ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಗೂಳಿ ಓಟಕ್ಕೆ ವಿದೇಶಿ ಹೂಡಿಕೆಯ ಬಲ

Last Updated 13 ಡಿಸೆಂಬರ್ 2020, 13:17 IST
ಅಕ್ಷರ ಗಾತ್ರ
ADVERTISEMENT
""
""

ದೇಶದ ಷೇರುಪೇಟೆಗಳು ಸದ್ಯ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ವಿಜೃಂಭಿಸುತ್ತಿವೆ. ವಿದೇಶಿ ಬಂಡವಾಳ ಒಳಹರಿವು, ಆರ್ಥಿಕ ಉತ್ತೇಜನಕಾರಿ ಕೊಡುಗೆಗಳು ಹಾಗೂ ಜಿಡಿಪಿ ಚೇತರಿಸಿಕೊಳ್ಳುತ್ತಿರುವ ಸೂಚನೆಯು ಸಕಾರಾತ್ಮಕ ವಹಿವಾಟು ಮುಂದುವರಿಯಲು ಕಾರಣಗಳಾಗಿವೆ. ಆರ್ಥಿಕ ಚೇತರಿಕೆ, ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯು 2021ರಲ್ಲಿ ಷೇರುಪೇಟೆಗಳ ದಿಕ್ಕನ್ನು ನಿರ್ಧರಿಸಲಿವೆ.

‘ಅಲ್ಪಾವಧಿಗೆ ವಿದೇಶಿ ಬಂಡವಾಳ ಒಳಹರಿವು,ಕೋವಿಡ್‌–19ಗೆ ಲಸಿಕೆ ಲಭ್ಯತೆ, ಕಚ್ಚಾತೈಲ ದರ, ಕೋವಿಡ್‌ ಪ್ರಕರಣಗಳು ಹೀಗೆ ಇನ್ನೂ ಹಲವು ವಿದ್ಯಮಾನಗಳು ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ. ಆದರೆ ಷೇರುಪೇಟೆಯ ಚಲನೆಯು ನಿರ್ದಿಷ್ಟವಾಗಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದನ್ನು ಅಂದಾಜು ಮಾಡುವುದು ಕಷ್ಟ. ಹೀಗಿದ್ದರೂ ಸಕಾರಾತ್ಮಕ ಚಲನೆಯನ್ನು ನಿರೀಕ್ಷೆ ಮಾಡಬಹುದು. ಆರ್ಥಿಕ ಉತ್ತೇಜನಕಾರಿ ಕೊಡುಗೆಗಳಿಂದಾಗಿ2021ರಲ್ಲಿ ನಗದು ಲಭ್ಯತೆ ಹೆಚ್ಚಾಗಲಿದೆ. ಕಂಪನಿಗಳ ಗಳಿಕೆಯಲ್ಲಿಯೂ ಪ್ರಗತಿ ಕಂಡುಬರಲಿದೆ’ ಎನ್ನುವುದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಅವರ ಅಭಿಪ್ರಾಯ.

‘ಷೇರುಪೇಟೆಗಳ ಚಲನೆಯು ವಿದೇಶಿ ಬಂಡವಾಳ ಒಳಹರಿವಿನಿಂದ ಬೆಂಬಲಿತವಾಗಿದೆ. ನವೆಂಬರ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ 2021ರ ಡಿಸೆಂಬರ್‌ ವೇಳೆಗೆ ‘ನಿಫ್ಟಿ 50’ 14,500ಕ್ಕೆ ತಲುಪುವ ಅಂದಾಜು ಮಾಡಬಹುದಾಗಿದೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ಲೋಹ, ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಉತ್ಪನ್ನಗಳ ವಲಯಗಳು ಉತ್ತಮ ವಹಿವಾಟು ನಡೆಸುತ್ತಿವೆ. ಅಲ್ಪಾವಧಿಯಲ್ಲಿ ಹೆಚ್ಚಿನ ರಿಸ್ಕ್ ಇದ್ದರೂ ದೀರ್ಘಾವಧಿಯಲ್ಲಿ ಉತ್ತಮ ಗಳಿಕೆ ತಂದುಕೊಡುವ ನಿರೀಕ್ಷೆ ಇದೆ. ಫಾರ್ಮಾ, ಐ.ಟಿ., ಹೆಲ್ತ್‌ಕೇರ್‌ ಮತ್ತು ಟೆಲಿಕಾಂ ವಲಯಗಳ ದೀರ್ಘಾವಧಿಯ ಮುನ್ನೋಟ ಉತ್ತಮವಾಗಿರುವುದರಿಂದ ಅವುಗಳ ಮೌಲ್ಯದಲ್ಲಿಯೂ ಏರಿಕೆ ಕಂಡುಬರುತ್ತಿದೆ’ ಎಂದು ಅವರು ತಿಳಿಸಿದರು.

ಆರ್ಥಿಕತೆಯು ಕೋವಿಡ್‌–19 ಬಿಕ್ಕಟ್ಟಿನಿಂದ ಹೊರಬಂದು ಎಷ್ಟು ಬೇಗ ಚೇತರಿಸಿಕೊಳ್ಳಲಿದೆ ಎನ್ನುವುದರ ಮೇಲೆ ವಿದೇಶಿ ಬಂಡವಾಳ ಹೂಡಿಕೆ ನಿರ್ಧಾರವಾಗಲಿದೆ. ಆರ್ಥಿಕತೆಯು ದೀರ್ಘಾವಧಿಯವರೆಗೆ ದುರ್ಬಲವಾಗಿದ್ದರೆ ಬಂಡವಾಳ ಹೊರಹರಿವು ಆಗುವ ಸಾಧ್ಯತೆ ಇದೆ. ಎರಡನೇ ಹಂತದ ಕೋವಿಡ್‌–19 ಅಲೆಯಿಂದಾಗಿ ಮತ್ತೊಮ್ಮೆ ಲಾಕ್‌ಡೌನ್‌ ನಿಯಮಗಳು ಜಾರಿಗೊಂಡರೆ ಹೂಡಿಕೆ ಚಟುವಟಿಕೆ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಮತ.

ಅಭಿವೃದ್ಧಿ ಹೊಂದಿರುವ ದೇಶಗಳು ಪ್ರಕಟಿಸುತ್ತಿರುವ ಆರ್ಥಿಕ ಉತ್ತೇಜನಕಾರಿ ಕೊಡುಗೆಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಾಗಿದ್ದು, ಅದು ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಹೂಡಿಕೆ ಆಗುತ್ತಿದೆ. ಭಾರತದಲ್ಲಿ ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿಯೂ ವಿದೇಶಿ ಹೂಡಿಕೆದಾರರು ಆಕರ್ಷಿತರಾಗುತ್ತಿದ್ದಾರೆ. 2010ನೇ ಇಸವಿಯಿಂದ 2020ರವರೆಗೆ ಒಟ್ಟಾರೆ ಐದು ಬಾರಿ ವಿದೇಶಿ ಹೂಡಿಕೆಯು ₹ 1 ಲಕ್ಷ ಕೋಟಿ ಮೊತ್ತವನ್ನು ದಾಟಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ಇಳಿಕೆ ಆಗಿರುವುದೇ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬಂಡವಾಳವು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಹೂಡಿಕೆ ಆಗಲು ಪ್ರಮುಖ ಕಾರಣ ಎನ್ನುವುದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕಿ ನಿರಾಲಿ ಶಾ ಅವರ ಅಭಿಪ್ರಾಯ.

ಸರ್ಕಾರದ ಕ್ರಮಗಳು: ಸುಲಲಿತ ವಹಿವಾಟು ನಡೆಸಲು ನಿಯಮದಲ್ಲಿ ಬದಲಾವಣೆ, ಉತ್ಪನ್ನ ಸಂರ್ಪಕಿತ ಉತ್ತಾಜನಾ ಕೊಡುಗೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವುದು ಸಹ ಬಂಡವಾಳ ಒಳಹರಿವಿಗೆ ಉತ್ತೇಜನ ನೀಡಿವೆ.

ವೃದ್ಧಿಸುತ್ತಿದೆ ಹೂಡಿಕೆದಾರರ ಸಂಪತ್ತು: 2020ರ ಜನವರಿ 1ರಂದು ಮಾರುಕಟ್ಟೆ ಬಂಡವಾಳ ಮೌಲ್ಯ ₹ 155.82 ಲಕ್ಷ ಕೋಟಿ ಇತ್ತು. ಇದು 2020ರ ಡಿಸೆಂಬರ್‌ 11ರ ವಹಿವಾಟಿನ ಅಂತ್ಯದ ವೇಳೆಗೆ ₹ 182.78 ಲಕ್ಷ ಕೋಟಿಗೆ ಅಂದರೆ ₹ 26.96 ಲಕ್ಷ ಕೋಟಿಗಳಷ್ಟು ಏರಿಕೆ ಆಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಜನವರಿ 1ರಂದು 41,254 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಡಿಸೆಂಬರ್‌ 11ರಂದು ವಹಿವಾಟಿನ ಅಂತ್ಯದ ವೇಳಗೆ 46,099 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಅವಧಿಯಲ್ಲಿ ಸೂಚ್ಯಂಕವು 4,845 ಅಂಶಗಳ ಗಳಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಜನವರಿ 1ರಂದು 12,168 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಡಿಸೆಂಬರ್‌ 11ರಂದು ವಹಿವಾಟಿನ ಅಂತ್ಯದಲ್ಲಿ 13,513 ಅಂಶಗಳಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಈ ಅವಧಿಯಲ್ಲಿ ನಿಫ್ಟಿಯ ಒಟ್ಟಾರೆ ಗಳಿಕೆ 1,345 ಅಂಶಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT