ಷೇರುಪೇಟೆಯಲ್ಲಿ ಗೂಳಿ ಓಟ

7
ಜಿಎಸ್‌ಟಿ ಮಂಡಳಿಯ ನಿರ್ಧಾರದ ಪ್ರಭಾವ; ಹೊಸ ಎತ್ತರಕ್ಕೆ ಸೂಚ್ಯಂಕಗಳು

ಷೇರುಪೇಟೆಯಲ್ಲಿ ಗೂಳಿ ಓಟ

Published:
Updated:

ಮುಂಬೈ: ಜಿಎಸ್‌ಟಿ ಮಂಡಳಿಯು 88 ಸರಕುಗಳ ತೆರಿಗೆ ದರ ತಗ್ಗಿಸಿರುವ ನಿರ್ಧಾರವು ಸೋಮವಾರ ದೇಶದ ಷೇರುಪೇಟೆಗಳನ್ನು ಹೊಸ ಎತ್ತರಕ್ಕೆ ತಲುಪುವಂತೆ ಮಾಡಿತು.

ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಇಳಿಕೆ ಕಂಡಿದ್ದರೂ, ದೇಶದಲ್ಲಿನ ಸಕಾರಾತ್ಮಕ ವಿದ್ಯಮಾನಗಳೇ ಸೂಚ್ಯಂಕದ ಏರಿಕೆಗೆ ನೆರವಾಗಿವೆ ಎಂದು ತಜ್ಞರು ಹೇಳಿದ್ದಾರೆ.

36,501 ಅಂಶಗಳ ಸಕಾರಾತ್ಮಕ ಮಟ್ಟದಲ್ಲಿಯೇ ವಹಿವಾಟು ಆರಂಭವಾಯಿತು. ಮಧ್ಯಾಹ್ನದ ಹೊತ್ತಿಗೆ ಸೂಚ್ಯಂಕ ಇಳಿಮುಖ ಹಾದಿಗೆ ಮರಳಿತ್ತಾದರೂ ನಂತರ ಖರೀದಿ ಚಟುವಟಿಕೆ ಹೆಚ್ಚಾಗಿದ್ದರಿಂದ ಚೇತರಿಸಿಕೊಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 36,750ಕ್ಕೆ ತಲುಪಿತ್ತು. ಒಟ್ಟಾರೆ 222 ಅಂಶ ಜಿಗಿತ ಕಾಣುವ ಮೂಲಕ ದಾಖಲೆ ಮಟ್ಟವಾದ 36,718 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಈ ಹಿಂದೆ ಜುಲೈ 12 ರಂದು ಸೂಚ್ಯಂಕವು 36,548ಕ್ಕೆ ತಲುಪಿತ್ತು. 

ಎಫ್‌ಎಂಸಿಜಿ ವಲಯದ ಐಟಿಸಿ, ಹಿಂದೂಸ್ತಾನ್‌ ಯೂನಿಲಿವರ್‌ ಮತ್ತು ಏಷ್ಯನ್‌ ಪೇಂಟ್ಸ್‌ ಕಂಪನಿಗಳು ಉತ್ತಮ ಖರೀದಿ ಚಟುವಟಿಕೆಗೆ ಒಳಗಾದವು. ವೇದಾಂತ ಲಿಮಿಟೆಡ್‌, ಅದಾನಿ ಪೋರ್ಟ್ಸ್‌, ಭಾರ್ತಿ ಏರ್‌ಟೆಲ್‌ ಮತ್ತು ಮಾರುತಿ ಸುಜುಕಿ ಸೂಚ್ಯಂಕಗಳು ದಾಖಲೆ ಮಟ್ಟವನ್ನು ತಲುಪಿದವು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 75 ಅಂಶ ಏರಿಕೆಯಾಗಿ 11,084 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ. ಜನವರಿ 29ರ ನಂತರ ಸೂಚ್ಯಂಕದ ಗರಿಷ್ಠ ಮಟ್ಟ ಇದಾಗಿದೆ.

ಬ್ಯಾಂಕ್‌ಗಳು ವಸೂಲಾಗದ ಸಾಲದ ಸಮಸ್ಯೆಗೆ (ಎನ್‌ಪಿಎ) ತ್ವರಿತ ಪರಿಹಾರ ಕಂಡುಕೊಳ್ಳಲು ಮುಂದಾಗಿವೆ. ಇದರಿಂದಾಗಿ ಬ್ಯಾಂಕಿಂಗ್‌ ವಲಯದಲ್ಲಿ ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಷೇರುಗಳು ಉತ್ತಮ ಏರಿಕೆ ಕಂಡುಕೊಂಡವು.

ಕೇಂದ್ರ ಸರ್ಕಾರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲವಾದ ಬಳಿಕ ಷೇರುಪೇಟೆಯಲ್ಲಿ ಹೊಸ ಉತ್ಸಾಹ ಕಂಡುಬಂದಿದೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

ಸಂಪತ್ತು ₹ 1.29 ಲಕ್ಷ ಕೋಟಿ ಹೆಚ್ಚಳ
ಸೂಚ್ಯಂಕವು ಹೊಸ ಎತ್ತರಕ್ಕೆ ತಲುಪಿರುವುದರಿಂದ ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯ ಲೆಕ್ಕದಲ್ಲಿ ₹ 1.29 ಲಕ್ಷ ಕೋಟಿ ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 148 ಲಕ್ಷ ಕೋಟಿಗೆ ತಲುಪಿದೆ.

ಷೇರು ಗಳಿಕೆ
ಜಿಎಸ್‌ಟಿ ಮಂಡಳಿಯ ನಿರ್ಧಾರದ ಫಲವಾಗಿ ಪಾದರಕ್ಷೆ, ಪೇಂಟ್‌ ತಯಾರಿಕಾ ಸಂಸ್ಥೆಗಳಯ, ಗೃಹೋಪಯೋಗಿ ಸಲಕರಣೆ ಮತ್ತು ಎಫ್‌ಎಂಸಿಜಿ ಕಂಪನಿಗಳ ಷೇರುಗಳು ಶೇ 10ರವರೆಗೆ ಲಾಭ ಬಾಚಿಕೊಂಡವು.

*
ಸರಕುಗಳ ಮೇಲಿನ ಜಿಎಸ್‌ಟಿ ಇಳಿಕೆ ಮತ್ತು ಕಂಪನಿಗಳ ಉತ್ತಮ ತ್ರೈಮಾಸಿಕ ಸಾಧನೆ ಷೇರುಪೇಟೆಗೆ ಬೆಂಬಲ ನೀಡಿವೆ.
-ವಿನೋದ್‌ ನಾಯರ್‌, ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !