ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಇ ವಂಚನೆ ಪ್ರಕರಣ: ಚಿತ್ರಾ ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Last Updated 5 ಮಾರ್ಚ್ 2022, 14:04 IST
ಅಕ್ಷರ ಗಾತ್ರ

ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ)ಯ ಮಾಜಿ ಸಿಇಒ–ಎಂಡಿ ಚಿತ್ರಾ ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ರದ್ದು ಮಾಡಿದೆ.

ವಂಚನೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ರಕ್ಷಣೆ ಪಡೆಯಲು ಚಿತ್ರಾ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಚಿತ್ರಾ ಅವರ ಅರ್ಜಿಗೆ ತನಿಖಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿದೆ.

ಫೆಬ್ರುವರಿ 24 ರಂದು ಎನ್‌ಎಸ್‌ಇಯ ಮಾಜಿ ಸಮೂಹ ನಿರ್ವಹಣಾ ಅಧಿಕಾರಿ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ, ಅವರನ್ನು ಮಾರ್ಚ್ 6ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿತ್ತು.

ಎನ್‌ಎಸ್‌ಇ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಚಿತ್ರಾ ರಾಮಕೃಷ್ಣ ಅವರು ಷೇರು ಖರೀದಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾದ ಹಿಮಾಲಯದ ನಿಗೂಢ ಯೋಗಿ ಯಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು ಈಗಾಗಲೇ ಒಂದು ಬಾರಿ ಚಿತ್ರಾ ರಾಮಕೃಷ್ಣ ಅವರನ್ನು ತನಿಖೆಗೆ ಒಳಪಡಿಸಿದೆ.

ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್‌ ಪ್ರೈ.ಲಿ. ಕಂಪನಿಯ ಮಾಲೀಕ ಸಂಜಯ್ ಗುಪ್ತಾ ಎನ್‌ಎಸ್‌ಇಯ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಎನ್‌ಎಸ್‌ಇ ಸರ್ವರ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಇದೆ. 2010ರಿಂದ 2012ರ ನಡುವೆ ಈ ಖಾಸಗಿ ಕಂಪನಿಗೆ ಷೇರುಪೇಟೆಯ ಸರ್ವರ್‌ಗೆ ಮೊದಲಿಗನಾಗಿ ಲಾಗಿನ್ ಆಗಲು ಎನ್‌ಎಸ್‌ಇಯ ಕೆಲವು ಅಧಿಕಾರಿಗಳು ಅಕ್ರಮವಾಗಿ ಅನುಕೂಲ ಮಾಡಿಕೊಡುತ್ತಿದ್ದರು. ಇದರಿಂದಾಗಿ ಈ ಕಂಪನಿಗೆ ಬೇರೆ ಯಾವುದೇ ಬ್ರೋಕರ್‌ಗಿಂತ ಮೊದಲು ಕೆಲವು ದತ್ತಾಂಶಗಳು ಸಿಗುತ್ತಿದ್ದವು ಎಂದು ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್ಐಆರ್‌)ಯಲ್ಲಿ ಹೇಳಿದೆ.

ಚಿತ್ರಾ ಅವರು ಹಿಮಾಲಯ ಪರ್ವತಗಳಲ್ಲಿ ವಾಸಿಸುವ ಯೋಗಿಯೊಬ್ಬರ ಮಾತು ಕೇಳಿ ಆನಂದ್ ಸುಬ್ರಮಣಿಯನ್ ಅವರನ್ನು ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಹುದ್ದೆಗೆ ನೇಮಕ ಮಾಡಿದ್ದರು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈಚೆಗೆ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT