ಸೋಮವಾರ, ಜೂನ್ 1, 2020
27 °C

ಷೇರುಪೇಟೆ | 8300ರ ಕೆಳಗಿಳಿದ ನಿಫ್ಟಿ, ಸೆನ್ಸೆಕ್ಸ್ 1375 ಅಂಶಗಳ ಪತನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ವೈರಸ್‌ ಆತಂಕ ಷೇರುಪೇಟೆಯನ್ನು ಬಾಧಿಸುತ್ತಲೇ ಇದೆ. ವಾರದ ಮೊದಲ ದಿನದ ವಹಿವಾಟಿನಲ್ಲಿ ಅತಿ ಮುಖ್ಯ ಸಂವೇದಿ ಸೂಚ್ಯಂಕಗಳು ಕೆಂಪಾಗಿಯೇ ವಹಿವಾಟು ಮುಗಿಸಿದವು. ಗ್ರಾಹಕ ಉತ್ಪನ್ನಗಳು (ಎಫ್‌ಎಂಸಿಜಿ) ಮತ್ತು ಔಷಧ ಕಂಪನಿಗಳ ಷೇರುಗಳು (ಫಾರ್ಮಾ) ಹೊರತುಪಡಿಸಿದರೆ ಉಳಿದೆಲ್ಲ ವಲಯಗಳ ಷೇರುಗಳು ಕುಸಿತ ಕಂಡವು.

ದಿನದ ಅಂತ್ಯಕ್ಕೆ ಮುಂಬೈಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) 1375.27 ಅಂಶಗಳು (ಶೇ 4.61) ಕುಸಿತ ಕಂಡು, 28440.32ರಲ್ಲಿ ದಿನದ ವಹಿವಾಟು ಮುಗಿಸಿತು. ರಾಷ್ಟ್ರೀಯ ಸಂವೇದಿ ಸೂಚ್ಯಂತ (ನಿಫ್ಟಿ) 379.15 ಅಂಶಗಳು (ಶೇ 4.38) ಕುಸಿತ ಕಂಡು 8281.10 ಅಂಶಗಳಲ್ಲಿ ದಿನವ ವಹಿವಾಟು ಮುಗಿಸಿತು.

ಒಟ್ಟು 924 ಷೇರುಗಳು ಮುನ್ನಡೆ ದಾಖಲಿಸಿದರೆ, 1320 ಷೇರುಗಳ ಮೌಲ್ಯ ಕುಸಿಯಿತು. 168 ಷೇರುಗಳ ಮೌಲ್ಯ ಬದಲಾಗಲಿಲ್ಲ. ಷೇರುಪೇಟೆಯ ದೈತ್ಯ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ 3.2ರಷ್ಟು ಮೌಲ್ಯ ಕಳೆದುಕೊಂಡು, 1031 ರೂಪಾಯಿಯಲ್ಲಿ ದಿನದ ವಹಿವಾಟು ಮುಗಿಸಿತು. ಬಂಧನ್‌ ಬ್ಯಾಂಕ್‌ ಷೇರುಗಳು ಆಘಾತಕಾರಿ ಪ್ರಮಾಣದಲ್ಲಿ, ಶೇ 13.51ರಷ್ಟು ಮೌಲ್ಯ ಕಳೆದುಕೊಂಡು 216.45 ರೂಪಾಯಿಯಲ್ಲಿ ದಿನದ ವಹಿವಾಟು ಮುಗಿಸಿತು.

ಬಜಾಜ್ ಫೈನಾನ್ಸ್‌, ಎಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಟಾಟಾ ಸ್ಟಿಲ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಅತ್ಯಂತ ವೇಗವಾಗಿ ಕುಸಿದವು. ಬಿಎಸ್‌ಇ ಮಿಡ್‌ ಕ್ಯಾಪ್ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.7ರಿಂದ 2ರಷ್ಟು ಕುಸಿತ ಕಂಡವು.

ಮತ್ತೊಂದೆಡೆ ಫಾರ್ಮಾ ಮತ್ತು ಎಫ್‌ಎಂಸಿಜಿ ವಲಯಕ್ಕೆ ಸೇರಿದ ಕಂಪನಿಗಳಾದ ಸಿಪ್ಲಾ, ನೆಸ್ಲೆ ಇಂಡಿಯಾ ಮತ್ತು ರೆಡ್ಡೀಸ್‌ ಲ್ಯಾಬ್‌ನ ಷೇರುಗಳು ಶೇ 2ರಿಂದ 6ರಷ್ಟು ಏರಿಕೆ ದಾಖಲಿಸಿದವು.

ವಿಶ್ವವನ್ನು ಬಾಧಿಸುತ್ತಿರುವ ಕೊರೊನಾ ವೈರಸ್‌ ಭಯ ಷೇರು ಮಾರುಕಟ್ಟೆಯಲ್ಲೂ ಪ್ರತಿಧ್ವನಿಸಿತು. ಫೈನಾನ್ಷಿಯಲ್ ಮತ್ತು ಆಟೊಮೊಬೈಲ್ ಷೇರುಗಳು ಕೊನೆಯವರೆಗೂ ಚೇತರಿಕೊಳ್ಳಲಿಲ್ಲ. ವಿಶ್ವದ ಇತರ ಪ್ರಮುಖ ಷೇರುಪೇಟೆಗಳ ವಹಿವಾಟು ಸಹ ಹೆಚ್ಚೂ ಕಡಿಮೆ ಹೀಗೆಯೇ ಇತ್ತು.

ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್‌ 1,500 ಅಂಶಗಳಷ್ಟು ಪತನ ಕಂಡು, ಸಂವೇದಿ ಸೂಚ್ಯಂಕ 28,290.99ಕ್ಕೆ ಕುಸಿದಿತ್ತು. 274.3 ಅಂಶಗಳ ಪತನದೊಂದಿಗೇ ವಹಿವಾಟು ಆರಂಭಿಸಿದ ನಿಫ್ಟಿ ಸಹ ಒಂದು ಹಂತದಲ್ಲಿ 416.25 ಅಂಶಗಳನ್ನು ಕಳೆದುಕೊಂಡು 8,250ರ ಗಡಿಯಿಂದ ಕೆಳಗಿಳಿದಿತ್ತು. ಫೈನಾನ್ಷಿಯಲ್, ಆಟೊಮೊಬೈಲ್ ಮತ್ತು ಮೆಟಲ್ ಷೇರುಗಳು ಮೌಲ್ಯ ಕಳೆದುಕೊಂಡವು

ಷೇರುಪೇಟೆಯ ಹೊಯ್ದಾಟ ಇನ್ನೂ ಕೆಲ ದಿನ ಮುಂದುವರಿಯಲಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್‌-19 ಜಾಗತಿಕ ಪಿಡುಗು ವಿಶ್ವದ ಹಣಕಾಸು ಪರಿಸ್ಥಿತಿಯ ಮೇಲೆ ಉಂಟು ಮಾಡುತ್ತಿರುವ ಪರಿಣಾಮವನ್ನು ಹೂಡಿಕೆ ವಿಶ್ಲೇಷಕರು ಬಹಿರಂಗಪಡಿಸುತ್ತಿರುವುದು ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿದೆ. 

ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಭಾನುವಾರ ಸಂಜೆಯ ಹೊತ್ತಿಗೆ 1000ದ ಗಡಿ ದಾಟಿತ್ತು. ದೇಶದ ಒಟ್ಟಾರೆ ಸಾವಿನ ಪ್ರಮಾಣ 27 ದಾಟಿದೆ.

'ಆರ್ಥಿಕತೆಯನ್ನು ಕೋವಿಡ್-19 ಸ್ತಬ್ಧಗೊಳಿಸಬಹುದು ಎಂಬ ಭೀತಿ ಹೂಡಿಕೆದಾರರನ್ನು ಬಾಧಿಸುತ್ತಿದೆ' ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ವಿಶ್ಲೇಷಕ ದೀಪಕ್ ಜಸನಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು