ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ‘ಶಕ್ತಿ’ ಹೆಚ್ಚಿಸಿಕೊಂಡ ವಿದ್ಯುತ್‌ ವಲಯದ ಕಂಪನಿಗಳು

ಜೆಎಸ್‌ಡಬ್ಲ್ಯು ಎನರ್ಜಿ ಷೇರಿನ ಬೆಲೆ ಒಂದು ತಿಂಗಳಲ್ಲೇ ಶೇ 37 ಹೆಚ್ಚಳ
Last Updated 14 ಆಗಸ್ಟ್ 2022, 12:44 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ವಿದ್ಯುತ್‌ ಕಾಯ್ದೆ ತಿದ್ದುಪಡಿಗೆ ಮುಂದಾದ ಬೆನ್ನಲ್ಲೇ ವಿದ್ಯುತ್‌ ವಲಯದ ಕಂಪನಿಗಳಲ್ಲಿ ‘ಭರವಸೆಯ ಬೆಳಕು’ ಮೂಡಿದೆ. ಷೇರುಪೇಟೆಯಲ್ಲಿ ಜೆಎಸ್‌ಡಬ್ಲ್ಯು ಎನರ್ಜಿ, ಅದಾನಿ ಟ್ರಾನ್ಸ್‌ಮಿಷನ್‌, ಟೊರೆಂಟ್‌ ಪವರ್‌, ಅದಾನಿ ಪವರ್‌ ಕಂಪನಿಗಳ ಷೇರಿನ ಬೆಲೆಯು ಒಂದು ತಿಂಗಳಲ್ಲೇ ಶೇಕಡಾವಾರು ಎರಡಂಕಿಗಿಂತಲೂ ಹೆಚ್ಚಾಗಿರುವುದು ಗಮನಾರ್ಹ ಸಂಗತಿ

***

ರೈತರ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತಂದು ‘ಉದ್ಯಮ ಸ್ನೇಹಿ’ಯನ್ನಾಗಿ ಮಾಡಲು ಮುಂದಾಗಿರುವುದು ವಿದ್ಯುತ್‌ ವಲಯದ (Power Sector) ಕಂಪನಿಗಳಲ್ಲಿ ‘ಭರವಸೆಯ ಬೆಳಕು’ ಮೂಡಿಸಿದೆ. ವಿದ್ಯುತ್‌ ವಲಯದ ಕೆಲವು ಕಂಪನಿಗಳು ‘ಶಕ್ತಿ’ಯನ್ನು ಹೆಚ್ಚಿಸಿಕೊಂಡು ಭಾರತೀಯ ಷೇರುಪೇಟೆಯಲ್ಲಿ ಮಿನುಗುವ ತಾರೆಗಳಾಗುವತ್ತ ದಾಪುಗಾಲು ಇಡುತ್ತಿವೆ.

ಖಾಸಗೀಕರಣ ವಿರೋಧಿಸಿ ದೇಶದ ವಿವಿಧೆಡೆ ರೈತರು, ವಿದ್ಯುತ್‌ ಸರಬರಾಜು ಕಂಪನಿಗಳ ನೌಕರರು ಪ್ರತಿಭಟಿಸುತ್ತಿದ್ದರೂ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ‘ವಿದ್ಯುತ್‌ ತಿದ್ದುಪಡಿ ಮಸೂದೆ–2022’ ಅನ್ನು ಮಂಡಿಸಿದೆ. ವಿದ್ಯುತ್‌ ವಲಯದಲ್ಲಿ ಬದಲಾವಣೆ ತರಬೇಕು ಎಂಬ ಸರ್ಕಾರದ ದೃಢ ನಿರ್ಧಾರವು ಹೂಡಿಕೆದಾರ ಉತ್ಸಾಹವನ್ನು ಹೆಚ್ಚಿಸಿದೆ. ಜೆಎಸ್‌ಡಬ್ಲ್ಯು ಎನರ್ಜಿ, ಅದಾನಿ ಟ್ರಾನ್ಸ್‌ಮಿಷನ್‌, ಟೊರೆಂಟ್‌ ಪವರ್‌, ಅದಾನಿ ಪವರ್‌ ಕಂಪನಿಗಳ ಷೇರಿನ ಬೆಲೆಯು ಶೇಕಡಾವಾರು ಲೆಕ್ಕಹಾಕಿದಾಗ ಒಂದು ತಿಂಗಳಲ್ಲೇ ಎರಡಂಕಿಗಿಂತಲೂ ಹೆಚ್ಚಾಗಿದೆ. ಇದು ಭಾರತೀಯ ಷೇರುಪೇಟೆಯಲ್ಲಿ ವಿದ್ಯುತ್‌ ವಲಯದ ಸೂಚ್ಯಂಕ ಹೊಳೆಯುವಂತೆ ಮಾಡಿದೆ.

ಮುಂಬೈ ಷೇರು ವಿನಿಮಯ ಕೇಂದ್ರದ (BSE) ಪ್ರಧಾನ ಸೂಚ್ಯಂಕ ಸೆನ್ಸೆಕ್ಸ್‌ ಒಂದು ವಾರದಲ್ಲಿ ಶೇ 1.84 ಹಾಗೂ ಒಂದು ತಿಂಗಳಲ್ಲಿ ಶೇ 10.35 ಏರಿಕೆ ಕಂಡಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ‘ನಿಫ್ಟಿ–50’ ಸೂಚ್ಯಂಕದ ಮೌಲ್ಯವು ಇದೇ ಅವಧಿಯಲ್ಲಿ ಕ್ರಮವಾಗಿ ಶೇ 1.73 ಹಾಗೂ ಶೇ 10.21ರಷ್ಟು ಹೆಚ್ಚಾಗಿದೆ. ‘ಬಿಎಸ್‌ಇ ಪವರ್‌’ ಸೂಚ್ಯಂಕವು ಒಂದು ವಾರದಲ್ಲಿ ಶೇ 3.64 ಹಾಗೂ ಒಂದು ತಿಂಗಳಲ್ಲಿ ಶೇ 9.74ರಷ್ಟು ಏರಿಕೆ ಕಂಡಿದೆ. ಕಳೆದ ಆರು ತಿಂಗಳಲ್ಲಿ ಶೇ 24.62 ಹಾಗೂ ಒಂದು ವರ್ಷದಲ್ಲಿ ಶೇ 79.43ರಷ್ಟು ಮೌಲ್ಯವನ್ನು ಈ ಸೂಚ್ಯಂಕ ಹೆಚ್ಚಿಸಿಕೊಂಡಿರುವುದು ಗಮನಾರ್ಹ ಸಂಗತಿ.

ಜೆಎಸ್‌ಡಬ್ಲ್ಯು ಎನರ್ಜಿ ಮೌಲ್ಯ ಶೇ 37 ಹೆಚ್ಚಳ

ಮುಂಬೈ ಷೇರುಪೇಟೆಯ ಒಂದು ತಿಂಗಳ ವಹಿವಾಟನ್ನು ಅವಲೋಕಿಸಿದಾಗ ಜೆಎಸ್‌ಡಬ್ಲ್ಯು ಎನರ್ಜಿ ಕಂಪನಿಯು ಒಂದು ವಾರದಲ್ಲಿ ಶೇ 11.86 ಹಾಗೂ ತಿಂಗಳಲ್ಲಿ ಶೇ 37.26ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ವಿದ್ಯುತ್‌ ವಲಯದ ಕಂಪನಿಗಳ ಪೈಕಿ ಮುಂಚೂಣಿಯಲ್ಲಿದೆ. ಈ ಕಂಪನಿಯ ಷೇರಿನ ಬೆಲೆಯು ಮೂರು ತಿಂಗಳಲ್ಲಿ ಶೇ 27.34ರಷ್ಟು ಹೆಚ್ಚಾಗಿದ್ದರೆ, ಆರು ತಿಂಗಳಲ್ಲಿ ಶೇ 6.04ರಷ್ಟು ಕುಸಿದಿದೆ. ಒಂದು ವರ್ಷದಲ್ಲಿ ಶೇ 33.54, ಎರಡು ವರ್ಷಗಳಲ್ಲಿ ಶೇ 527 ಹಾಗೂ ಮೂರು ವರ್ಷಗಳಲ್ಲಿ ಶೇ 359ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವುದು ಈ ಕಂಪನಿಯ ಹಿರಿಮೆಯಾಗಿದೆ. 2021ರ ಅಕ್ಟೋಬರ್‌ 14ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹408.70) ಏರಿದ್ದ ಈ ಕಂಪನಿ ಷೇರಿನ ಬೆಲೆಯು ಕಳೆದ ಜೂನ್‌ 20ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 182) ಕುಸಿದಿತ್ತು.

‘ಮಲ್ಟಿಬೆಗರ್‌’ ಕಂಪನಿಯಾದ ಅದಾನಿ ಟ್ರಾನ್ಸ್‌ಮಿಷನ್‌

ಅದಾನಿ ಟ್ರಾನ್ಸ್‌ಮಿಷನ್‌ ಕಂಪನಿಯ ಮಾರುಕಟ್ಟೆ ಮೌಲ್ಯ ಒಂದು ವಾರದಲ್ಲಿ ಶೇ 7.28, ತಿಂಗಳಲ್ಲಿ ಶೇ 28.78ರಷ್ಟು ಹೆಚ್ಚಾಗಿದೆ. ಮೂರು ತಿಂಗಳಲ್ಲಿ ಶೇ 61.80, ಆರು ತಿಂಗಳಲ್ಲಿ ಶೇ 76.08, ಒಂದು ವರ್ಷದಲ್ಲಿ ಶೇ 272, ಎರಡು ವರ್ಷಗಳಲ್ಲಿ ಶೇ 1,333 ಹಾಗೂ ಮೂರು ವರ್ಷಗಳಲ್ಲಿ ಶೇ 1,522ರಷ್ಟು ಮೌಲ್ಯ ಹೆಚ್ಚಾಗಿರುವ ಅಂಕಿ–ಅಂಶಗಳು ಅದಾನಿ ಟ್ರಾನ್ಸ್‌ಮಿಷನ್‌ ಒಂದು ‘ಮಲ್ಟಿಬೆಗರ್‌’ (Multibagger – ಷೇರಿನ ಮೌಲ್ಯ 10 ಪಟ್ಟು ಹೆಚ್ಚಾಗುವುದು) ಕಂಪನಿಯಾಗಿ ಬೆಳೆದಿರುವ ಕಥೆಯನ್ನು ಹೇಳುತ್ತಿವೆ. 2021ರ ಆಗಸ್ಟ್‌ 12ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 927) ಕುಸಿದಿದ್ದ ಈ ಕಂಪನಿಯ ಷೇರಿನ ಬೆಲೆಯು ಇದೇ ಆಗಸ್ಟ್‌ 12ರ ವಹಿವಾಟಿನ ವೇಳೆ ₹3,555ಕ್ಕೆ ಏರುವ ಮೂಲಕ 52 ವಾರಗಳ ಹೊಸ ಮಟ್ಟವನ್ನು ನಿರ್ಮಿಸಿದೆ.

ಟೊರೆಂಟ್‌ ಪವರ್‌ ಕಂಪನಿಯು ಒಂದು ವಾರದಲ್ಲಿ ಶೇ 7.43, ತಿಂಗಳಲ್ಲಿ ಶೇ 22.07ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಇದೇ ಅವಧಿಯಲ್ಲಿ ಅದಾನಿ ಪವರ್‌ ಕಂಪನಿಯು ಕ್ರಮವಾಗಿ ಶೇ 4.02 ಹಾಗೂ ಶೇ 17.80ರಷ್ಟು ಮೌಲ್ಯ ವೃದ್ಧಿಸಿಕೊಂಡಿದೆ.

ಕಳೆದ ಒಂದು ತಿಂಗಳಲ್ಲಿ ಎಬಿಬಿ ಇಂಡಿಯಾ (ಶೇ 9.61), ಎನ್‌ಟಿಪಿಸಿ (ಶೇ 7.82), ಸಿಮೆನ್ಸ್‌ (ಶೇ 7.58), ಪವರ್‌ ಗ್ರಿಡ್‌ ಕಾರ್ಪೊರೇಷನ್‌ (ಶೇ 6.75), ಟಾಟಾ ಪವರ್‌ (ಶೇ 4.94), ಎನ್‌ಎಚ್‌ಪಿಸಿ (ಶೇ 2.72) ಕಂಪನಿಗಳು ಅಲ್ಪ ಪ್ರಮಾಣದಲ್ಲಿ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. ಇದೇ ಅವಧಿಯಲ್ಲಿ ಅದಾನಿ ಗ್ರೀನ್‌ ಎನರ್ಜಿ ಕಂಪನಿಯ ಮೌಲ್ಯವು ಶೇ 4.94ರಷ್ಟು ಕುಸಿದಿದೆ ಎಂಬುದನ್ನೂ ಗಮನಿಸಬೇಕಾಗಿದೆ.

ವಿದ್ಯುತ್‌ ವಲಯದ ಕಂಪನಿಗಳ ಷೇರಿನ ಮೌಲ್ಯವರ್ಧನೆ
ವಿದ್ಯುತ್‌ ವಲಯದ ಕಂಪನಿಗಳ ಷೇರಿನ ಮೌಲ್ಯವರ್ಧನೆ

ಕಂಟಕವಾದ ವಿದ್ಯುತ್‌ ಬಿಲ್‌ ಬಾಕಿ

ವಿದ್ಯುತ್‌ ಸರಬರಾಜು ಹಾಗೂ ಉತ್ಪಾದನಾ ಕಂಪನಿಗಳಿಗೆ ರಾಜ್ಯ ಸರ್ಕಾರಗಳು ವಿದ್ಯುತ್‌ ಬಿಲ್‌ಗಳ ಹಣವನ್ನು ಬಾಕಿ ಉಳಿಸಿಕೊಂಡಿರುವುದು ವಿದ್ಯುತ್‌ ಕಂಪನಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈಚೆಗೆ ನಡೆದ ‘ಉಜ್ವಲ ಭಾರತ–ಉಜ್ವಲ ಭವಿಷ್ಯ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಾಹಿತಿ ಪ್ರಕಾರ, ವಿವಿಧ ರಾಜ್ಯ ಸರ್ಕಾರಗಳು ಒಟ್ಟು ₹ 2.50 ಲಕ್ಷ ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿವೆ. ಇದರಲ್ಲಿ ₹ 75,000 ಕೋಟಿ ಸಬ್ಸಿಡಿ ಹಣವೂ ಸೇರಿದೆ. ಪ್ರಧಾನಿ ಮನವಿ ಮಾಡಿರುವಂತೆ ರಾಜ್ಯ ಸರ್ಕಾರಗಳು ತ್ವರಿತವಾಗಿ ವಿದ್ಯುತ್‌ ಬಿಲ್‌ ಬಾಕಿ ಹಣವನ್ನು ಪಾವತಿಸಿದರೆ ಉದ್ಯಮಗಳಿಗೆ ಚೈತನ್ಯ ತುಂಬಿದಂತಾಗಲಿದೆ.

ಉದ್ಯಮಕ್ಕೆ ಶಕ್ತಿ ತುಂಬಲಿದೆಯೇ ವಿದ್ಯುತ್‌ ತಿದ್ದುಪಡಿ ಮಸೂದೆ?

ವಿದ್ಯುತ್‌ ವಲಯವನ್ನು ಖಾಸಗೀಕರಣಕ್ಕೆ ಒಳಪಡಿಸುವ ಮೂಲಕಸರ್ಕಾರ ಸಬ್ಸಿಡಿ ನಿಡುವುದನ್ನು ನಿಲ್ಲಿಸಬಹುದು ಎಂಬ ಆತಂಕದಿಂದ ರೈತರು ವಿದ್ಯುತ್‌ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಕೆಲಸಕ್ಕೆ ಕುತ್ತು ಬಂದೀತು ಎಂಬ ಭಯದಿಂದ ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಸರಬರಾಜು ಕಂಪನಿಗಳ ನೌಕರರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ, ಈ ಮಸೂದೆಯು ವಿದ್ಯುತ್‌ ವಲಯದ ಉದ್ಯಮಗಳಿಗೆ ಶಕ್ತಿ ತುಂಬಲಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತಿದೆ.

ವಿದ್ಯುತ್‌ ತಿದ್ದುಪಡಿ ಮಸೂದೆಯು ನಿಯಮಿತವಾಗಿ ದರ ಪರಿಷ್ಕರಿಸಲು ಅವಕಾಶ ಕಲ್ಪಿಸುತ್ತಿರುವುದರಿಂದ ವಿದ್ಯುತ್‌ ವಲಯದ ಕಂಪನಿಗಳ ಪಾಲಿಗೆ ಇದು ವರದಾನವಾಗಲಿದೆ. ಒಂದು ಪ್ರದೇಶದಲ್ಲಿ ಹಲವು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ವಹಿವಾಟು ನಡೆಸಲು ಅವಕಾಶ ನೀಡುವುದರಿಂದ ಗ್ರಾಹಕರಿಗೆ ‘ಬಹು ಆಯ್ಕೆಗಳ ಅವಕಾಶ’ ಸಿಗಲಿದೆ. ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ.

ಈ ಮಸೂದೆಯು ವಿದ್ಯುತ್‌ ಬೇಡಿಕೆ ಹಾಗೂ ಸರಬರಾಜು ನಿರ್ವಹಣೆಗಾಗಿ ‘ನ್ಯಾಷನಲ್‌ ಲೋಡ್‌ ಡಿಸ್ಪ್ಯಾಚ್‌ ಸೆಂಟರ್‌’ (ಎನ್‌ಎಲ್‌ಡಿಸಿ) ಅತ್ಯುನ್ನತ ಕೇಂದ್ರೀಯ ಸಂಸ್ಥೆಯನ್ನು ರಚಿಸಲು ಶಿಫಾರಸು ಮಾಡಿದೆ. ಈ ಮಸೂದೆ ಅಂಗೀಕಾರವಾದರೆ ವಿದ್ಯುತ್‌ ವಲಯದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದೆ.

ವಿದ್ಯುತ್‌ ಬೇಡಿಕೆ ಶೇ 7ರಷ್ಟು ಹೆಚ್ಚಳ

‘2022ನೇ ಸಾಲಿನಲ್ಲಿ ಭಾರತದಲ್ಲಿ ವಿದ್ಯುತ್‌ ಬೇಡಿಕೆಯು ಶೇ 7ರಷ್ಟು ಹೆಚ್ಚಾಗಲಿದೆ. ಚೀನಾದಲ್ಲಿ ಶೇ 3ರಷ್ಟು, ಅಮೆರಿಕ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ತಲಾ ಶೇ 2ರಷ್ಟು ಮತ್ತು ಯುರೋಪ್‌ನಲ್ಲಿ ಶೇ 1ರಷ್ಟು ವಿದ್ಯುತ್‌ ಬೇಡಿಕೆ ಹೆಚ್ಚಾಗಲಿದೆ’ ಎಂದು ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ (IEA) ಅಂದಾಜು ಮಾಡಿದೆ.

ಭಾರತದಲ್ಲಿ ಆರ್ಥಿಕತೆಯ ಬೆಳವಣಿಗೆಯ ವೇಗ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ವಿದ್ಯುತ್‌ ಬೇಡಿಕೆ ಹೆಚ್ಚಾಗಲಿದೆ. ಭವಿಷ್ಯದಲ್ಲಿ ‘ಪರಿಸರ ಸ್ನೇಹಿ’ಯಾಗಿರುವ ಗ್ರೀನ್‌ ಎನರ್ಜಿಗೆ ಬೇಡಿಕೆ ಹೆಚ್ಚಾಗಲಿದ್ದು, ಈ ವಲಯದ ಕಂಪನಿಗಳಿಗೆ ಒಳ್ಳೆಯ ಅವಕಾಶಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT