ವಹಿವಾಟಿನ ದಾಖಲೆಗಳ ವಾರ

7

ವಹಿವಾಟಿನ ದಾಖಲೆಗಳ ವಾರ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಐದು ದಿನಗಳಲ್ಲಿಯೂ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ. ಹೂಡಿಕೆದಾರರ ಸಂಪತ್ತು ₹ 4.67 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ.

36,501 ಅಂಶಗಳ ಗರಿಷ್ಠ ಮಟ್ಟದಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದ (ಬಿಎಸ್‌ಇ) ವಹಿವಾಟು ಆರಂಭವಾಯಿತು. ವಾರದಲ್ಲಿ ಐಸಿಹಾಸಿಕ ಮಟ್ಟವಾದ 37,368 ಅಂಶಗಳಿಗೆ ಮತ್ತು ಕನಿಷ್ಠ ಮಟ್ಟವಾದ 36,252ನ್ನು ತಲುಪಿತ್ತು. ಅಂತಿಮವಾಗಿ 37,336 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 11,019 ಅಂಶಗಳಲ್ಲಿ ವಹಿವಾಟು ಆರಂಭಿಸಿತು. ಸಾರ್ವಕಾಲಿಕ ಗರಿಷ್ಠ ಮಟ್ಟವಾದ 11,283ಕ್ಕೆ ಏರಿಕೆ ಕಂಡು ಅಂತಿಮವಾಗಿ 11,278 ರಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ಸಕಾರಾತ್ಮಕ ಅಂಶಗಳು: ಸರ್ಕಾರಿ ಬಾಂಡ್‌ಗಳ ಜುಲೈ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗುವುದರಿಂದ ಚಂಚಲತೆ ಮೂಡಿತ್ತು. ಹೀಗಿದ್ದರೂ ಜಿಎಸ್‌ಟಿ ಮಂಡಳಿಯು ಗ್ರಾಹಕ ಬಳಕೆ ಸರಕುಗಳ ತೆರಿಗೆ ದರಗಳಲ್ಲಿ ಇಳಿಕೆ ಮಾಡಿರುವುದು ಷೇರುಪೇಟೆಯಲ್ಲಿ ಸೂಚ್ಯಂಕದ ಓಟಕ್ಕೆ ಬಲ ನೀಡಿತು.

ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲವಾಗಿರುವುದು ಸಹ ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆಯು ಮಾರುಕಟ್ಟೆ ನಿರೀಕ್ಷೆಗಿಂತಲೂ ಉತ್ತಮವಾಗಿದೆ.

ರೂಪಾಯಿ ಮೌಲ್ಯ ತುಸು ಚೇತರಿಕೆ, ಕಚ್ಚಾ ತೈಲ ದರ ಇಳಿಕೆ, ವಿದೇಶಿ ಬಂಡವಾಳ ಹೂಡಿಕೆ ಉತ್ತಮ ಚಟುವಟಿಕೆಗೆ ನೆರವಾದವು.

ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಯುರೋಪ್‌ ಒಕ್ಕೂಟಗಳ ಮಧ್ಯೆ ಮೂಡಿದ್ದ ವಾಣಿಜ್ಯ ಸಂಘರ್ಷ ತಗ್ಗುವ ನಿರೀಕ್ಷೆ ವ್ಯಕ್ತವಾಗಿದೆ. ಇದು ಸಹ ಸೂಚ್ಯಂಕದ ಓಟಕ್ಕೆ ನೆರವಾಯಿತು ಎಂದು ತಜ್ಞರು ಹೇಳಿದ್ದಾರೆ.

ಲೋಹ, ಎಫ್‌ಎಂಸಿಜಿ, ರಿಯಲ್‌ ಎಸ್ಟೇಟ್‌, ಭಾರಿ ಯಂತ್ರೋಪಕರಣಗಳು, ಬ್ಯಾಂಕಿಂಗ್‌, ಗ್ರಾಹಕ ಬಳಕೆ ವಸ್ತುಗಳು, ವಿದ್ಯುತ್, ತೈಲ ಮತ್ತು ಅನಿಲ, ಆರೋಗ್ಯ ಸೇವೆ ಮತ್ತು ವಾಹನ ಉದ್ಯಮದ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾದವು. ಐಟಿ ಮತ್ತು ತಂತ್ರಜ್ಞಾನ ವಲಯಗಳು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾದವು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !