ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಷೇರುಪೇಟೆ ಸೂಚ್ಯಂಕ?

Last Updated 22 ಫೆಬ್ರುವರಿ 2021, 17:00 IST
ಅಕ್ಷರ ಗಾತ್ರ

ತರಕಾರಿ, ದಿನಸಿ ಮತ್ತಿತರ ವಸ್ತುಗಳನ್ನು ತರಲು, ಮಾರಾಟ ಮಾಡಲು ನಾವು ಹೇಗೆ ಮಾರುಕಟ್ಟೆಯನ್ನು ಅವಲಂಬಿಸಿದ್ದೇವೆಯೋ, ಅದೇ ರೀತಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಷೇರುಪೇಟೆ ಅನುವು ಮಾಡಿಕೊಡುತ್ತದೆ. ರಿಲಯನ್ಸ್, ಇನ್ಫೊಸಿಸ್, ಟಾಟಾ ಮೋಟರ್ಸ್ ಅಥವಾ ಇನ್ಯಾವುದೇ ಕಂಪನಿಯ ಷೇರು ಕೊಂಡು ವ್ಯವಹರಿಸಬೇಕಾದರೆ ಷೇರು ಮಾರುಕಟ್ಟೆ ಅದಕ್ಕೆ ಸಹಾಯ ಮಾಡುತ್ತದೆ. ಸರಳವಾಗಿ ಹೇಳುವುದಾದರೆ ಷೇರುಗಳನ್ನು ಕೊಳ್ಳುವವರು ಮತ್ತು ಮಾರಾಟ ಮಾಡುವವರನ್ನು ಒಂದೇ ವೇದಿಕೆಗೆ ತರುವ ವ್ಯವಸ್ಥೆಯೇ ಷೇರುಪೇಟೆ.

ಭಾರತದಲ್ಲಿ ಪ್ರಮುಖವಾಗಿ ಎರಡು ಷೇರುಪೇಟೆಗಳಿವೆ. ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ).

ಏನಿದು ಷೇರುಪೇಟೆ ಸೂಚ್ಯಂಕ?: ‘ಬೆಂಗಳೂರಿನಲ್ಲಿ ಸದ್ಯದ ಸಂಚಾರ ದಟ್ಟಣೆ ಹೇಗಿದೆ’ ಎಂದು ನಾನು ನಿಮ್ಮನ್ನು ಕೇಳಿದರೆ ಅದಕ್ಕೆ ನೀವು ಹೇಗೆ ಉತ್ತರಿಸುವಿರಿ? ನಗರದಲ್ಲಿ ಸಾವಿರಾರು ರಸ್ತೆಗಳಿವೆ. ಎಲ್ಲಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೇಗಿದೆ ಎನ್ನುವುದನ್ನು ಪರಿಶೀಲಿಸಿ ಉತ್ತರ ಕಂಡುಕೊಳ್ಳುವುದು ಕಷ್ಟ. ಹೀಗಿರುವಾಗ ನಗರದ ಪ್ರಮುಖ ದಿಕ್ಕುಗಳ ಮುಖ್ಯ ರಸ್ತೆಗಳನ್ನು ಗಮನಿಸಿ ಸಂಚಾರ ದಟ್ಟಣೆ ಹೆಚ್ಚಿದೆಯೋ, ಕಡಿಮೆ ಇದೆಯೋ ಎನ್ನುವ ನಿರ್ಣಯಕ್ಕೆ ಬರುತ್ತೀರಿ.

ಇಲ್ಲಿ ಪ್ರಮುಖ ದಿಕ್ಕುಗಳ ಮುಖ್ಯ ರಸ್ತೆಗಳನ್ನು ನೀವು ಮಾನದಂಡವನ್ನಾಗಿ ಪರಿಗಣಿಸುತ್ತೀರಿ. ಇದನ್ನೇ ಆಧಾರವಾಗಿ ಇಟ್ಟುಕೊಂಡು, ‘ಷೇರು ಮಾರುಕಟ್ಟೆ ಇಂದು ಹೇಗೆ ವರ್ತಿಸುತ್ತಿದೆ’ ಎಂದು ನಾನು ನಿಮ್ಮನ್ನು ಪ್ರಶ್ನಿಸಿದರೆ ನೀವು ಹೇಗೆ ಉತ್ತರಿಸಬಹುದು? ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ಸುಮಾರು ಐದು ಸಾವಿರ ನೋಂದಾಯಿತ ಕಂಪನಿಗಳಿದ್ದು, ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಸಿ) ಸುಮಾರು ಎರಡು ಸಾವಿರ ನೋಂದಾಯಿತ ಕಂಪನಿಗಳಿವೆ. ಪ್ರತಿ ಕಂಪನಿಯ ಏರಿಳಿತ ಪರಿಶೀಲಿಸಿ ಉತ್ತರ ದಾಖಲಿಸುವುದು ಸವಾಲಿನ ಕೆಲಸ. ಹಾಗಾಗಿ ನೀವು ಪ್ರಮುಖ ವಲಯಗಳ (key Industrial Sectors) ಆಯ್ದ ಕಂಪನಿಗಳ ಸ್ಥಿತಿಗತಿ ತಿಳಿದು ಮಾರುಕಟ್ಟೆಯ ಏರಿಳಿತವನ್ನು ಕಂಡುಕೊಳ್ಳುತ್ತೀರಿ.

ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ ಎಂದಾದಲ್ಲಿ ‘ಮಾರುಕಟ್ಟೆ ಯಥಾಸ್ಥಿತಿಯಲ್ಲಿದೆ’ ಎಂದು ಹೇಳುತ್ತೀರಿ. ಆಯ್ದ ಪ್ರಮುಖ ಕಂಪನಿಗಳ ಸ್ಥಿತಿಗತಿ ಆಧರಿಸಿ ಮಾರುಕಟ್ಟೆಯ ಏರಿಳಿತ ತಿಳಿಸುವ ವ್ಯವಸ್ಥೆಯನ್ನೇ ಷೇರುಪೇಟೆ ಸೂಚ್ಯಂಕ (ಮಾರ್ಕೆಟ್ ಇಂಡೆಕ್ಸ್) ಎಂದು ಕರೆಯುತ್ತಾರೆ.

ಪ್ರಮುಖ ಷೇರು ಮಾರುಕಟ್ಟೆ ಸೂಚ್ಯಂಕಗಳು‌

ಭಾರತದಲ್ಲಿ ಪ್ರಮುಖವಾಗಿ ಎರಡು ಸೂಚ್ಯಂಕಗಳಿವೆ. ಮುಂಬೈ ಷೇರುಪೇಟೆಯನ್ನು ಪ್ರತಿನಿಧಿಸುವ ಎಸ್ ಆ್ಯಂಡ್ ಪಿ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆಯನ್ನು ಪ್ರತಿನಿಧಿಸುವ ಸಿಎನ್ಎಕ್ಸ್ ನಿಫ್ಟಿ. ‘ಸ್ಟ್ಯಾಂಡರ್ಡ್ ಆ್ಯಂಡ್ ಪೂರ್’ ಎನ್ನುವುದು ‘ಎಸ್ ಆ್ಯಂಡ್ ಪಿ’ಯ ವಿಸ್ತೃತ ರೂಪ. ಸ್ಟ್ಯಾಂಡರ್ಡ್ ಆ್ಯಂಡ್ ಪೂರ್ ಜಾಗತಿಕ ಮಟ್ಟದ ಒಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ. ಈ ಕಂಪನಿಗೆ ಸೂಚ್ಯಂಕಗಳ ರಚನೆಯಲ್ಲಿ ತಾಂತ್ರಿಕ ಪ್ರಾವೀಣ್ಯ ಇದೆ. ಸೆನ್ಸೆಕ್ಸ್‌ನ ಸೂಚ್ಯಂಕ ತಯಾರಿಸಲು ಸ್ಟ್ಯಾಂಡರ್ಡ್ ಆ್ಯಂಡ್ ಪೂರ್ ನೆರವಾಗಿರುವ ಕಾರಣ ಸೆನ್ಸೆಕ್ಸ್ ಜತೆ ಎಸ್ ಆ್ಯಂಡ್ ಪಿ ಎನ್ನುವ ಹೆಸರು ಬೆಸೆದುಕೊಂಡಿದೆ.

ಸಿಎನ್ಎಕ್ಸ್ ನಿಫ್ಟಿಯಲ್ಲಿ ಮೇಲಿಂದ ಮೇಲೆ ಮಾರಾಟವಾಗುವ ದೊಡ್ಡ ಕಂಪನಿಗಳ ಷೇರುಗಳಿರುತ್ತವೆ. ಇಂಡಿಯಾ ಇಂಡೆಕ್ಸ್ ಸರ್ವೀಸಸ್ ಮತ್ತು ಪ್ರಾಡಕ್ಟ್ಸ್ ಲಿ. (ಐಐಎಸ್ಎಲ್) ನಿಫ್ಟಿಯ ನಿರ್ವಹಣೆಯ ಹೊಣೆ ಹೊತ್ತಿದೆ. ಇದು ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ಮತ್ತು ಕ್ರಿಸೆಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಸಿಎನ್ಎಕ್ಸ್ ಎನ್ನುವುದು ಕ್ರಿಸೆಲ್ ಮತ್ತು ಎನ್ಎಸ್‌ಸಿಯನ್ನು ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT