ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮತ ಬ್ಯಾಂಕಾಗಿ ದಲಿತರ ಬಳಕೆ

ಚಿಕ್ಕಮಗಳೂರು: ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕರ್ತರ ಸಮಾವೇಶದಲ್ಲಿ ಅಭಿಮತ
Last Updated 12 ಏಪ್ರಿಲ್ 2018, 6:54 IST
ಅಕ್ಷರ ಗಾತ್ರ

ಚಿಕ್ಕಮಗಳೂರು:‘ರಾಜ್ಯದಲ್ಲಿ 40 ವರ್ಷದಿಂದ ದಲಿತರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆದರೆ ಆ ಪಕ್ಷ ದಲಿತರೊಬ್ಬರನ್ನು ಈವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಿಲ್ಲ. ದಲಿತರನ್ನು ಮತಬ್ಯಾಂಕ್‌ ಆಗಿ ಬಳಸಿಕೊಂಡಿದೆ’ ಛಲವಾದಿ ಮಹಾಸಭಾದ ಸಂಸ್ಥಾಪಕ ಕೆ.ಶಿವರಾಂ ದೂಷಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದಿಂದ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನಲ್ಲಿನ ದಲಿತ ಸಮುದಾಯದ ನಾಯಕರು ಎರಡನೇ ತಲೆಮಾರಿನ ನಾಯಕರನ್ನು ಬೆಳೆಸುತ್ತಿಲ್ಲ. ಕಾಂಗ್ರೆಸ್ ತೊರೆದರೆ ಮಾತ್ರ ದಲಿತರ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

‘ತಳ ಸಮುದಾಯದವರೂ ಅಧಿಕಾರ ಹಿಡಿಯಬೇಕು ಎನ್ನುವುದು ಬಿ.ಆರ್.ಅಂಬೇಡ್ಕರ್ ಅಭಿಲಾಷೆಯಾಗಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಸೋಲಿಗೆ ಕಾಂಗ್ರೆಸ್‌ನವರು ಕುತಂತ್ರ ಮಾಡಿದ್ದರು. ಇಂಥ ಪಕ್ಷದಿಂದ ದಲಿತರ ಉದ್ಧಾರ ಸಾಧ್ಯವಾಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಆಹಾರ ಸೇವಿಸಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಕೆಲಸ ಮಾಡಿಲ್ಲ. ದಲಿತರನ್ನು ಒಳ್ಳೆಯ ದಾರಿಯಲ್ಲಿ ಕರೆದೊಯ್ಯುವ ನಾಯಕನ ಅಗತ್ಯ ಇದೆ. ದಲಿತರ, ರೈತರ, ಮಹಿಳೆಯರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಲ್ಲ. ಇಂದಿರಾಗಾಂಧಿ, ನೆಹರೂ ಕಾಲದಿಂದ ಈವರೆಗೆ 82 ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಸನ್ನಿವೇಶಕ್ಕೆ ತಕ್ಕಂತೆ ತಿದ್ದುಪಡಿ ಮಾಡತ್ತೇವೆ ಎಂದು ಹೇಳಿರುವುದನ್ನೇ ಕಾಂಗ್ರೆಸ್‌ನವರು ತಿರುಚಿ, ರಾಜಕೀಯ ದಾಳವಾಗಿಸಿಕೊಂಡಿದ್ದಾರೆ’ ಎಂದು ದೂಷಿಸಿದರು.

ಬಿಜೆಪಿ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜನಪರ ಯೋಜನೆಗಳನ್ನು ನೀಡಿದೆ, ದಲಿತರ ಏಳಿಗೆಗೆ ಶ್ರಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಟೀನ್ ಆರಂಭಿಸಿ ರಾಜ್ಯದ ಜನರ ಹಸಿವು ನೀಗಿಸಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸುತ್ತಿದೆ’ ಎಂದು ಹೇಳಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ಆರ್‌ಎಸ್‌ಎಸ್ ಸಂಘಟನೆ, ಬಿಜೆಪಿಯು ಮಹಾತ್ಮ ಗಾಂಧಿ ಅವರಂತೆ ಬಿ.ಆರ್.ಅಂಬೇಡ್ಕರ್‌ಅವರನ್ನು ಗೌರವಿಸುತ್ತದೆ. ಎಲ್ಲ ಜನರ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಬಿಜೆಪಿ ಉದ್ದೇಶವಾಗಿದೆ’ ಎಂದು ಹೇಳಿದರು.

‘ಗ್ರಾಮದಲ್ಲಿ ಎಲ್ಲ ವರ್ಗದವರಿಗೂ ಒಂದೇ ಸ್ಮಶಾನ ಇರಬೇಕು. ಎಲ್ಲ ದೇಗುಲಗಳಿಗೆ ಎಲ್ಲರಿಗೂ ಪ್ರವೇಶ ಸಿಗಬೇಕು ಎನ್ನುವುದು ಆರ್‌ಎಸ್‌ಎಸ್‌ ಧ್ಯೇಯವಾಗಿದ್ದು, ಆರ್‌ಎಸ್‌ಎಸ್‌ ಸಂಘಟನೆ ಪ್ರಾಬಲ್ಯದ ಪ್ರದೇಶದಲ್ಲಿ ದಲಿತ ದೌರ್ಜನ್ಯ ನಡೆದಿಲ್ಲ. ಜಾತ್ಯತೀತ ಎಂದು ಹೇಳುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜಾತಿ ರಾಜಕಾರಣ ಮಾಡುತ್ತಿವೆ’ ಎಂದು ದೂಷಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಡಿ.ಲೋಕೇಶ್, ಮುಖಂಡರಾದ ಕೋಟೆ ರಂಗನಾಥ್, ಜಸಂತಾಅನಿಲ್‌ಕುಮಾರ್, ಬಿ.ಜಿ.ಸೋಮಶೇಖರಪ್ಪ, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಹಿರಿಗಯ್ಯ, ಮುತ್ತಯ್ಯ, ಹೊನ್ನಬೋವಿ, ಬೆಳವಾಡಿ ರವೀಂದ್ರ, ಮೀನಾಕ್ಷಿ ಮಂಜುನಾಥ್, ಹಿರೇಮಗಳೂರು ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT