ಮಿಡ್‌ಕ್ಯಾಪ್‌: ಇರಲಿ ತಾಳ್ಮೆ

7

ಮಿಡ್‌ಕ್ಯಾಪ್‌: ಇರಲಿ ತಾಳ್ಮೆ

Published:
Updated:

ಬೆಂಗಳೂರು: ಷೇರು ಪೇಟೆಯಲ್ಲಿ ಹುರುಪು ಮತ್ತೆ ಕಂಡುಬಂದಿರುವುದು, ಬಿಎಸ್‌ಇ ಸೆನ್ಸೆಕ್ಸ್‌ ಹಾಗೂ ಕೆಲವು ಕಂಪನಿಗಳ ಷೇರುಗಳ ಮೌಲ್ಯ ಎತ್ತರಕ್ಕೆ ಹೋಗುತ್ತಿರುವುದು ಹೂಡಿಕೆದಾರರಲ್ಲೂ ಖುಷಿ ತಂದಿದೆ. ಆದರೆ, ಮಧ್ಯಮ ಪ್ರಮಾಣದ ವಹಿವಾಟು ನಡೆಸುವ ಕಂಪನಿಗಳಲ್ಲಿ ಹೂಡಿಕೆ ನಡೆಸಿದವರ ಬಗ್ಗೆ ಒಂದು ನೋಟ ಹರಿಸಬೇಕು.

ಮಧ್ಯಮ ಪ್ರಮಾಣದ ಕಂಪನಿಗಳಲ್ಲಿ (midcap) ಮ್ಯೂಚುವಲ್‌ ಫಂಡ್‌ ಮೂಲಕ ಹಣ ಹೂಡಿದವರು, 2016 ಹಾಗೂ 2017ರಲ್ಲಿ ಸಾಕಷ್ಟು ಲಾಭ ಮಾಡಿಕೊಂಡರು. 2018ರ ಜನವರಿಯ ನಂತರ ಈ ಕಂಪನಿಗಳ ಷೇರುಗಳ ಮೌಲ್ಯ ಏರುಗತಿಯಲ್ಲಿ ಸಾಗಿಲ್ಲ. ವಾಸ್ತವದಲ್ಲಿ, ಈ ವರ್ಗದ ಕಂಪನಿಗಳ ಷೇರುಗಳ ಮೌಲ್ಯ ಶೇಕಡ 10ರಷ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿರುವುದೂ ಇದೆ. ಅಂದರೆ, ಹೂಡಿಕೆದಾರರಿಗೆ ಅಷ್ಟರಮಟ್ಟಿಗೆ ನಷ್ಟ ಉಂಟಾಗಿದೆ.

ಆದರೆ, ಜುಲೈ ತಿಂಗಳಲ್ಲಿ ಈ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚುತ್ತಿರುವುದನ್ನು ‘ನಿಫ್ಟಿ ಮಿಡ್‌ಕ್ಯಾಪ್‌ 100’ ಸೂಚ್ಯಂಕ ತೋರಿಸಿಕೊಟ್ಟಿದೆ. ಜುಲೈ ತಿಂಗಳ ಆರಂಭದಲ್ಲಿ 18,063ರಲ್ಲಿ ಇದ್ದ ಸೂಚ್ಯಂಕ, ಜುಲೈ ತಿಂಗಳ ಕೊನೆಯ ದಿನವಾದ ಮಂಗಳವಾರದ ವಹಿವಾಟಿನ ಅಂತ್ಯದ ವೇಳೆಗೆ 18,897ಕ್ಕೆ ತಲುಪಿತ್ತು. ಅಂದರೆ, ಒಂದು ತಿಂಗಳ ಅವಧಿಯಲ್ಲಿ ಈ ಕಂಪನಿಗಳಲ್ಲಿ ಷೇರುಗಳ ಸರಾಸರಿ ಮೌಲ್ಯದಲ್ಲಿ ಶೇಕಡ 4.1ರಷ್ಟು ಹೆಚ್ಚಳ ಆಗಿದೆ. ಇದು ಹೂಡಿಕೆದಾರರಲ್ಲೂ ತುಸು ಸಮಾಧಾನ ಮೂಡಿಸಿದೆ.

ನಿಫ್ಟಿ ಮಿಡ್‌ಕ್ಯಾಪ್‌ – 100 ಸೂಚ್ಯಂಕ ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ಸ್ಥಿತಿಗೆ ಹೋಲಿಕೆ ಮಾಡಿದರೆ, ಸೂಚ್ಯಂಕವು ಶೇಕಡ 10.68ರಷ್ಟು ಕುಸಿದಿರುವುದು ಸತ್ಯವಾದರೂ, ಮ್ಯೂಚುವಲ್‌ ಫಂಡ್‌ಗಳ ಮೂಲಕ, ವ್ಯವಸ್ಥಿತ ಹೂಡಿಕೆ ಯೋಜನೆಗಳ ಮೂಲಕ ಇಲ್ಲಿ ಹೂಡಿಕೆ ಮಾಡಿದವರು ತೀರಾ ಬೇಸರ ಮಾಡಿಕೊಳ್ಳಬೇಕಾದ ಸ್ಥಿತಿ ಇಲ್ಲ. ಏಕೆಂದರೆ, ಕಳೆದ ಮೂರು ವರ್ಷಗಳಲ್ಲಿ ಮಿಡ್‌ಕ್ಯಾ‍ಪ್‌ ಫಂಡ್‌ಗಳು ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಲಾಭವನ್ನು ತಂದುಕೊಟ್ಟಿವೆ.

ಉತ್ತಮ ಶ್ರೇಯಾಂಕದ ಕೆಲವು ಮಿಡ್‌ಕ್ಯಾಪ್‌ ಫಂಡ್‌ಗಳು ಮೂರು ವರ್ಷಗಳಲ್ಲಿ ಕನಿಷ್ಠ ಶೇಕಡ 11ರಷ್ಟರಿಂದ ಗರಿಷ್ಠ ಶೇಕಡ 15ರಷ್ಟವರೆಗೆ ಲಾಭ ತಂದುಕೊಟ್ಟಿವೆ. ‘ಇದು ಹಣದುಬ್ಬರದ ಪ್ರಮಾಣಕ್ಕಿಂತಲೂ ಹೆಚ್ಚಿನದು. ಮಿಡ್‌ಕ್ಯಾಪ್‌ ಕಂಪನಿಗಳ ಷೇರು ಮೌಲ್ಯದಲ್ಲಿ ಜನವರಿಯಿಂದ ಈಚೆಗೆ ಕಂಡುಬಂದ ಕುಸಿತಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ಮಾರುಕಟ್ಟೆ ಈಗ ಕುಸಿದಂತೆ ಕಂಡರೂ ಮುಂದೆ ಪುನಃ ಚೇತರಿಕೆಯ ಹಾದಿ ಹಿಡಿಯುತ್ತದೆ’ ಎನ್ನುತ್ತಿದ್ದಾರೆ ಆರ್ಥಿಕ ಸಲಹೆಗಾರರು.

‘2015ರ ಡಿಸೆಂಬರ್‌ನಲ್ಲಿ ನಾನು ಒಂದು ಮಿಡ್‌ಕ್ಯಾಪ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಆರಂಭಿಸಿದೆ. ವ್ಯವಸ್ಥಿತ ಹೂಡಿಕೆ ಯೋಜನೆಯ ಮೂಲಕ ಇದನ್ನು ಆರಂಭಿಸಿದ್ದೆ. ಈ ವರ್ಷದ ಜನವರಿಗೆ ವೇಳೆ ನಾನು ಶೇಕಡ 30ರಷ್ಟು ಲಾಭ ಪಡೆದಿದ್ದೆ. ಆದರೆ ನಂತರ ಕಂಡ ಕುಸಿತದ ಕಾರಣದಿಂದಾಗಿ, ಲಾಭದ ಪ್ರಮಾಣ ಶೇಕಡ 6ಕ್ಕೆ ಇಳಿದಿದ್ದೂ ಇದೆ. ಆದರೆ, ಜುಲೈ ತಿಂಗಳಲ್ಲಿ ಮಿಡ್‌ಕ್ಯಾಪ್‌ ಕಂಪನಿಗಳ ಷೇರುಗಳ ಮೌಲ್ಯ ಮತ್ತೆ ಚೇತರಿಸಿಕೊಳ್ಳುತ್ತಿರುವ ಕಾರಣ, ಲಾಭದ ಪ್ರಮಾಣ ಶೇಕಡ 14ಕ್ಕೆ ಏರಿಕೆಯಾಗಿದೆ’ ಎಂದರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮೂವತ್ತು ವರ್ಷ ವಯಸ್ಸಿನ ಜಯಪಾಲ್ ಶೆಟ್ಟಿ.

‘ನೀವು ವ್ಯವಸ್ಥಿತ ಹೂಡಿಕೆ ಯೋಜನೆಗಳ ಮೂಲಕ ಮಿಡ್‌ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾದರೆ, ಅದನ್ನು ಮುಂದುವರಿಸಲು ಅಡ್ಡಿಯಿಲ್ಲ. ಆದರೆ, ನಿಮ್ಮ ಉಳಿತಾಯದ ಅಷ್ಟೂ ಹಣವನ್ನು ಮಿಡ್‌ಕ್ಯಾಪ್‌ ಮೇಲೆ ಸುರಿಯುವುದು ಬೇಡ. ಎಲ್ಲ ವಲಯಗಳ ಮೇಲೆಯೂ ಹೂಡಿಕೆ ಆರಂಭಿಸಿ’ ಎಂಬ ಸಲಹೆಯನ್ನು ತಜ್ಞರು ನೀಡುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !