ಶನಿವಾರ, ಜನವರಿ 25, 2020
18 °C

ಷೇರುಪೇಟೆಯಲ್ಲಿ ದಿನವೂ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ಸತತ ಮೂರನೇ ದಿನವೂ ಷೇರುಪೇಟೆಗಳಲ್ಲಿ ದಾಖಲೆಯ ಓಟ ಮುಂದುವರಿದಿದೆ. ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಇಂಧನ, ಐ.ಟಿ ಮತ್ತು ವಾಹನ ವಲಯದ ಷೇರುಗಳು ಉತ್ತಮ ಗಳಿಕೆ ಕಂಡಿರುವುದು ಮತ್ತು ವಿದೇಶಿ ಬಂಡವಾಳ ಒಳಹರಿವು ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 116 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 41,674 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 38 ಅಂಶ ಹೆಚ್ಚಾಗಿ 12,259 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತು.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಯೆಸ್‌ ಬ್ಯಾಂಕ್‌ ಷೇರು ಶೇ 6.74ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿದೆ. ಟಿಸಿಎಸ್‌, ಟಾಟಾ ಮೋಟರ್ಸ್‌, ಭಾರ್ತಿ  ಏರ್‌ಟೆಲ್‌, ಮಹೀಂದ್ರಾ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹ 71.03ರಂತೆ ವಿನಿಮಯಗೊಂಡಿತು.

2020ರಲ್ಲಿ ಇನ್ನಷ್ಟು ಏರಿಕೆ: ಕೋಟಕ್‌

ನವದೆಹಲಿ (ಪಿಟಿಐ): 2020ರಲ್ಲಿ ಷೇರುಪೇಟೆಗಳು ಭಾರಿ ಪ್ರಮಾಣದಲ್ಲಿ ಏರಿಕೆ ದಾಖಲಿಸಲಿವೆ ಎಂದು ಕೋಟಕ್‌ ಸೆಕ್ಯುರಿಟೀಸ್‌ ಹೇಳಿದೆ.

2020ರ ಡಿಸೆಂಬರ್‌ ವೇಳೆಗೆ ನಿಫ್ಟಿ 13,400ಕ್ಕೆ ಮತ್ತು ಬಿಎಸ್‌ಇ 45,500ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದಿದೆ.

ಮಾರುಕಟ್ಟೆಯು ಹಲವು ಸಕಾರಾತ್ಮಕ ವಿದ್ಯಮಾನಗಳಿಂದ ಮುನ್ನುಗ್ಗುತ್ತಿದೆ. ಕಾರ್ಪೊರೇಟ್‌ ತೆರಿಗೆ ದರ ಕಡಿತ ಮತ್ತು ವಿದೇಶಿ ಬಂಡವಾಳ ಒಳಹರಿವು, ಸಿಪ್‌ ಹೂಡಿಕೆಯಂತಹ ಅಂಶಗಳು ಏರುಮುಖ ಚಲನೆಗೆ ನೆರವಾಗಿವೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಹಿರಿಯ ಉಪಾಧ್ಯಕ್ಷ ರುಸ್ಮಿಕ್‌ ಓಜಾ ಹೇಳಿದ್ದಾರೆ.

ಅರವಿಂದ ಸುಬ್ರಮಣಿಯನ್‌ಗೆ ಕಾಡಿದ ಒಗಟು

ಅಹಮದಾಬಾದ್‌ (ಪಿಟಿಐ): ‘ಆರ್ಥಿಕತೆಯು ಮಹಾ ಕುಸಿತದತ್ತ ಸಾಗುತ್ತಿರುವಾಗ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಮೇರೆ ಮೀರುತ್ತಿರುವುದು ತಮಗೆ ಒಗಟಾಗಿ ಕಾಡುತ್ತಿದೆ’ ಎಂದು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಹೇಳಿದ್ದಾರೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಆರಂಭಿಸಿರುವ ಹಣಕಾಸು, ಆರ್ಥಿಕತೆ ಮತ್ತು ಮಾರುಕಟ್ಟೆಯಲ್ಲಿನ ವರ್ತನೆ ವಿಜ್ಞಾನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘ಒಂದು ವೇಳೆ ನೀವು ನನಗಾಗಿ ಈ ಒಗಟು ಬಿಡಿಸಿದರೆ ನಾನು ಅದನ್ನು ಅರ್ಥೈಸಿಕೊಳ್ಳಲು ಅಮೆರಿಕದಿಂದ ಇಲ್ಲಿಗೆ ಹಾರಿ ಬರುವೆ’ ಎಂದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು