ಸೋಮವಾರ, ಅಕ್ಟೋಬರ್ 21, 2019
21 °C
ಬ್ಯಾಂಕಿಂಗ್‌, ಹಣಕಾಸು ವಲಯದ ಷೇರುಗಳ ಗಳಿಕೆ

ಷೇರುಪೇಟೆ ವಹಿವಾಟು ಚೇತರಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳು ಆರು ದಿನಗಳ ಬಳಿಕ ಚೇತರಿಕೆ ಹಾದಿಗೆ ಮರಳಿವೆ. ಬುಧವಾರದ ವಹಿವಾಟಿನಲ್ಲಿ ಕರಡಿ ಹಿಡಿತದಿಂದ ಹೊರಬಂದು ಗೂಳಿ ಉತ್ಸಾಹದಿಂದ ಓಡಿತು. ಇದರಿಂದ ಸಕಾರಾತ್ಮಕ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.

ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಉತ್ತಮ ಗಳಿಕೆ ಕಂಡಿದ್ದರಿಂದ ಸೂಚ್ಯಂಕಗಳು ಏರಿಕೆ ದಾಖಲಿಸಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 646 ಅಂಶಗಳಷ್ಟು ಜಿಗಿತ ಕಂಡು 38,178 ಅಂಶಗಳಿಗೆ ತಲುಪಿತು.

ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 1.66 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 142.26 ಲಕ್ಷ ಕೋಟಿಗಳಿಂದ ₹ 143.92 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 187 ಅಂಶ ಹೆಚ್ಚಾಗಿ 11,313 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಗರಿಷ್ಠ ಗಳಿಕೆ: ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ಶೇ 5.45ರಷ್ಟು ಗರಿಷ್ಠ ಗಳಿಕೆ ಕಂಡಿವೆ. ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಮಹೀಂದ್ರಾ, ಕೋಟಕ್‌ ಬ್ಯಾಂಕ್‌, ಟಾಟಾ ಸ್ಟೀಲ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳೂ ಉತ್ತಮ ಗಳಿಕೆ ಕಂಡಿವೆ.

ನಷ್ಟ: ಯೆಸ್‌ ಬ್ಯಾಂಕ್ ಷೇರುಗಳು ಶೇ 5.26ರಷ್ಟು ಗರಿಷ್ಠ ನಷ್ಟ ಕಂಡಿವೆ. ಹೀರೊ ಮೋಟೊಕಾರ್ಪ್‌, ಎಚ್‌ಸಿಎಲ್‌ ಟೆಕ್‌, ಐಟಿಸಿ, ಟಿಸಿಎಸ್‌, ಇನ್ಫೊಸಿಸ್‌, ಒಎನ್‌ಜಿಸಿ ಮತ್ತು ಬಜಾಜ್‌ ಆಟೊ ಷೇರುಗಳು ಶೇ 2.65ರವರೆಗೂ ಇಳಿಕೆಯಾಗಿವೆ.

ಸಕಾರಾತ್ಮಕ ಅಂಶ: ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಿಸಿದೆ. ಇದರಿಂದ ಹಬ್ಬದ ಸಂದರ್ಭದಲ್ಲಿ ಖರೀದಿ ವಹಿವಾಟು ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ.

Post Comments (+)