ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌: ಹೂಡಿಕೆ ಮೌಲ್ಯ ಹೆಚ್ಚಳ

Last Updated 15 ಅಕ್ಟೋಬರ್ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: 2020ರ ಆಗಸ್ಟ್‌ನಿಂದ ಈ ವರ್ಷದ ಆಗಸ್ಟ್‌ವರೆಗಿನ ಅವಧಿಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸರಿಸುಮಾರು ಶೇಕಡ 47ರಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ದೇಶದಲ್ಲಿನ ಮ್ಯೂಚುವಲ್‌ ಫಂಡ್‌ಗಳಲ್ಲಿ ಆಗಿರುವ ಹೂಡಿಕೆಗಳ ಮೌಲ್ಯವು ಶೇ 29.92ರಷ್ಟು ಹೆಚ್ಚಳ ಕಂಡಿದೆ.

ವೈಯಕ್ತಿಕ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳಲ್ಲಿ ಮಾಡಿರುವ ಹೂಡಿಕೆ ಮೊತ್ತವು ಈ ವರ್ಷದ ಆಗಸ್ಟ್‌ಗೆ ₹ 19.40 ಲಕ್ಷ ಕೋಟಿಗೆ ತಲುಪಿದೆ. ಇದು, ಹಿಂದಿನ ವರ್ಷದ ಆಗಸ್ಟ್‌ನಲ್ಲಿದ್ದ ಹೂಡಿಕೆ ಮೌಲ್ಯಕ್ಕೆ ಹೋಲಿಸಿದರೆ ಶೇಕಡ 35.48ರಷ್ಟು ಜಾಸ್ತಿ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ.

ಮ್ಯೂಚುವಲ್‌ ಫಂಡ್‌ಗಳಲ್ಲಿ ಆಗುವ ಹೂಡಿಕೆಗೆ ಅತಿಹೆಚ್ಚಿನ ಕೊಡುಗೆ ನೀಡುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೆಯ ಸ್ಥಾನದಲ್ಲಿ ಇದೆ. ಮುಂಬೈ ಮತ್ತು ದೆಹಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿ ಇವೆ ಎಂದು ಒಕ್ಕೂಟ ತಿಳಿಸಿದೆ.

‘ಸಣ್ಣ ಹೂಡಿಕೆದಾರರು ನಿಶ್ಚಿತ ಠೇವಣಿ ಹಾಗೂ ಚಿನ್ನ ಹೊರತುಪಡಿಸಿ ಇತರ ಹೂಡಿಕೆಗಳ ಮೇಲೆ ಬಹಳ ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಮ್ಯೂಚುವಲ್‌ ಫಂಡ್ ಹೂಡಿಕೆ ಜಾಸ್ತಿಯಾಗಿದೆ. ಹಣಕಾಸು ತಂತ್ರಜ್ಞಾನ ಕಂಪನಿಗಳು ಹೂಡಿಕೆಯನ್ನು ಸುಲಭವಾಗಿಸಿವೆ. ಈಕ್ವಿಟಿ, ಸಾಲಪತ್ರ ಆಧಾರಿತ ಫಂಡ್‌ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಫಂಡ್‌ಗಳಲ್ಲಿ ಹೂಡಿಕೆಗೆ ಅವಕಾಶ ಲಭ್ಯವಾಗಿರುವುದು ಕೂಡ ಒಂದು ಮುಖ್ಯ ಕಾರಣ’ ಎಂದು ಮೋತಿಲಾಲ್ ಓಸ್ವಾಲ್ ಮ್ಯೂಚುವಲ್‌ ಫಂಡ್ ಕಂಪನಿಯ ಸಹಾಯಕ ನಿರ್ದೇಶಕ ಅಖಿಲ್ ಚತುರ್ವೇದಿ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

ಕೋವಿಡ್‌ ಮೊದಲ ಅಲೆಯ ನಂತರದಲ್ಲಿ ದೇಶದ ಈಕ್ವಿಟಿ ಮಾರುಕಟ್ಟೆಗಳಲ್ಲಿನ ಹೂಡಿಕೆಯ ಮೌಲ್ಯವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೇ ಅವಧಿಯಲ್ಲಿ, ವೈಯಕ್ತಿಕ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಮಾಡಿರುವ ಹೂಡಿಕೆಗಳ ಮೌಲ್ಯ ಕೂಡ ಶೇಕಡ 35.48ರಷ್ಟು ಹೆಚ್ಚಳ ಕಂಡಿದೆ. ವೈಯಕ್ತಿಕ ಹೂಡಿಕೆದಾರರ ಹೂಡಿಕೆ ಮೌಲ್ಯವು 2020ರ ಆಗಸ್ಟ್‌ನಲ್ಲಿ 14.32 ಲಕ್ಷ ಕೋಟಿ ಆಗಿತ್ತು. ಇದು ಈ ವರ್ಷದ ಆಗಸ್ಟ್‌ನಲ್ಲಿ 19.40 ಲಕ್ಷ ಕೋಟಿಗೆ ಏರಿದೆ. ಈ ಅವಧಿಯಲ್ಲಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆ ಮೌಲ್ಯವು ಶೇ 24.02ರಷ್ಟು ಮಾತ್ರ ಏರಿಕೆ ಆಗಿದೆ.

‘ಸಾಂಕ್ರಾಮಿಕದ ಅವಧಿಯಲ್ಲಿ ಜನರು ಅಗತ್ಯ ಹಾಗೂ ಅಗತ್ಯವಲ್ಲದ ವೆಚ್ಚಗಳ ಬಗ್ಗೆ ಅರಿತರು. ಇದರಿಂದಾಗಿ ಉಳಿತಾಯ ಪ್ರಮಾಣ ಹೆಚ್ಚಾಯಿತು. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ಕಡಿಮೆ ಇರುವುದು ಕೂಡ ಮ್ಯೂಚುವಲ್‌ ಫಂಡ್‌ಗಳ ಮೂಲಕ ಜನ ಈಕ್ವಿಟಿ ಮಾರುಕಟ್ಟೆಗಳಲ್ಲಿ ಭಾಗವಹಿಸುವುದನ್ನು ಜಾಸ್ತಿ ಮಾಡಿದೆ’ ಎಂದು ಎಡೆಲ್ವೈಸ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ದೀಪಕ್ ಜೈನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT