ದಾಖಲೆ ವಹಿವಾಟು ಅಂತ್ಯ: ಸೂಚ್ಯಂಕ 85 ಅಂಶ ಇಳಿಕೆ

7

ದಾಖಲೆ ವಹಿವಾಟು ಅಂತ್ಯ: ಸೂಚ್ಯಂಕ 85 ಅಂಶ ಇಳಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ನಡೆಯುತ್ತಿದ್ದ ದಾಖಲೆ ಮಟ್ಟದ ವಹಿವಾಟಿಗೆ ಶುಕ್ರವಾರ ಅಂತ್ಯಗೊಂಡಿದೆ. ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದ ವಹಿವಾಟು ನಡೆಸಿದ್ದರ ಪರಿಣಾಮವಾಗಿ ಸೂಚ್ಯಂಕಗಳು ಅಲ್ಪ ಇಳಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 81 ಅಂಶ ಇಳಿಕೆಯಾಗಿ 38,251 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 25 ಅಂಶ ಇಳಿಕೆ ಕಂಡು 11,557 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಗುರುವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟವಾದ 11,582 ಅಂಶಗಳನ್ನು ತಲುಪಿತ್ತು.

ಎರಡೂ ಸೂಚ್ಯಂಕಗಳು ಸತತ ಐದನೆ ವಾರವೂ ಉತ್ತಮ ಗಳಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿವೆ.

ಹಣಕಾಸು, ಎಫ್‌ಎಂಸಿಜಿ, ಗ್ರಾಹಕ ಬಳಕೆ ಉತ್ಪನ್ನಗಳು, ಐ.ಟಿ ಮತ್ತು ವಾಹನ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.

ಫಲ ನೀಡದ ಮಾತುಕತೆ: ವಾಣಿಜ್ಯ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕ ಮತ್ತು ಚೀನಾ ದೇಶಗಳು ನಡೆಸಿದ ಮಾತುಕತೆ ಯಾವುದೇ ಫಲ ನೀಡಿಲ್ಲ. ಯಾವುದೇ ನಿರ್ಧಾರಕ್ಕೆ ಬರದೆ ಸಭೆ ಅಂತ್ಯವಾಗಿದೆ. ಇದು ಮತ್ತೆ ವಾಣಿಜ್ಯ ಬಿಕ್ಕಟ್ಟು ಹೆಚ್ಚಾಗುವ ಆತಂಕ ಮೂಡಿಸಿದೆ. ಇದರಿಂದಾಗಿ ಹೂಡಿಕೆದಾರರು ಲಾಭ ಗಳಿಕೆಗೆ ಹೆಚ್ಚು ಗಮನ ನೀಡಿದರು.

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಸಹ ದೇಶದ ಮಾರುಕಟ್ಟೆಯ ಮೇಲೆ ಒತ್ತಡ ತರುತ್ತಿದೆ.

ಕಚ್ಚಾ ತೈಲ ದರ ಏರಿಕೆ ಕಾಣುತ್ತಿದೆ. ರೂಪಾಯಿ ಮೌಲ್ಯ ಇಳಿಮುಖವಾಗಿದೆ. ಇದು ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಪರಾಮರ್ಶೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಪ್ರಮಾಣವನ್ನು ನಿರ್ಧರಿಸಲಿವೆ.

* ₹ 142 ಕೋಟಿ ಗುರುವಾರ ದೇಶಿ ಸಾಂಸ್ಥಿಕ ಹೂಡಿಕೆ

* ₹ 433 ಕೋಟಿ ಗುರುವಾರ ವಿದೇಶಿ ಬಂಡವಾಳ ಹೂಡಿಕೆ

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !