ಶುಕ್ರವಾರ, ಫೆಬ್ರವರಿ 28, 2020
19 °C

800 ಅಂಶ ಜಿಗಿದ ಸೆನ್ಸೆಕ್ಸ್‌, 11,900 ಅಂಶ ದಾಟಿದ ನಿಫ್ಟಿ: ಚೀನಾದಲ್ಲೂ ಚೇತರಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಷೇರುಪೇಟೆಗಳಲ್ಲಿ ಗೂಳಿ ಓಟ

ಬೆಂಗಳೂರು: ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದ್ದಂತೆ ತೀವ್ರ ಕುಸಿತ ಕಂಡ ಭಾರತದ ಷೇರುಪೇಟೆ ಮಂಗಳವಾರ ಚೇತರಿಸಿಕೊಂಡಿದೆ. ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಹಾಗೂ ಏಷ್ಯಾ ವಲಯದಲ್ಲಿ ವಹಿವಾಟು ಸ್ಥಿರತೆ ಕಾಯ್ದುಕೊಂಡಿರುವ ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 804 ಅಂಶ ಏರಿಕೆ ದಾಖಲಿಸಿತು. 

ಬೆಳಿಗ್ಗೆ 11:40ಕ್ಕೆ ಸೆನ್ಸೆಕ್ಸ್‌ 40,675 ಅಂಶ ಮುಟ್ಟಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 237 ಅಂಶ ಹೆಚ್ಚಳದೊಂದಿಗೆ 11,944 ಅಂಶ ತಲುಪಿತು. ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.35 ಹಾಗೂ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 1.32ರಷ್ಟು ಏರಿಕೆ ಕಂಡಿದೆ. 

ದೂರಸಂಪರ್ಕ ವಲಯದ ಷೇರುಗಳು ಹೊರತುಪಡಿಸಿ, ಬ್ಯಾಂಕ್‌, ತ್ವರಿತ ಬಿಕರಿಯಾಗುವ ಗ್ರಾಹಕ ಉತ್ಪನ್ನ ಕಂಪನಿಗಳು, ತೈಲ ಹಾಗೂ ಲೋಹದ ಷೇರುಗಳು ಶೇ 1–2ರಷ್ಟು ಜಿಗಿದಿವೆ. 

ಬಜೆಟ್‌ ದಿನದಂದು ಸೆನ್ಸೆಕ್ಸ್‌ 988 ಅಂಶ ಕುಸಿದಿತ್ತು. ಸೋಮವಾರ ಸೆನ್ಸೆಕ್ಸ್‌ 39,872 ಮತ್ತು ನಿಫ್ಟಿ 11,707 ಅಂಶಗಳಲ್ಲಿ ವಹಿವಾಟು ಕೊನೆಯಾಗಿತ್ತು. 

ಕೊರೊನಾ ವೈರಸ್‌ ಪರಿಣಾಮದಿಂದ ಶೇ 8ಕ್ಕೂ ಹೆಚ್ಚು ಕುಸಿತ ದಾಖಲಸಿದ್ದ ಚೀನಾದ ಶಾಂಘೈ ಸ್ಟಾಕ್‌ ಎಕ್ಸ್‌ಚೇಂಜ್‌ ಸಹ ಮಂಗಳವಾರ ಶೇ 1ರಷ್ಟು ಚೇತರಿಕೆ ಕಂಡಿದೆ. ಹಾಂಕಾಂಗ್‌ ಷೇರುಪೇಟೆ ಹಾಂಗ್‌ ಸೆಂಗ್‌, ಟೋಕಿಯೊದ ನಿಕ್ಕಿ, ಸಿಂಗಾಪುರ್ ಮತ್ತು ತೈವಾಲ್‌ ಷೇರುಪೇಟೆ ಸೂಚ್ಯಂಕಗಳು ಸಹ ಏರಿಕೆ ದಾಖಲಿಸಿವೆ. 

ರಿಲಯನ್ಸ್‌ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌ ಹಾಗೂ ಐಟಿಸಿ ಷೇರುಗಳು ಶೇ 1–2ರಷ್ಟು ಹೆಚ್ಚಳ ಕಂಡಿವೆ. ಬಜಾಜ್‌ ಆಟೊ, ಭಾರ್ತಿ ಏರ್‌ಟೆಲ್‌ ಷೇರುಗಳು ಕುಸಿದಿವೆ.

ಟೈಟಾನ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್, ಟಾಟಾ ಗ್ಲೋಬಲ್‌ ಬೆವರೇಜಸ್‌ಮ ಥರ್ಮ್ಯಾಕ್ಸ್‌, ಭಾರ್ತಿ ಏರ್‌ಟೆಲ್‌ ಹಾಗೂ ಜೆಎಸ್‌ಡಬ್ಲ್ಯು ಎನರ್ಜಿ ತ್ರೈಮಾಸಿಕ ಲಾಭಾಂಶ ಘೋಷಣೆ ಮಾಡಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು