ಬುಧವಾರ, ಏಪ್ರಿಲ್ 1, 2020
19 °C

ಎಸ್‌ಬಿಐ ಕಾರ್ಡ್ಸ್ IPO: ಅಡ್ಡಿಯಾಗದ ಕೊರೊನಾ, 3.32 ಪಟ್ಟು ಹೆಚ್ಚು ಬಿಡ್ ಸಲ್ಲಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಎಸ್‌ಬಿಐ ಕಾರ್ಡ್ಸ್‌ – ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾರಾಟ ಒತ್ತಡದಿಂದ ಷೇರುಪೇಟೆಯಲ್ಲಿ ನಕಾರಾತ್ಮ ವಹಿವಾಟು ನಡೆದಿದ್ದರೂ, ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಭಾಗವಾಗಿರುವ ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವೀಸಸ್ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬುಧವಾರ ಮಧ್ಯಾಹ್ನದ ವರೆಗೂ ಐಪಿಒ ಖರೀದಿಗೆ 3.32 ಪಟ್ಟು ಹೆಚ್ಚು ಬಿಡ್‌ ಸಲ್ಲಿಕೆಯಾಗಿದೆ. 

ಮಾರ್ಚ್‌ 2ರಿಂದ ಎಸ್‌ಬಿಐ ಕಾರ್ಡ್ಸ್‌ ಐಪಿಒ ರಿಟೇಲ್‌ ಖರೀದಿಗೆ ತೆರೆದುಕೊಂಡಿದ್ದು, ಮಾರ್ಚ್‌ 5 ಕೊನೆಯ ದಿನವಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಮಾಹಿತಿ ಪ್ರಕಾರ, ಮಧ್ಯಾಹ್ನ 12ರ ವರೆಗೂ ಒಟ್ಟು 25,12,78,800 ಷೇರುಗಳಿಗೆ ಬಿಡ್‌ ಮಾಡಲಾಗಿದೆ. ವಿತರಣೆಯಾಗಲಿರುವ ಒಟ್ಟು ಷೇರುಗಳು 10,02,79,411.

ಐಪಿಒ ಪ್ರತಿ ಷೇರಿಗೆ ₹750–755 ನಿಗದಿಯಾಗಿದ್ದು, ಸಣ್ಣ ಹೂಡಿಕೆದಾರರು ಕನಿಷ್ಠ 19 ಷೇರುಗಳಿಗೆ ಬಿಡ್‌ ಮಾಡಬಹುದು. ಅಂದರೆ, ಬ್ಯಾಂಕ್‌ ಖಾತೆಯಲ್ಲಿ ₹14,345 ಮೊತ್ತ ಇರುವಂತೆ ಗಮನಿಸಿ ಬಿಡ್‌ ಸಲ್ಲಿಸಬಹುದು. ಬಿಡ್‌ ಸಲ್ಲಿಸುತ್ತಿದ್ದಂತೆ ಯುಪಿಐ ಖಾತೆಗೆ ಎಸ್‌ಬಿಐನಿಂದ ಪಾವತಿ ಕಡಿತದ ನೋಟಿಫಿಕೇಷನ್‌ ಬರುತ್ತದೆ. ಮ್ಯಾನ್‌ಡೇಟರಿ ಆಯ್ಕೆಯಲ್ಲಿ ಪಾವತಿ ಪೂರ್ಣಗೊಳಿಸಿದರೆ ಮಾರ್ಚ್‌ 21ರ ವರೆಗೂ ನಿಗದಿತ ಮೊತ್ತ ಬ್ಲಾಕ್‌ ಆಗುತ್ತದೆ. ರಿಟೇಲ್‌ ಹೂಡಿಕೆದಾರರು ಗರಿಷ್ಠ ₹2 ಲಕ್ಷದ ವರೆಗೂ ಬಿಡ್‌ ಸಲ್ಲಿಸಬಹುದು. 

ಎಸ್‌ಬಿಐ ಕಾರ್ಡ್ಸ್‌ ಐಪಿಒ ಮೂಲಕ ₹10,355 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಈಗಾಗಲೇ ಎಸ್‌ಬಿಐ 74 ಪ್ರಮುಖ ಹೂಡಿಕೆದಾರರಿಂದ ₹2,769 ಕೋಟಿ ಸಂಗ್ರಹಿಸಿದೆ. ಬಿಡ್‌ ಸಲ್ಲಿಸಲು ಸಾಂಸ್ಥಿಕ ಹೂಡಿಕೆದಾರರಿಗೆ ಬುಧವಾರ ಕೊನೆಯ ದಿನ. 

ಕೊಟ್ಯಾಕ್‌ ಮಹೀಂದ್ರಾ ಕ್ಯಾಪಿಟಲ್‌ ಕಂಪನಿ, ಆ್ಯಕ್ಸಿಸ್‌ ಕ್ಯಾಪಿಟಲ್‌, ಡಿಎಸ್‌ಪಿ ಮೆರಿಲ್‌ ಲಿಂಚ್‌, ಎಚ್‌ಎಸ್‌ಬಿಸಿ ಸೆಕ್ಯುರಿಟೀಸ್‌ ಮತ್ತು ಕ್ಯಾಪಿಟಲ್‌ ಮಾರ್ಕೆಟ್ಸ್‌ (ಇಂಡಿಯಾ), ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌, ನಾರ್ಮುರಾ ಫೈನಾನ್ಶಿಯಲ್‌ ಅಡ್ವೈಸರಿ ಮತ್ತು ಸೆಕ್ಯುರಿಟೀಸ್‌ ಐಪಿಒ ಮ್ಯಾನೇಜ್‌ ಮಾಡುತ್ತಿವೆ. 

ಎಸ್‌ಬಿಐ ಕಾರ್ಡ್ಸ್‌: 1998ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಿಇ ಕ್ಯಾಪಿಟಲ್ ಜತೆಗೂಡಿ ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿದವು. ಆರಂಭದಲ್ಲಿ ಶೇ 60 ರಷ್ಟು ಪಾಲುದಾರಿಕೆಯನ್ನು ಎಸ್‌ಬಿಐ ಹೊಂದಿದ್ದರೆ, ಶೇ 40 ರಷ್ಟನ್ನು ಜಿಇ ಕ್ಯಾಪಿಟಲ್ ಹೊಂದಿತ್ತು. 2017 ಡಿಸೆಂಬರ್‌ನಲ್ಲಿ ಕಾರ್ಲೈಲ್ ಗ್ರೂಪ್, ಜಿಇ ಕ್ಯಾಪಿಟಲ್ ನಿಂದ ಶೇ 26 ರಷ್ಟು ಪಾಲುದಾರಿಕೆಯನ್ನು ಪಡೆದುಕೊಂಡಿತು. ಇನ್ನುಳಿದ ಶೇ 14 ರಷ್ಟು ಪಾಲುದಾರಿಕೆಯನ್ನು ಎಸ್‌ಬಿಐ ಕಾರ್ಡ್ಸ್‌ಗೆ ಜಿಇ ಕ್ಯಾಪಿಟಲ್ ನೀಡಿತು. ಸದ್ಯ ಶೇ 74 ರಷ್ಟು ಪಾಲುದಾರಿಕೆ ಎಸ್‌ಬಿಐ ಬಳಿ ಇದೆ. ಉಳಿದ ಶೇ 26 ರಷ್ಟು ಪಾಲುದಾರಿಕೆಯನ್ನು ಕಾರ್ಲೈಲ್ ಗ್ರೂಪ್ ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು