ಶನಿವಾರ, ಡಿಸೆಂಬರ್ 7, 2019
25 °C
ವಾಹನ, ಎಫ್‌ಎಂಸಿಜಿ, ಬ್ಯಾಂಕಿಂಗ್‌ ಷೇರುಗಳ ಗಳಿಕೆ

ಸಕಾರಾತ್ಮಕ ವಹಿವಾಟು

Published:
Updated:

ಮುಂಬೈ: ಸತತ ಮೂರು ವಹಿವಾಟು ಅವಧಿಗಳಲ್ಲಿ ಇಳಿಮುಖವಾಗಿದ್ದ ದೇಶಿ ಷೇರುಪೇಟೆಗಳು ಸೋಮವಾರ ಚೇತರಿಕೆ ಹಾದಿಗೆ ಮರಳಿದವು.

ವಾಹನ, ಎಫ್‌ಎಂಸಿಜಿ ಮತ್ತು ಬ್ಯಾಂಕಿಂಗ್‌ ಷೇರುಗಳು ಉತ್ತಮ ಗಳಿಕೆ ಕಾಣುವ ಮೂಲಕ ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 373 ಅಂಶ ಏರಿಕೆ ಕಂಡು 35,354 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಆದರೆ, ಬಿಎಸ್‌ಇ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕವು ಶೇ 0.15ರಷ್ಟು ಇಳಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 101 ಅಂಶ ಹೆಚ್ಚಾಗಿ 10,628 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಅಕ್ಟೋಬರ್‌ನಲ್ಲಿ ಭಾರಿ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಈ ತಿಂಗಳು ಚೇತರಿಕೆ ಹಾದಿಗೆ ಮರಳಿದೆ. ಇದರ ಜತೆಗೆ ಕಚ್ಚಾ ತೈಲ ದರ ಇಳಿಕೆ ಹಾಗೂ ದೇಶಿ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿರುವುದು ಷೇರುಪೇಟೆಯಲ್ಲಿ ಉತ್ತಮ ಖರೀದಿ ಚಟುವಟಿಕೆ ನಡೆಯುವಂತೆ ಮಾಡಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 42 ಸಾವಿರ ಕೋಟಿ  ಮರುಬಂಡವಾಳ ಘೋಷಣೆಯು ಬ್ಯಾಂಕಿಂಗ್ ಷೇರುಗಳ ಗಳಿಕೆಗೆ ನೆರವಾಗಿದೆ.

ಜಾಗತಿಕ ಮಟ್ಟದಲ್ಲಿ, ಏಷ್ಯಾ ಮತ್ತು ಯುರೋಪ್‌ ಷೇರುಪೇಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯಿತು.

ರೂಪಾಯಿ 18 ಪೈಸೆ ಇಳಿಕೆ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಏಳು ದಿನಗಳ ರೂಪಾಯಿ ಮೌಲ್ಯ ಏರಿಕೆಗೆ ಸೋಮವಾರ ತೆರೆ ಬಿದ್ದಿದೆ. 

ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಇಳಿಕೆ ಕಂಡಿತು. ಇದರಿಂದ ಒಂದು ಡಾಲರ್‌ಗೆ ₹ 70.87ರಂತೆ ವಿನಿಮಯಗೊಂಡಿತು. ಏಳು ದಿನಗಳಲ್ಲಿ ರೂಪಾಯಿ ಮೌಲ್ಯ 220 ಪೈಸೆಗಳಷ್ಟು ಏರಿಕೆ ಕಂಡಿತ್ತು.

ಬ್ಯಾಂಕ್‌ಗಳಿಗೆ ಶೀಘ್ರವೇ ಬಂಡವಾಳ
ನವದೆಹಲಿ:
ಕೇಂದ್ರ ಸರ್ಕಾರವು 2019ರ ಮಾರ್ಚ್‌ ಅಂತ್ಯದ ವೇಳೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 42 ಸಾವಿರ ಕೋಟಿ ನೀಡಲಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ ಅಂದರೆ ಡಿಸೆಂಬರ್‌ ತಿಂಗಳ ಮಧ್ಯದಲ್ಲಿ ₹ 42 ಸಾವಿರ ಕೋಟಿ ನೀಡಲಾಗುವುದು ಎಂದಿದ್ದಾರೆ. 

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗಳಂತಹ (ಪಿಎನ್‌ಬಿ)  ದೊಡ್ಡ ಬ್ಯಾಂಕ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳದ ಅಗತ್ಯ ಇಲ್ಲ ಎಂದೂ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು