ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಗಳಿಕೆ ವಹಿವಾಟು: ₹ 16,306 ಕೋಟಿ ಮೌಲ್ಯದ ಷೇರು ಮಾರಿದ ಎಂಎಫ್‌

Last Updated 7 ಮಾರ್ಚ್ 2021, 12:23 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮ್ಯೂಚುವಲ್ ಫಂಡ್‌ ಸಂಸ್ಥೆಗಳು ಲಾಭ ಗಳಿಸಿಕೊಳ್ಳುವ ಉದ್ದೇಶದಿಂದ ಫೆಬ್ರುವರಿಯಲ್ಲಿ ₹ 16,306 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಇದರಿಂದಾಗಿ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳಿಂದ ಸತತ 9ನೇ ತಿಂಗಳಿನಲ್ಲಿಯೂ ಬಂಡವಾಳ ಹಿಂತೆಗೆತ ನಡೆದಂತಾಗಿದೆ.

‘ಷೇರುಪೇಟೆಯ ಏರುಮುಖ ಚಲನೆ ಕಡಿಮೆ ಆಗುವವರೆಗೂ, ಅದು ಸ್ಥಿರತೆಯತ್ತ ಬರುವವರೆಗೂ ಬಂಡವಾಳ ಹಿಂತೆಗೆತ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಫೈಯರ್ಸ್‌ನ ಸಂಶೋಧನಾ ಮುಖ್ಯಸ್ಥ ಗೋಪಾಲ್‌ ಕಾವಲಿರೆಡ್ಡಿ ತಿಳಿಸಿದ್ದಾರೆ.

ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು 2020ರಲ್ಲಿ ಒಟ್ಟಾರೆ ₹ 56,400 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿವೆ ಎನ್ನುವ ಮಾಹಿತಿಯು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿದೆ (ಸೆಬಿ).

‘ಅತಿದೊಡ್ಡ ಕುಸಿತದ ಬಳಿಕ ಯಾವಾಗ ಮಾರುಕಟ್ಟೆಯು ಏರಿಕೆ ಕಾಣುತ್ತದೆಯೋ ಆಗ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುತ್ತಾರೆ. ಕೋವಿಡ್‌ಗೂ ಮೊದಲು ಎರಡು ವರ್ಷಗಳವರೆಗೆ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಕಳೆದ ಕೆಲವು ತಿಂಗಳುಗಳಿಂದ ಲಾಭ ಗಳಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಷೇರುಗಳಿಂದ ಬಂಡವಾಳ ಹಿಂತೆಗೆತ ಆಗುತ್ತಿದೆ’ ಎಂದು ಗ್ರೀನ್‌ ಪೋರ್ಟ್‌ಫೋಲಿಯೊದ ಸಹ ಸ್ಥಾಪಕ ದಿವಮ್ ಶರ್ಮಾ ಹೇಳಿದ್ದಾರೆ.

ಮ್ಯೂಚುವಲ್‌ ಫಂಡ್‌ಗಳು 2020ರ ಜೂನ್‌ನಿಂದ ಷೇರುಪೇಟೆಯಿಂದ ಬಂಡವಾಳ ಹಿಂತೆಗೆತ ಮಾಡುತ್ತಿವೆ. ಫೆಬ್ರುವರಿವರೆಗೆ ಒಟ್ಟಾರೆ ₹ 1.24 ಲಕ್ಷ ಕೋಟಿ ಹಿಂದಕ್ಕೆ ಪಡೆದಿವೆ.

ನಿಫ್ಟಿ 50 ಸೂಚ್ಯಂಕವು 2020ರ ಮಾರ್ಚ್‌ನಲ್ಲಿ ಕಂಡಿದ್ದ ಕನಿಷ್ಠ ಮಟ್ಟದ ನಂತರ ಇಲ್ಲಿಯವರೆಗೆ ಶೇಕಡ 73ರಷ್ಟು ಏರಿಕೆ ಕಂಡುಕೊಂಡಿದೆ. ಎಸ್‌ಆ್ಯಂಡ್‌ಪಿ ಬಿಎಸ್‌ಇ ಮಿಡ್‌ಕ್ಯಾಪ್ ಇಂಡೆಕ್ಸ್‌ ಶೇ 95ರಷ್ಟು ಏರಿಕೆ ಕಂಡಿದ್ದರೆ, ಎಸ್‌ಆ್ಯಂಡ್‌ಪಿ ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಇಂಡೆಕ್ಸ್‌ ಶೇ 120ರಷ್ಟು ಗಳಿಕೆ ಕಂಡಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಫೆಬ್ರುವರಿಯಲ್ಲಿ ಷೇರುಪೇಟೆಯಲ್ಲಿ ₹ 25,787 ಕೋಟಿ ಹೂಡಿಕೆ ಮಾಡಿದ್ದಾರೆ. 2020ರಲ್ಲಿ ಒಟ್ಟಾರೆ ₹ 1.7 ಲಕ್ಷ ಕೋಟಿ ಹೂಡಿಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT