ಸೋಮವಾರ, ಡಿಸೆಂಬರ್ 9, 2019
17 °C
ಷೇರುಪೇಟೆ ಮೇಲೆ ಜಾಗತಿಕ ವಿದ್ಯಮಾನಗಳ ಪ್ರಭಾವ l ಸಂವೇದಿ ಸೂಚ್ಯಂಕ 759 ಅಂಶ ಕುಸಿತ

ಗೂಳಿ, ಕರಡಿ ಜಿದ್ದಾಜಿದ್ದಿ: ಕರಗಿದ ಸಂಪತ್ತು

Published:
Updated:
Deccan Herald

ಮುಂಬೈ: ಬುಧವಾರದ ವಹಿವಾಟಿನಲ್ಲಿ ಸಂಪತ್ತು ವೃದ್ಧಿಯಾದ ಸಂಭ್ರಮದಲ್ಲಿದ್ದ ಹೂಡಿಕೆದಾರರಿಗೆ ಗುರುವಾರ ಭಾರಿ ನಿರಾಸೆ ಕಾಡಿತು.

ಬುಧವಾರದ ವಹಿವಾಟಿನಲ್ಲಿ ಸಂಪತ್ತು ಮೌಲ್ಯ ₹ 3 ಲಕ್ಷ ಕೋಟಿಯಷ್ಟು ವೃದ್ದಿಯಾಗಿತ್ತು. ಆದರೆ, ಗುರುವಾರದ ವಹಿವಾಟಿನಲ್ಲಿ ₹ 2.69 ಲಕ್ಷ ಕೋಟಿ ಸಂಪತ್ತು ಕರಗಿತು. ಷೇರುಪೇಟೆಯ ಬಂಡವಾಳ ಮೌಲ್ಯ ₹ 135 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಸೃಷ್ಟಿಯಾದ ಮಾರಾಟದ ಒತ್ತಡ, ಭಾರತವನ್ನೂ ಒಳಗೊಂಡಂತೆ ವಿಶ್ವದ ಎಲ್ಲಾ ಷೇರುಪೇಟೆಗಳಲ್ಲಿಯೂ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ದೇಶದ ಷೇರುಪೇಟೆಗಳಲ್ಲಿ ಗೂಳಿ ಮತ್ತು ಕರಡಿ ಜಿದ್ದಾಜಿದ್ದಿಗೆ ಬಿದ್ದಿವೆ. ಬುಧವಾರದ ವಹಿವಾಟಿನ ಚೇತರಿಕೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಗುರುವಾರ ಭಾರಿ ಕುಸಿತದೊಂದಿಗೆ ವಹಿವಾಟು ಅಂತ್ಯವಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಷೇರುಗಳನ್ನು ಮಾರಾಟ ಮಾಡಲು ಗಮನ ನೀಡುತ್ತಿದ್ದಾರೆ. ಬುಧವಾರ ₹1,096 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಮಾರಾಟದ ಒತ್ತಡವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ದೇಶಿ ಸಾಂಸ್ಥಿಕ ಹೂಡಿಕೆ ದಾರರು
₹ 1,893 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಆರಂಭದಲ್ಲೇ ಕುಸಿತ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಆರಂಭದ ವಹಿವಾಟಿ
ನಲ್ಲಿಯೇ ಒಂದು ಸಾವಿರಕ್ಕೂ ಅಧಿಕ ಅಂಶಗಳಷ್ಟು ಕುಸಿತಕ್ಕೊಳಗಾಯಿತು. 33,723 ಅಂಶಗಳಿಗೆ ಇಳಿಕೆಯಾಗಿತ್ತು. ಮಧ್ಯಾಹ್ನದ ವಹಿವಾಟಿನಲ್ಲಿ ತುಸು ಚೇತರಿಕೆ ಹಾದಿಗೆ ಮರಳಿತಾದರೂ ಇಳಿಮುಖ ವಹಿವಾಟಿನಿಂದ ಹೊರಬರಲಾಗಲಿಲ್ಲ. ದಿನದಂತ್ಯಕ್ಕೆ 759 ಅಂಶಗಳ ಕುಸಿತದೊಂದಿಗೆ 34,325 ಅಂಶಗಳಿಗೆ ತಲುಪಿತು. ಏಪ್ರಿಲ್‌ 11ರ ನಂತರ ದಾಖಲಾಗಿರುವ ಕನಿಷ್ಠ ಮಟ್ಟದ ವಹಿವಾಟಿನ ಅಂತ್ಯ ಇದಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 225 ಅಂಶ ಇಳಿಕೆ ಕಂಡು 10,234 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

‘ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣುತ್ತಿದೆ. ಬಾಂಡ್‌ ಗಳಿಕೆಯೂ ಉತ್ತಮವಾಗಿದೆ. ಇದರಿಂದಾಗಿ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಂದ ಬಂಡವಾಳ ಹೊರಹರಿವು ಹೆಚ್ಚಾಗುತ್ತಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಮುಖ್ಯ ಹೂಡಿಕೆ ಸಲಹೆಗಾರ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ಎಸ್‌ಬಿಐ ಶೇ 5.74ರಷ್ಟು ಗರಿಷ್ಠ ಕುಸಿತ ಕಂಡಿತು. ಟಾಟಾ ಸ್ಟೀಲ್‌ ಶೇ 4.60ರಷ್ಟು ಇಳಿಕೆ ಕಂಡಿದೆ.

ತೈಲ ದರ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 1.78ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 81.61 ಡಾಲರ್‌ಗಳಿಗೆ ತಲುಪಿತು. ಏಷ್ಯಾ ಮತ್ತು ಯುರೋಪ್‌ ಮಾರುಕಟ್ಟೆಗಳಲ್ಲಿಯೂ ಇಳಿಮುಖ ವಹಿವಾಟು ನಡೆಯಿತು.

ಅಮೆರಿಕದ ಮಾರುಕಟ್ಟೆಯೇ ಕಾರಣ

ಬುಧವಾರ ಅಮೆರಿಕದ ಡೋ ಜೋನ್ಸ್‌ ಸೂಚ್ಯಂಕ 800 ಅಂಶಗಳಿಗೂ ಹೆಚ್ಚಿನ ಕುಸಿತ ಕಂಡಿತು. ಏಳು ತಿಂಗಳ ಬಳಿಕದ ಅತಿ ದೊಡ್ಡ ಕುಸಿತ ಇದಾಗಿದೆ. ಇದರ ನಕಾರಾತ್ಮಕ ಪರಿಣಾಮಕ್ಕೆ ಒಳಗಾಗಿ ಭಾರತವನ್ನೂ ಒಳಗೊಂಡಂತೆ ಜಾಗತಿಕ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ನಷ್ಟ ಕಾಣುವಂತಾಗಿದೆ.

‘ಈ ಹಿಂದಿನ ಎಲ್ಲಾ ಕುಸಿತಗಳಿಗೂ ‘ಐಎಲ್‌ಆ್ಯಂಡ್‌ಎಫ್‌ಎಸ್‌’ನ ನಗದು ಕೊರತೆಯೇ ಮುಖ್ಯ ಕಾರಣ. ಇದರ ಜತೆಗೆ ರೂಪಾಯಿ ಕುಸಿತ ಮತ್ತು ಕಚ್ಚಾ ತೈಲ ದರ ಏರಿಕೆಯನ್ನೂ ಪರಿಗಣಿಸಬಹುದು. ಆದರೆ, ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಷೇರುಪೇಟೆ ಭಾರಿ ಇಳಿಕೆ ಕಂಡಿರುವುದರಿಂದಲೇ ಗುರುವಾರದ ವಹಿವಾಟಿನಲ್ಲಿ ನಷ್ಟ ಉಂಟಾಯಿತು’ ಎಂದು ಟಾರಸ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಹೂಡಿಕೆ ಮುಖ್ಯಸ್ಥ ಧೀರಜ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)