ಬುಧವಾರ, ಜನವರಿ 29, 2020
28 °C

ಇನ್ಫೊಸಿಸ್‌ ಷೇರು ಶೇ 4.78 ಏರಿಕೆ; ಲವಲವಿಕೆ ಕಂಡ ನಿಫ್ಟಿ, ಸೆನ್ಸೆಕ್ಸ್‌ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಇನ್ಫೊಸಿಸ್‌ ಷೇರು ಏರಿಕೆ, ಸಂವೇದಿ ಸೂಚ್ಯಂಕ ನಿಫ್ಟಿ ಎತ್ತರಕ್ಕೆ

ಬೆಂಗಳೂರು: ದೇಶದ ಬೃಹತ್‌ ಐಟಿ ಸಂಸ್ಥೆಗಳಲ್ಲಿ ಒಂದಾದ ಇನ್ಫೊಸಿಸ್‌ ಡಿಸೆಂಬರ್‌ ತ್ರೈಮಾಸಿಕದಲ್ಲಿ ಲಾಭ ಗಳಿಕೆ ಪ್ರಮಾಣ ಹೆಚ್ಚಳ ಘೋಷಿಸಿಕೊಂಡ ಪರಿಣಾಮ ಕಂಪನಿ ಷೇರು ಬೆಲೆ ಸೋಮವಾರ ಶೇ 4.78ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ದೇಶದ ಷೇರು ಪೇಟೆಗಳಲ್ಲೂ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೂಚ್ಯಂಕಗಳು ಹೊಸ ಎತ್ತರ ತಲುಪಿವೆ. 

ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಿಎಫ್‌ಇ ನೀಲಂಜನ್‌ ರಾಯ್‌ ಅವರ ಮೇಲೆ ಅನಾಮಧೇಯ ಸಿಬ್ಬಂದಿ ಮಾಡಿದ್ದ ದೋಷಾರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ಕೈಗೊಂಡಿದ್ದ ಇನ್ಫೊಸಿಸ್‌ ಶುಕ್ರವಾರ ದೋಷಮುಕ್ತ ಎಂದು ಘೋಷಿಸಿತ್ತು. ಇದರೊಂದಿಗೆ ಕಂಪನಿ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 4,466 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿರುವ ಪರಿಣಾಮ ಹೂಡಿಕೆದಾರರು ಇನ್ಫೊಸಿಸ್‌ ಷೇರುಗಳ ಖರೀದಿಗೆ ಉತ್ಸಾಹ ತೋರಿದ್ದು, ಷೇರು ಬೆಲೆ ₹ 773.45 ತಲುಪಿದೆ. ವಹಿವಾಟು ಆರಂಭವಾಗಿ ಎರಡು ತಾಸಿನ ಒಳಗೆ ಶೇ 4.78ರಷ್ಟು ಏರಿಕೆ ದಾಖಲಿಸಿದೆ. 

ಇದನ್ನೂ ಓದಿ: ಹಣಕಾಸು ಅವ್ಯವಹಾರ ನಡೆದಿಲ್ಲ, ಸಿಇಒ ಸಲೀಲ್‌ ಪಾರೇಖ್‌ ದೋಷಮುಕ್ತ: ಇನ್ಫೊಸಿಸ್‌

ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 0.55ರಷ್ಟು ಹೆಚ್ಚಳದೊಂದಿಗೆ 12,323.80 ಅಂಶ ತಲುಪಿದರೆ, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶೇ 0.61ರಷ್ಟು ಏರಿಕೆಯೊಂದಿಗೆ 41,853.85 ಅಂಶ ಮುಟ್ಟಿದೆ. ನಿಫ್ಟಿ ಐಟಿ ವಲಯ ಶೇ 1.23ರಷ್ಟು ಏರಿಕೆ ಕಂಡಿದೆ.  

ಮಂಡನೆಯಾಗಲಿರುವ ಕೇಂದ್ರ ಬಜೆಟ್‌, ಕಂಪನಿಗಳ ತ್ರೈಮಾಸಿಕ ಗಳಿಕೆ ಹಾಗೂ ಅಮೆರಿಕ–ಇರಾನ್‌ ನಡುವೆ ನಿಯಂತ್ರಣದಲ್ಲಿರುವ ಪರಿಸ್ಥಿತಿ ಎಲ್ಲವೂ ದೇಶದ ಷೇರು ಪೇಟೆಗಳ ಮೇಲೆ ಪರಿಣಾಮ ಬೀರಿವೆ. ಇಂದು ಡಾಲರ್‌ ಎದುರು ರೂಪಾಯಿ ಮೌಲ್ಯ 12 ಪೈಸಿ ಹೆಚ್ಚಳದೊಂದಿಗೆ ₹ 70.82ರಲ್ಲಿ ವಹಿವಾಟು ನಡೆದಿದೆ. ಚಿಲ್ಲರೆ ಹಣದುಬ್ಬರ ಮಾಹಿತಿಯು ಸೋಮವಾರ ಹೊರಬರಲಿದ್ದು, ಹೂಡಿಕೆದಾರರ ಮೇಲೆ ಪರಿಣಾಮ ಬೀರಬಹುದಾಗಿದೆ. 

ಇದನ್ನೂ ಓದಿ: 'ಕಾಸ್‌ಮಾತು' ಲೇಖನ 1: ದುಡಿಯೋರಿಗೆ ಸಂಪತ್ತು ಸೃಷ್ಟಿಸಿಕೊಳ್ಳುವ ದಾರಿ ಇಲ್ಲಿದೆ

ಕೋಲ್‌ ಇಂಡಿಯಾ ಲಿಮಿಟೆಡ್‌ ಷೇರು ಶೇ 2.14ರಷ್ಟು ಕಂಡರೆ, ಭಾರ್ತಿ ಏರ್‌ಟೆಲ್‌ ಶೇ 1.47 ಹಾಗೂ ಯೆಸ್‌ ಬ್ಯಾಂಕ್‌ ಲಿಮಿಟೆಡ್‌ ಷೇರು ಶೇ 6.15ರಷ್ಟು ಕುಸಿದಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು