ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಕ್ರೈಂ ಠಾಣೆಯಲ್ಲಿ ಸಿಬ್ಬಂದಿ ಕೊರತೆ

ನಿತ್ಯವೂ 15ರಿಂದ 25 ಪ್ರಕರಣ ದಾಖಲು
Last Updated 28 ಮೇ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್ ಹಾಗೂ ಬ್ಯಾಂಕಿಂಗ್‌ ಸಂಬಂಧಿ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ನಗರದ ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯೂ ಏರುತ್ತಿದೆ. ಆದರೆ, ಅಂಥ ಪ್ರಕರಣಗಳ ತನಿಖೆಯು ಸಿಬ್ಬಂದಿ ಕೊರತೆಯಿಂದ ವಿಳಂಬವಾಗುತ್ತಿದೆ.

ಸೈಬರ್‌ ಅಪರಾಧಗಳ ತನಿಖೆಗೆಂದೇ, ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ 2015ರ ಅಕ್ಟೋಬರ್‌ನಲ್ಲಿ ಪ್ರತ್ಯೇಕ ಠಾಣೆ ತೆರೆಯಲಾಗಿದೆ. ಅಲ್ಲಿ ಈಗ ನಿತ್ಯವೂ 15ರಿಂದ 25 ಪ್ರಕರಣಗಳು ದಾಖಲಾಗುತ್ತಿವೆ. ಅವುಗಳ ಪೈಕಿ ಬಹುಪಾಲು ಪ್ರಕರಣಗಳು ಇತ್ಯರ್ಥವೇ ಆಗಿಲ್ಲ.

₹5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಬಗ್ಗೆ ಸಿಐಡಿ ಸೈಬರ್‌ ವಿಭಾಗದಲ್ಲಿ ದೂರು ದಾಖಲಿಸಲು ಅವಕಾಶವಿದೆ. ₹5 ಲಕ್ಷದೊಳಗಿನ ವಂಚನೆ ಸಂಬಂಧದ ದೂರುಗಳನ್ನು ಈ ಠಾಣೆಗೆ ನೀಡಬಹುದು. ಬಹುಪಾಲು ಮಂದಿ, ₹5 ಲಕ್ಷಕ್ಕಿಂತ ಕಡಿಮೆ ಹಣವನ್ನೇ ಆನ್‌ಲೈನ್‌ ಖದೀಮರ ಕೃತ್ಯದಿಂದ ಕಳೆದುಕೊಳ್ಳುತ್ತಿದ್ದಾರೆ.

ಠಾಣೆ ಆರಂಭವಾದ ದಿನಗಳಲ್ಲಿ ಸಿಐಡಿ ಸೈಬರ್ ವಿಭಾಗದ ಸಿಬ್ಬಂದಿಯೇ ದೂರುಗಳ ತನಿಖೆ ನಡೆಸುತ್ತಿದ್ದರು. 2017ರ ಮಾರ್ಚ್‌ನಲ್ಲಿ ಠಾಣೆಯ ನಿರ್ವಹಣೆ ಜವಾಬ್ದಾರಿಯನ್ನು ನಗರದ ಸಿಸಿಬಿ ವಿಭಾಗಕ್ಕೆ ವಹಿಸಲಾಗಿದೆ.

ಈ ಠಾಣೆಯಲ್ಲಿ 40 ಕಾನ್‌ಸ್ಟೆಬಲ್‌ಗಳು, 16 ಹೆಡ್‌ ಕಾನ್‌ಸ್ಟೆಬಲ್‌ಗಳು, ಆರು ಎಸ್ಐ, ನಾಲ್ವರು ಇನ್‌ಸ್ಪೆಕ್ಟರ್‌, ಇಬ್ಬರು ಎಸಿಪಿ ಹಾಗೂ ಡಿಸಿಪಿ ಇರಬೇಕೆಂಬುದು ದಾಖಲೆಯಲ್ಲಿದೆ. ಆದರೆ, ಸದ್ಯ ಇಲ್ಲಿರುವ ಸಿಬ್ಬಂದಿ ಸಂಖ್ಯೆ ಕೇವಲ 26.

‘ಆನ್‌ಲೈನ್‌ ವ್ಯವಹಾರ ಹೆಚ್ಚಾಗುತ್ತಿದ್ದಂತೆ, ವಂಚನೆ ಪ್ರಮಾಣವೂ ಜಾಸ್ತಿ ಆಗುತ್ತಿದೆ. ಕೆಲ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಲಾಗಿದ್ದು, ಬಹುಪಾಲು ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲವೆಂಬ ಬೇಸರವಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತಲೇ ಇದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಠಾಣೆಯಲ್ಲಿ ಒಬ್ಬ ಇನ್‌ಸ್ಪೆಕ್ಟರ್‌, ಇಬ್ಬರು ಪಿಎಸ್‌ಐ ಹಾಗೂ 23 ಸಿಬ್ಬಂದಿ ಇದ್ದಾರೆ. ಸಿಸಿಬಿ ವಿಭಾಗಗಳ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಯೇ ಈ ಠಾಣೆಯ ಪ್ರಭಾರಿ ಡಿಸಿಪಿ ಆಗಿದ್ದಾರೆ. ಬೆಂಗಳೂರಿನ ಒಂದು ಉಪ ವಿಭಾಗದಲ್ಲಿ ವರದಿಯಾಗುವಷ್ಟು ಪ್ರಕರಣಗಳು ಈ ಠಾಣೆಯೊಂದರಲ್ಲೇ ದಾಖಲಾಗುತ್ತಿವೆ. ಠಾಣೆಗೆ ಒಂದೇ ವಾಹನವಿದ್ದು, ಪ್ರಕರಣದ ತನಿಖೆಗೆ ಹೋಗಬೇಕಾದರೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕು. ಓಲಾ ಹಾಗೂ ಉಬರ್‌ ಕಂಪನಿಯ ಕ್ಯಾಬ್‌ಗಳಲ್ಲೂ ಹೋಗಿ ಆರೋಪಿಗಳನ್ನು ಬಂಧಿಸಿದ ಉದಾಹರಣೆಗಳಿವೆ’ ಎಂದು ಹೇಳಿದರು.

ಮೂಲ ಪತ್ತೆ ಬಹು ಕಷ್ಟ; ‘ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಖದೀಮರು ಕೃತ್ಯ ಎಸಗುತ್ತಿದ್ದಾರೆ. ನಮ್ಮಲ್ಲಿರುವ ಹಳೇ ತಂತ್ರಜ್ಞಾನದ ಉಪಕರಣಗಳಿಂದ, ಆರೋಪಿಗಳ ಮೂಲ ಪತ್ತೆ ಹಚ್ಚುವುದು ಬಲು ಕಷ್ಟ’ ಎಂದು ಅಧಿಕಾರಿ ಹೇಳಿದರು.

‘ಕಂಪ್ಯೂಟರ್, ಸಿಮ್‌ ಕಾರ್ಡ್ ಹಾಗೂ ಇತರ ಸಲಕರಣೆಗಳ ಮಾಹಿತಿ ಪಡೆದು ತನಿಖೆ ಮಾಡಬೇಕು. ಅದಕ್ಕಾಗಿ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಮೊಬೈಲ್ ಸೇವಾ ಕಂಪನಿಗಳ ಮೊರೆ ಹೋಗಬೇಕು. ಅಲ್ಲಿಂದ ವರದಿ ಬರುವುದು ತಡವಾದರೆ, ತನಿಖೆ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

ಸಲ್ಲಿಕೆಯಾಗದ ದೋಷಾರೋಪ ಪಟ್ಟಿ; 2017ರ ಮಾರ್ಚ್‌ನಿಂದ ಇದುವರೆಗೂ ಸಾವಿರಾರು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆ. ಆ ಪೈಕಿ ಶೇ 5ರಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಅವರ ವಿರುದ್ಧ ದೋಷಾರೋಪ ಪಟ್ಟಿ ಮಾತ್ರ ಸಲ್ಲಿಸಿಲ್ಲ.

‘ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಆರೋಪಿಗಳ ವಂಚನೆ ಬಗ್ಗೆ ಸಾಕಷ್ಟು ಪುರಾವೆ ಸಂಗ್ರಹಿಸಬೇಕು. ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಬೇಕು. ಪುರಾವೆಗಳು ಇಲ್ಲದಿದ್ದರೆ, ಆರೋಪಿಯನ್ನು ಬಂಧಿಸಿದ್ದು ವ್ಯರ್ಥವಾಗುತ್ತದೆ. ಆರೋಪ ಪಟ್ಟಿ ಸಲ್ಲಿಕೆಗೂ ಸಿಬ್ಬಂದಿ ಕೊರತೆ ಅಡ್ಡಿ ಆಗಿದೆ’ ಎಂದು ಅಧಿಕಾರಿ ತಿಳಿಸಿದರು.

ಯಾವ್ಯಾವ ವಂಚನೆ ಬಗ್ಗೆ ದೂರು?

* ನೌಕರಿ ಆಮಿಷವೊಡ್ಡಿ ವಂಚನೆ

* ಮದುವೆ ಆಗುವುದಾಗಿ ವೈವಾಹಿಕ ಜಾಲತಾಣದ ಮೂಲಕ ವಂಚನೆ

* ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಖಾತೆಗಳ ಮಾಹಿತಿ ಪಡೆದು ವಂಚನೆ

* ಉಡುಗೊರೆ ಹೆಸರಿನಲ್ಲಿ ವಂಚನೆ

* ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹ ಬೆಳೆಸಿ ವಂಚನೆ

ಅಂಕಿ–ಅಂಶ

* 2018ರ ಜನವರಿಯಿಂದ ಮೇವರೆಗೆ ದಾಖಲಾಗಿದ್ದ ಪ್ರಕರಣಗಳು – 1,470

* ಪ್ರಸಕ್ತ ವರ್ಷದ ಜನವರಿಯಿಂದ ಮೇವರೆಗೆ ದಾಖಲಾದ ಪ್ರಕರಣಗಳು – ‌1,565

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT