ಬುಧವಾರ, ಏಪ್ರಿಲ್ 1, 2020
19 °C

ಮತ್ತೆ ಮಹಾ ಕುಸಿತ: ಸೆನ್ಸೆಕ್ಸ್ 2,359 ಅಂಶ ಇಳಿಕೆ, ನಿಫ್ಟಿ 2 ವರ್ಷದ ಕನಿಷ್ಠ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದೇಶದ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ; ಷೇರು ವಹಿವಾಟು ನಡೆಸುತ್ತಿರುವ ವ್ಯಕ್ತಿ– ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ಗುರುವಾರ ಮತ್ತೊಮ್ಮೆ ಮಹಾ ಕುಸಿತ ಆಗಿದೆ. ಮುಂಬೈ ಷೇರುಪೇಟೆ ವಹಿವಾಟು ಆರಂಭದಲ್ಲೇ 1,800 ಅಂಶ ಕುಸಿದ ಸೆನ್ಸೆಕ್ಸ್‌ ನಂತರದ ವಹಿವಾಟಿನಲ್ಲಿ 2,359.07 ಅಂಶಗಳ ಇಳಿಕೆ ಕಂಡಿತು. 

ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌–19 ಸಾಂಕ್ರಾಮಿಕ ರೋಗ ಎಂದು ಘೋಷಿಸಿದ್ದರ ಪರಿಣಾಮ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಸೆನ್ಸೆಕ್ಸ್‌ 2,359.07 ಅಂಶ (ಶೇ 6.61) ಕುಸಿಯುವ ಮೂಲಕ 33,338.33 ಅಂಶಗಳಿಗೆ ಇಳಿದಿದೆ. ಒಂದೇ ದಿನದಲ್ಲಿ ಅತಿ ದೊಡ್ಡ ಇಳಿಕೆ ಗುರುವಾರ ದಾಖಲಾಯಿತು. 2018ರ ಮಾರ್ಚ್‌ 26ರ ನಂತರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 10,000 ಅಂಶಕ್ಕಿಂತ ಕಡಿಮೆಯಾಗಿದೆ.  

ನಿಫ್ಟಿ 729.90 ಅಂಶ (ಶೇ 6.98) ಇಳಿಕೆಯಾಗಿ 9,728.50 ಅಂಶ ತಲುಪಿದೆ. ಲೋಹ, ಮಾಧ್ಯಮ, ಐಟಿ ಹಾಗೂ ಬ್ಯಾಂಕ್‌ ಸೇರಿದಂತೆ ಬಹುತೇಕ ಎಲ್ಲ ವಲಯಗಳ ಕಂಪನಿಗಳ ಷೇರು ಬೆಲೆ ತೀವ್ರ ಇಳಿಕೆಯಾಗಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದ್ದರಿಂದ ಬುಧವಾರ ಷೇರುಪೇಟೆಗಳಲ್ಲಿ ಅಲ್ಪ ಮಟ್ಟಿನ ಚೇತರಿಕೆ ಕಂಡು ಮತ್ತೆ ಇಳಿಕೆಯೊಂದಿಗೆ ವಹಿವಾಟು ಪೂರ್ಣಗೊಂಡಿತ್ತು.

ಇದನ್ನೂ ಓದಿ:  ಕೋವಿಡ್ ಜಾಗತಿಕ ಮಹಾಮಾರಿ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

ಡಾಲರ್‌ ಎದುರು ರೂಪಾಯಿ ಮೌಲ್ಯ 82 ಪೈಸೆ ಹೆಚ್ಚಳವಾಗಿದ್ದು, ₹74.50ರಲ್ಲಿ ವಹಿವಾಟು ನಡೆದಿದೆ. 

ಕೊರೊನಾ ವೈರಸ್‌ ಸೋಂಕು ಹರಡುವ ಭೀತಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 30 ದಿನಗಳ ವರೆಗೂ ಯುರೋಪ್‌ನಿಂದ ಅಮೆರಿಕಕ್ಕೆ ಭೇಟಿ ನೀಡುವುದಕ್ಕೆ ನಿರ್ಬಂಧ ಘೋಷಿಸಿದ್ದಾರೆ. ಈ ಕಾರಣದಿಂದಲೂ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಒತ್ತಡ ಸೃಷ್ಟಿಯಾಗಿದೆ. 

ಷೇರುಪೇಟೆ ಮಾಹಿತಿ ಪ್ರಕಾರ, ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,515.38 ಕೋಟಿ ಮೌಲ್ಯದ ಷೇರುಗಳ ಮಾರಾಟ ಮಾಡಿದ್ದಾರೆ. ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ₹2,835.46 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. 

ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೊಸಿಸ್, ಎಸ್‌ಬಿಐ, ಟೈಟಾನ್‌, ಆ್ಯಕ್ಸಿಸ್ ಬ್ಯಾಂಕ್‌ , ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಎಲ್‌ಆ್ಯಂಡ್‌ಟಿ, ಐಟಿಸಿ, ಒಎನ್‌ಜಿಸಿ ಸೇರಿದಂತೆ ಬಹುತೇಕ ಕಂಪನಿಗಳ ಷೇರುಗಳು ಶೇ 4ರಿಂದ ಶೇ 11ರಷ್ಟು ಇಳಿಕೆಯಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು