ಮಂಗಳವಾರ, ಅಕ್ಟೋಬರ್ 22, 2019
21 °C
ಕೇಂದ್ರದ ಆರ್ಥಿಕ ಉತ್ತೇಜನಾ ಕ್ರಮಕ್ಕೆ ಸ್ಪಂದಿಸಿದ ಹೂಡಿಕೆದಾರರು

ಷೇರುಪೇಟೆಯಲ್ಲಿ ಓಟ ಆರಂಭಿಸಿದ ಗೂಳಿ: ಬಿಎಸ್‌ಇ, ಎನ್‌ಎಸ್‌ಇ ಏರಿಕೆ

Published:
Updated:

ಮುಂಬೈ: ಕೇಂದ್ರ ಸರ್ಕಾರ ಪ್ರಕಟಿಸಿರುವ ಉತ್ತೇಜನಾ ಕೊಡುಗೆಗಳಿಗೆ ಸೋಮವಾರ ಷೇರುಪೇಟೆಯಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಮುಖ್ಯವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಪಿಐ) ಮೇಲಿನ ಹೆಚ್ಚುವರಿ ಸರ್ಚಾರ್ಜ್‌ ಕೈಬಿಟ್ಟಿರುವುದರಿಂದ ಷೇರುಪೇಟೆಯಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ದಿನದ ವಹಿವಾಟಿನಲ್ಲಿ 1,052 ಅಂಶಗಳವರೆಗೂ ಏರಿಳಿತ ಕಂಡಿತು. ಅಂತಿಮವಾಗಿ 792 ಅಂಶಗಳ ಜಿಗಿತದೊಂದಿಗೆ 37,544 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಮತ್ತೆ 11 ಸಾವಿರದ ಗಡಿ ತಲುಪಿತು. 228 ಅಂಶ ಹೆಚ್ಚಾಗಿ 11,057 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಇದನ್ನೂ ಓದಿ: ಷೇರುಪೇಟೆ ಸೂಚ್ಯಂಕ ಏರಿಕೆ; ಮುಂದುವರಿಯುವುದೇ ಗೂಳಿ ಓಟ?​

ಎರಡೂ ಸೂಚ್ಯಂಕಗಳು ಮೇ 20ರ ನಂತರ ದಿನದ ವಹಿವಾಟಿನಲ್ಲಿ ದಾಖಲಿಸಿರುವ ಅತಿ ಹೆಚ್ಚಿನ ಏರಿಕೆ ಇದಾಗಿದೆ.

ಅಮೆರಿಕ–ಚೀನಾದ ವಾಣಿಜ್ಯ ಬಿಕ್ಕಟ್ಟಿನಂತಹ ಜಾಗತಿಕ ಬೆಳವಣಿಗೆಗಳನ್ನೂ ಮೀರಿ ಏರಿಕೆ ಓಟು ಮೂಂದುವರಿಸಿದ್ದು ಗಮನಾರ್ಹವಾಗಿದೆ.

ಗರಿಷ್ಠ ಗಳಿಕೆ: ಯೆಸ್‌ ಬ್ಯಾಂಕ್‌ ಅತಿ ಹೆಚ್ಚಿನ ಗಳಿಕೆ ಕಂಡುಕೊಂಡಿತು. ಎಚ್‌ಡಿಎಫ್‌ಸಿ, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಲ್‌ಆ್ಯಂಡ್‌ಟಿ, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಕ್‌ ಬ್ಯಾಂಕ್‌ ಷೇರುಗಳು ಶೇ 5.24ರವರೆಗೂ ಏರಿಕೆ ಕಂಡಿವೆ.

ನಷ್ಟ: ಟಾಟಾ ಸ್ಟೀಲ್, ಸನ್‌ ಫಾರ್ಮಾ, ಹೀರೊ ಮೋಟೊಕಾರ್ಪ್‌, ವೇದಾಂತ, ರಿಲಯನ್ಸ್‌ ಇಂಡಸ್ಟ್ರೀಸ್‌, ಟಾಟಾ ಮೊಟರ್ಸ್‌, ಮಾರುತಿ ಸುಜುಕಿ ಮತ್ತು ಬಜಾಜ್‌ ಆಟೊ ಕಂಪನಿ ಷೇರುಗಳು ಶೇ 2.01ರವರೆಗೆ ಇಳಿಕೆ ಕಂಡಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಪ್ರಕಟಿಸಿದ ಆರ್ಥಿಕ ಉತ್ತೇಜನಾ ಕೊಡುಗೆಗಳಿಂದಾಗಿ ಸೋಮವಾರ ಷೇರುಪೇಟೆಗಳು ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿದವು.

’ವಾಣಿಜ್ಯ ಸಮರಕ್ಕೆ ಸಂಬಂಧಿಸಿದಂತೆ ಚೀನಾ ಸಂಧಾನಕ್ಕೆ ಸಿದ್ಧವಿದೆ ಎನ್ನುವ ಸುದ್ದಿಯಿಂದಾಗಿ ದೇಶಿ ಷೇರುಪೇಟೆಗಳಲ್ಲಿ ವಹಿವಾಟು ಚೇತರಿಕೆ ಕಂಡಿದೆ‘ ಎಂದು ಆನಂದ ರತಿ ಷೇರ್ಸ್‌ ಆ್ಯಂಡ್‌ ಸ್ಟಾಕ್‌ ಬ್ರೋಕರ್ಸ್‌ನ ಸಂಶೋಧನಾ ಮುಖ್ಯಸ್ಥ ನರೇಂದ್ರ ಸೋಲಂಕಿ ಹೇಳಿದ್ದಾರೆ.

₹ 2.42 ಲಕ್ಷ ಕೋಟಿ ಸಂಪತ್ತು ವೃದ್ಧಿ
ಹೆಚ್ಚುವರಿ ಸರ್ಚಾರ್ಜ್‌ ಕೈಬಿಟ್ಟಿರುವುದು ಹೂಡಿಕೆ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡಿದೆ. ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 2.42 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 137.92 ಲಕ್ಷ ಕೋಟಿಯಿಂದ ₹ 140.34 ಲಕ್ಷ ಕೋಟಿಗೆ ಏರಿಕೆಯಾಗಿದೆ.

ರೂಪಾಯಿ 72.02ಕ್ಕೆ ಕುಸಿತ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ದರವು 36 ಪೈಸೆಗಳಷ್ಟು ಕುಸಿತ ಕಂಡು ₹ 72.02ಕ್ಕೆ ಇಳಿದಿದೆ. ಆಮದುದಾರರು ಮತ್ತು ಬ್ಯಾಂಕ್‌ಗಳಿಂದ ಡಾಲರ್‌ ಬೇಡಿಕೆ ಹೆಚ್ಚಿದ್ದರಿಂದ ರೂಪಾಯಿ ವಿನಿಮಯ ದರದ ಮೇಲೆ ಹೆಚ್ಚಿನ ಒತ್ತಡ ಕಂಡುಬಂದಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)