟನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಪ್ರಾಥಮಿಕ ಅರ್ಜಿಯನ್ನು ಓದುವುದು

ಮೊದಲಿಗೆ, ಕಂಪನಿಯು ಇದುವರೆಗೆ ಯಾವ ಬಗೆಯ ಸಾಧನೆ ತೋರಿದೆ, ಕಂಪನಿಯ ವ್ಯವಹಾರದ ಮಾದರಿ ಏನು, ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಅವರ ಸಾಮರ್ಥ್ಯ ಏನು ಎಂಬುದನ್ನು ಅರಿಯಿರಿ. ಕಂಪನಿಯು ತನ್ನ ಪ್ರತಿಸ್ಪರ್ಧಿಗಳಿಗಿಂತ ಹೇಗೆ ಮುಂದಿದೆ ಎಂಬುದನ್ನು ಅರಿಯಲು ಅದು ಇತರ ಕಂಪನಿಗಳಿಗಿಂತ ವೈಶಿಷ್ಟ್ಯವಾದ ಏನನ್ನು ಗ್ರಾಹಕರಿಗೆ ನೀಡುತ್ತಿದೆ ಎಂಬುದನ್ನು ಗಮನಿಸಬೇಕು. ಕಂಪನಿಯ ಆರ್ಥಿಕ ಆರೋಗ್ಯ ಮತ್ತು ಆ ಕಂಪನಿಯ ಆಡಳಿತ ಮಂಡಳಿಯಲ್ಲಿ ಇರುವವರ ಬಗ್ಗೆ ನಿಮಗೆ ವಿಶ್ವಾಸ ಮೂಡಿದಲ್ಲಿ ನೀವು ಮುಂದಿನ ಪ್ರಕ್ರಿಯೆಗಳ ಕಡೆ ಚಿತ್ತ ಹರಿಸಬಹುದು. ಐಪಿಒಗೆ ಮುಂದಾಗುವ ಕಂಪನಿಗಳು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸುವ ಪ್ರಾಥಮಿಕ ಅರ್ಜಿಯಲ್ಲಿ, ಕಂಪನಿಗಳು ತಮ್ಮ ಪ್ರತಿಸ್ಪರ್ಧಿಗಳ ಜೊತೆಗಿನ ಹೋಲಿಕೆಯ ವಿವರಗಳನ್ನು ನೀಡಿರುತ್ತವೆ.ಐಪಿಒಗೆ ಮುಂದಾಗುವ ಎಲ್ಲ ಕಂಪನಿಗಳು ಈ ಪ್ರಾಥಮಿಕ ಅರ್ಜಿಯನ್ನು ಸೆಬಿಗೆ ಸಲ್ಲಿಸುತ್ತವೆ. ಈ ಅರ್ಜಿಯಲ್ಲಿ ಕಂಪನಿಯ ಕಾರ್ಯಕ್ಷಮತೆ, ಕಂಪನಿಗೆ ಸಂಬಂಧಿಸಿದ ಮಾಧ್ಯಮ ವರದಿಗಳು, ಕಂಪನಿಯ ವೆಬ್‍ಸೈಟ್ ವಿಳಾಸ, ಕಂಪನಿಯ ವಾರ್ಷಿಕ ಆರ್ಥಿಕ ವರದಿ ಮತ್ತು ನೀವು ಪರಿಶೀಲಿಸಬಹುದಾದ ಇತರ ಅಗತ್ಯ ಮಾಹಿತಿಗಳು ಇರುತ್ತವೆ.

ಬೆಳವಣಿಗೆ ಸಾಮರ್ಥ್ಯ ಮತ್ತು ಆಡಳಿತ ಮಂಡಳಿಯ ಪಾತ್ರ
ಗಟ್ಟಿಯಾದ ಬೆಳವಣಿಗೆ ಸಾಮರ್ಥ್ಯವನ್ನು ತೋರಿರುವ ಕಂಪನಿ, ಐಪಿಒ ಸಂದರ್ಭದಲ್ಲಿ ಹೂಡಿಕೆ ಮಾಡಲು ಸೂಕ್ತ. ಕಂಪನಿಯ ಆದಾಯವು ಗಣನೀಯ ಪ್ರಮಾಣದಲ್ಲಿ ಇದೆ ಎನ್ನುವುದಷ್ಟೇ ಆ ಕಂಪನಿಯ ಬೆಳವಣಿಗೆ ಸಾಮರ್ಥ್ಯಕ್ಕೆ ಕನ್ನಡಿ ಅಲ್ಲ. ಕಂಪನಿಯಲ್ಲಿ ಹೂಡಿಕೆ ಮಾಡಲು ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ನೀವು ಅದು ಯಾರ ಜೊತೆ ಪಾಲುದಾರಿಕೆ ಹೊಂದಿದೆ, ಸಹಭಾಗಿತ್ವ ಹೊಂದಿದೆ, ಹೊಸ ಕಾಲದ ತಂತ್ರಜ್ಞಾನದಲ್ಲಿ ಅದು ಹೂಡಿಕೆ ಮಾಡಿದೆಯೇ, ಹೊಸತಾಗಿ ಅದು ಏನು ಮಾಡುತ್ತಿದೆ ಎಂಬುದನ್ನೆಲ್ಲ ಗಮನಿಸಬೇಕು.ಕಂಪನಿಯು ಕಾರ್ಯನಿರ್ವಹಿಸುತ್ತಿರುವ ನಿರ್ದಿಷ್ಟಉದ್ಯಮ ಕ್ಷೇತ್ರದ ಬೆಳವಣಿಗೆಯ ಸಾಮರ್ಥ್ಯದ ಆಧಾರದಲ್ಲಿ, ಆ ಕಂಪನಿಯುಮುಂಬರುವ ವರ್ಷಗಳಲ್ಲಿ ಎಷ್ಟು ಮೌಲ್ಯಯುತ ಆಗಬಹುದು ಎನ್ನುವುದನ್ನು ಅಂದಾಜು ಮಾಡಬೇಕು.

‍ಪ್ರವರ್ತಕರು ಮತ್ತು ವ್ಯವಸ್ಥಾಪಕರ ಸ್ಥಾನದಲ್ಲಿ ಇರುವವರು ಯಾವುದೇ ಕಂಪನಿಯ ಚಟುವಟಿಕೆಗಳ ಚಾಲಕ ಶಕ್ತಿ ಇದ್ದಂತೆ.ಕಂಪನಿಯ ಉನ್ನತ ಹುದ್ದೆಗಳಲ್ಲಿ ಇರುವವರು ಎಷ್ಟು ವರ್ಷಗಳಿಂದ ಅಲ್ಲಿ ಇದ್ದಾರೆ ಎಂಬುದನ್ನು ಪರಿಶೀಲಿಸಿದರೆ, ಅಲ್ಲಿನಕೆಲಸದ ಸಂಸ್ಕೃತಿ ಹಾಗೂ ಸ್ಥಿರತೆ, ಕೆಲಸದವಾತಾವರಣ ಕುರಿತು ಒಂದಿಷ್ಟು ಅರಿವು ಸಿಗುತ್ತದೆ.

ಐಪಿಒ ಮೂಲಕ ಸಂಗ್ರಹಿಸಿದ ಬಂಡವಾಳದ ಬಳಕೆ
ಐಪಿಒ ಮೂಲಕ ಸಂಗ್ರಹಿಸಲಾಗುವ ಬಂಡವಾಳವನ್ನು ಸೂಕ್ತ ರೀತಿಯಲ್ಲಿ ಬಳಸಲಾಗುತ್ತದೆಯೇ ಎಂಬುದನ್ನುಪರಿಶೀಲಿಸುವುದು ಬಹಳ ಮುಖ್ಯ. ಐಪಿಒ ಪ್ರಕ್ರಿಯೆಯಲ್ಲಿ ಸಂಗ್ರಹ ಆಗುವ ಆದಾಯವನ್ನು ಬಳಸಿ ಸಾಲಗಳನ್ನು ತೀರಿಸಲಾಗುತ್ತದೆ ಎಂದು ಕಂಪನಿ ಹೇಳಿದರೆ, ಅಂತಹ ಕಂಪನಿಯಲ್ಲಿ ಹೂಡಿಕೆ ಮಾಡುವುದು ಅಷ್ಟೊಂದು ಆಕರ್ಷಕ ಆಗಲಿಕ್ಕಿಲ್ಲ. ಆದರೆ, ಕಂಪನಿಯು ತನ್ನ ಸಾಲಗಳನ್ನು ತೀರಿಸಿ, ತನ್ನ ವಹಿವಾಟುಗಳ ಮೇಲೆ ಹಣ ಹೂಡಿಕೆ ಮಾಡಲು ಮುಂದಾಗಿದೆ ಎಂದಾದಲ್ಲಿ ಅಥವಾ ಇತರ ಕಾರ್ಪೊರೇಟ್ ಉದ್ದೇಶಗಳಿಗೆ ಬಳಕೆ ಮಾಡಲಿದೆ ಎಂದಾದಲ್ಲಿ ಅಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ತೀರ್ಮಾನ ಆಗಬಹುದು.

ಐಪಿಒಗಳಲ್ಲಿ ಯಾವಾಗ ಹೂಡಿಕೆ ಮಾಡಬಹುದು?
ನೀವು ಯಾವಾಗ ಐಪಿಒಗಳಲ್ಲಿ ಹಣ ಹೂಡಿಕೆ ಮಾಡಬೇಕು ಎಂಬುದನ್ನು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ತೀರ್ಮಾನ ಮಾಡಬಹುದು.

*ಒಳ್ಳೆಯ ಕಂಪನಿಗಳು: ಕಾರ್ಯದಕ್ಷತೆ ಚೆನ್ನಾಗಿ ಇರುವ ಹಾಗೂ ಮೊದಲಿನಿಂದಲೂ ಒಳ್ಳೆಯ ಸಾಧನೆ ತೋರುತ್ತ ಬಂದಿರುವ ಕಂಪನಿಗಳ ಐಪಿಒಗಳಲ್ಲಿ ಹೂಡಿಕೆ ಮಾಡಬಹುದು.

* ಐಪಿಒಗೆ ಮುಂದಾಗುತ್ತಿರುವುದಕ್ಕೆ ಕಾರಣ: ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟಕ್ಕೆ ಮುಕ್ತವಾಗಿಸುತ್ತಿರುವುದು ಯಾವ ಕಾರಣಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಐಪಿಒ ಮೂಲಕ ಸಂಗ್ರಹ ಆಗುವ ಹಣವನ್ನು ಕಂಪನಿಯು ಯಾವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಿದೆ ಎನ್ನುವುದನ್ನು ಪರಿಶೀಲಿಸಿ.

* ವಲಯದ ಸಾಧನೆ: ಯಾವುದೇ ಕಂಪನಿಯ ಷೇರುಗಳನ್ನು, ಇನ್ನೊಂದರ ಜೊತೆ ಹೋಲಿಕೆ ಮಾಡದೆ ನೋಡುವ ಪರಿಪಾಠ ಬೇಡ. ಆ ಕಂಪನಿ ಇರುವ ಉದ್ಯಮ ವಲಯದಬೆಳವಣಿಗೆಯ ಸಾಧ್ಯತೆಗಳು, ಅಲ್ಲಿನ ಸಾಧನೆ, ಆ ವಲಯದಲ್ಲಿ ಇರುವ ಹೆಚ್ಚುಗಾರಿಕೆ ಹಾಗೂ ಅವಕಾಶಗಳ ಬಗ್ಗೆ ಗಮನ ಇರಲಿ.

* ಮಾರುಕಟ್ಟೆಯಲ್ಲಿನ ಚಲನೆ: ಷೇರು ಮಾರುಕಟ್ಟೆಗಳು ದಿನದಿನವೂ ಏರುಗತಿಯಲ್ಲಿ ಇದ್ದಾಗ ಹೂಡಿಕೆದಾರರು ಹೆಚ್ಚು ಆಶಾವಾದಿಗಳಾಗಿ ಇರುತ್ತಾರೆ. ಆದರೆ, ನೀವು ಹೂಡಿಕೆ ಮಾಡಿದ ಕಂಪನಿಯ ಷೇರು ಮೌಲ್ಯವು ಹೆಚ್ಚಾಗುತ್ತದೆ ಎಂಬುದನ್ನು ಅದು ಖಾತರಿಪಡಿಸುವುದಿಲ್ಲ. ಮಾರುಕಟ್ಟೆಯಲ್ಲಿನ ಏರಿಳಿತಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಏರುಗತಿಯಲ್ಲಿ ಇದ್ದಾಗ ಅಲ್ಲಿ ಎಲ್ಲರೂ ಲಾಭ ಗಳಿಸಲು ಯತ್ನಿಸುತ್ತಿರುತ್ತಾರೆ. ಹಾಗಾಗಿ, ಮಾರುಕಟ್ಟೆಗಳು ಏರುಗತಿಯಲ್ಲಿ ಇದ್ದಾಗ ಎಚ್ಚರಿಕೆಯಿಂದ ಹೆಜ್ಜೆ ಇರಿಸಿ.

ಐಪಿಒ ಮಾರುಕಟ್ಟೆಯಲ್ಲಿ, ಕಂಪನಿಗಳ ಬಗ್ಗೆ ಚೆನ್ನಾಗಿ ಅರಿತಿರುವ, ಒಂದಿಷ್ಟು ಅನುಮಾನಗಳನ್ನು ಹೊಂದಿರುವ ಹೂಡಿಕೆದಾರ ಹೆಚ್ಚು ಲಾಭ ಮಾಡಿಕೊಳ್ಳಬಲ್ಲ. ಹಾಗಾಗಿ, ಹೂಡಿಕೆ ಮಾಡುವ ಮೊದಲು ಕಂಪನಿಗಳ ಬಗ್ಗೆ ಸರಿಯಾಗಿ ಅರಿತುಕೊಳ್ಳಿ.

(ಲೇಖಕ ಅಪ್‌ಸ್ಟಾಕ್ಸ್‌ನ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT