ಕಂಪನಿ ಸಾಧನೆಗಿಂತ ಸಾಮರ್ಥ್ಯಕ್ಕೆ ಮಣೆ

7

ಕಂಪನಿ ಸಾಧನೆಗಿಂತ ಸಾಮರ್ಥ್ಯಕ್ಕೆ ಮಣೆ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯ ಸಂವೇದಿ ಸೂಚ್ಯಂಕವು ಗುರುವಾರ ಮೊದಲ ಬಾರಿಗೆ  38 ಸಾವಿರದ ಗಡಿ ದಾಟಿ 38,076 ರಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. 2018ರ ಜನವರಿಯಿಂದ ಸುಮಾರು ಎರಡು ಸಾವಿರ ಅಂಶಗಳ ಏರಿಕೆ ಕಂಡರೂ ಆಗಿನ ದಾಖಲೆಯ  ₹156.56 ಲಕ್ಷ ಕೋಟಿಯ ಬಂಡವಾಳ ಮೌಲ್ಯವನ್ನು ಮಾತ್ರ ತಲುಪಲಾಗಿಲ್ಲ.  ಇದು ವಿಸ್ಮಯಕಾರಿ ಸಂಗತಿಯಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಪೇಟೆಯು ಕಂಪನಿಯ ಸಾಧನೆಗಿಂತ ಸಾಮರ್ಥ್ಯ ಮತ್ತು ಘನತೆಗೆ ಹೆಚ್ಚು ಮಣೆಹಾಕುತ್ತಿದೆ. ಬಾಂಬೆ ಡೈಯಿಂಗ್ ಕಂಪನಿ ಫಲಿತಾಂಶ ಉತ್ತಮವಾಗಿಲ್ಲವೆಂಬ ಕಾರಣಕ್ಕಾಗಿ ಶುಕ್ರವಾರ ಷೇರಿನ ಬೆಲೆ ₹242 ರ ಸಮೀಪಕ್ಕೆ ಕುಸಿಯಿತಾದರೂ ನಂತರದಲ್ಲಿ ಜಿಗಿತ ಕಂಡು ₹267 ರ ದಿನದ ಗರಿಷ್ಠ  ಮಿತಿ ತಲುಪಿತು. ಈ ಷೇರು ‘ಟಿ’ ವಿಭಾಗದಲ್ಲಿದ್ದು ದೈನಂದಿನ ವಹಿವಾಟಿಗೆ ಅವಕಾಶವಿಲ್ಲದಿದ್ದರೂ ಈ ರೀತಿಯ ಚೇತರಿಕೆ ಪ್ರದರ್ಶಿಸುವುದು ಪೇಟೆಯ ಗುಣ.

ಕಂಪನಿಗಳು ತಮ್ಮ ಫಲಿತಾಂಶ ಪ್ರಕಟಿಸಿದ ಮೇಲೆ ಫಲಿತಾಂಶವು ಏನೇ ಇರಲಿ ಷೇರಿನ ಬೆಲೆ ಕುಸಿತ ಕಂಡು ನಂತರ ಪುಟಿದೇಳುವ ಸಂಪ್ರದಾಯ ಹೊಸದಾಗಿ ಸ್ಥಾಪಿತವಾದಂತಿದೆ.

ಈ ವಾರ ತಮ್ಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದ ಮದರ್ ಸನ್ ಸುಮಿ,  ಟಿವಿಎಸ್ ಮೋಟರ್ಸ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ,  ಸ್ಟ್ರೈಡ್ಸ್ ಶಾಸೂನ್ ಕಂಪನಿಗಳ ಷೇರಿನ ರಭಸದ ಏರಿಳಿತಗಳು ಇದಕ್ಕೆ ಉತ್ತಮ ಉದಾಹರಣೆಯಾಗಿವೆ.

ಮ್ಯೂಚುವಲ್ ಫಂಡ್ ಮೌಲ್ಯವರ್ಧನೆ: ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್‌ನ ಷೇರುಗಳು ಸೋಮವಾರ ವಹಿವಾಟಿಗೆ ಬಿಡುಗಡೆಯಾಗಿದ್ದು ಅಂದು ಷೇರಿನ ಬೆಲೆ ₹1,842 ರ ಗರಿಷ್ಠದ ದಾಖಲೆ ಮಾಡಿದ ಕಾರಣ ಅನೇಕ ಮ್ಯೂಚುವಲ್ ಫಂಡ್‌ಗಳ ಎನ್‌ಎವಿ ಏರಿಕೆ ಕಂಡಿದೆ.  ಕಾರಣ ಈ ಕಂಪನಿ ವಿತರಿಸಿದ ಬೆಲೆ ₹1,100 ರ ವಿರುದ್ಧ ಪೇಟೆ ಅಗಾಧ ಪ್ರಮಾಣದ ಲಾಭವನ್ನು ಗಳಿಸಿಕೊಟ್ಟು ಆ್ಯಂಕರ್‌ ಇನ್ವೆಸ್ಟರ್ ಕೋಟಾದಲ್ಲಿ ಷೇರುಗಳನ್ನು ಪಡೆದುಕೊಂಡ ಯೋಜನೆಗಳಿಗೆ ವರದಾನವಾದಂತಾಗಿದೆ.

ಈ ಆ್ಯಂಕರ್‌ ಇನ್ವೆಸ್ಟರ್ ಕೋಟಾದಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್‌ನ  ಹದಿನೈದು ವಿವಿಧ ಯೋಜನೆಗಳು ಭಾಗವಹಿಸಿ ಲಾಭ ಪಡೆದುಕೊಂಡಿವೆ. ರಿಲಯನ್ಸ್ ಬ್ಯಾಂಕಿಂಗ್ ಫಂಡ್, ಬಿರ್ಲಾ ಸನ್ ಲೈಫ್‌ನ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಶಿಯಲ್‌ ಸರ್ವಿಸಸ್ ಫಂಡ್ ಮುಂತಾದವುಗಳು ಆ್ಯಂಕರ್‌ ಇನ್ವೆಸ್ಟರ್ ಕೋಟಾದಲ್ಲಿ ಈ ಕಂಪನಿ ಷೇರುಗಳನ್ನು ಪಡೆದುಕೊಂಡಿವೆ.

ಬೋನಸ್‌ ಷೇರು: ಇಗರ್ಷಿ ಮೋಟರ್ಸ್ ಇಂಡಿಯಾ ಲಿಮಿಟೆಡ್ ಪ್ರತಿ 202 ಷೇರುಗಳಿಗೆ 25 ಷೇರುಗಳಂತೆ ಬೋನಸ್ ಷೇರು ಪ್ರಕಟಿಸಿದೆ.

ಮುಖಬೆಲೆ ಸೀಳಿಕೆ:  ಬ್ರಿಟಾನಿಯಾ ಇಂಡಸ್ಟ್ರೀಸ್ ಕಂಪನಿ 23 ರಂದು ಷೇರಿನ ಮುಖಬೆಲೆ  ಸೀಳಿಕೆ ಪರಿಶೀಲಿಸಲಿದೆ. ಝೆನ್ಸಾರ್ ಟೆಕ್ನಾಲಜಿಸ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಸೆಪ್ಟೆಂಬರ್ 10 ನಿಗದಿತ ದಿನ.
ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲಿದೆ.

ಡಿಎಂಎಫ್ ಫುಡ್ಸ್ ಲಿಮಿಟೆಡ್ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಜೆಎಂಸಿ ಪ್ರಾಜೆಕ್ಟ್ಸ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ.

ಟಿಸಿಎಸ್ ಷೇರು ಮರುಖರೀದಿ ಮಾಡಲು ಈ ತಿಂಗಳ 18 ನಿಗದಿತ ದಿನವಾಗಿದೆ.  14 ರಿಂದಲೇ ಎಕ್ಸ್ ಆಧಾರದ ವಹಿವಾಟು ಆರಂಭವಾಗಲಿದೆ.

ವಾರದ ಮುನ್ನೋಟ
ಹಣದುಬ್ಬರದ ಅಂಕಿ–ಅಂಶ, ತ್ರೈಮಾಸಿಕ ಫಲಿತಾಂಶ ಮತ್ತು ಜಾಗತಿಕ ವಿದ್ಯಮಾನಗಳು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ. ಕಚ್ಚಾ ತೈಲ ದರ, ರೂಪಾಯಿ ಮೌಲ್ಯದಲ್ಲಿನ ವ್ಯತ್ಯಯ ಮತ್ತು ಮುಂಗಾರು ಸಹ ಸೂಚ್ಯಂಕದ ಏರಿಳಿತವನ್ನು ನಿರ್ಧರಿಸಲಿವೆ. ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತ ಬುಧವಾರ ವಹಿವಾಟಿಗೆ ರಜೆ. ಹೀಗಾಗಿ ಕೇವಲ ನಾಲ್ಕು ದಿನಗಳ ವಹಿವಾಟು ನಡೆಯಲಿವೆ.

(ಮೊ: 9886313380, ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !