ಮಂಗಳವಾರ, ಅಕ್ಟೋಬರ್ 22, 2019
21 °C
ಕಾರ್ಪೊರೇಟ್‌ ತೆರಿಗೆ ದರ ಕಡಿತದ ಪ್ರಭಾವ: ಬಂಡವಾಳ ಒಳಹರಿವು

ಷೇರುಪೇಟೆಯಲ್ಲಿ ಗೂಳಿ ಓಟ

Published:
Updated:
Prajavani

ಮುಂಬೈ: ಕಾರ್ಪೊರೇಟ್‌ ತೆರಿಗೆ ದರ ಕಡಿತ ಮತ್ತು ಹೆಚ್ಚುವರಿ ಸೆಸ್‌ ಕೈಬಿಟ್ಟಿರುವುದು ದೇಶದ ಷೇರುಪೇಟೆಗಳಲ್ಲಿ ಸಂಚಲನ ಮೂಡಿಸಿದೆ.

ಸತತ ಎರಡನೇ ದಿನವೂ ಷೇರುಪೇಟೆಗಳಲ್ಲಿ ಖರೀದಿ ವಹಿವಾಟು ಜೋರಾಗಿದ್ದು, ಗೂಳಿ ಓಟಕ್ಕೆ ಇನ್ನಷ್ಟು ವೇಗ ದೊರೆತಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ದಿನದ ವಹಿವಾಟಿನ ಒಂದು ಹಂತದಲ್ಲಿ 1,426 ಅಂಶಗಳವರೆಗೂ ಜಿಗಿತ ಕಂಡಿತ್ತು. ವಹಿವಾಟಿನ ಅಂತ್ಯದ ವೇಳೆಗೆ ತುಸು ಇಳಿಕೆ ಕಂಡು 1,075 ಅಂಶಗಳ ಗಳಿಕೆಯೊಂದಿಗೆ 39,090 ಅಂಶಗಳಿಗೆ ತಲುಪಿತು. 

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 326 ಅಂಶಗಳ ಏರಿಕೆಯೊಂದಿಗೆ 11,600 ಅಂಶಗಳ ಮಟ್ಟವನ್ನು ತಲುಪಿತು.  ಸೂಚ್ಯಂಕಗಳು ಎರಡು ತಿಂಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಗರಿಷ್ಠ ಗಳಿಕೆ: ಬಜಾಜ್‌ ಅಲಯನ್ಸ್‌, ಎಲ್‌ಆ್ಯಂಡ್‌ಟಿ, ಏಷ್ಯನ್ ಪೇಂಟ್ಸ್‌, ಐಟಿಸಿ, ಆ್ಯಕ್ಸಿಸ್‌ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ, ಮಾರುತಿ ಮತ್ತು ಎಸ್‌ಬಿಐ ಷೇರುಗಳು ಶೇ 8.70ರವರೆಗೂ ಏರಿಕೆ ಕಂಡುಕೊಂಡವು.

ನಷ್ಟ: ಇನ್ಫೊಸಿಸ್‌, ರಿಲಯನ್ಸ್‌, ಟಾಟಾ ಮೋಟರ್ಸ್‌, ಪವರ್‌ ಗ್ರಿಡ್‌, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್‌, ಟೆಕ್‌ ಮಹೀಂದ್ರಾ, ಟಿಸಿಎಸ್‌ ಮತ್ತು ಎಚ್‌ಸಿಎಲ್‌ ಷೇರುಗಳು ಶೇ 4.97ರವರೆಗೂ ಇಳಿಕೆ ಕಂಡಿವೆ. ವಿದೇಶಿ ಬಂಡವಾಳ ಹೂಡಿಕೆದಾರರು ₹2,684 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಸಕಾರಾತ್ಮಕ ಅಂಶಗಳು:  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಾರ್ಪೊರೇಟ್‌ ತೆರಿಗೆ ದರ ಕಡಿತದ ಅಚ್ಚರಿ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ, ಷೇರುಪೇಟೆ ಯಲ್ಲಿ ಗೂಳಿ ಮೈಕೊಡವಿ ಓಟ ಆರಂಭಿಸಿತು.  ಸೂಚ್ಯಂಕ 1,921 ಅಂಶ ಜಿಗಿತ ಕಂಡಿತು. ಇದು 10 ವರ್ಷಗಳ ಬಳಿಕ ದಿನದ ವಹಿವಾಟಿನಲ್ಲಿ ಸೂಚ್ಯಂಕ ಕಂಡಿರುವ ಗರಿಷ್ಠ ಏರಿಕೆಯಾಗಿದೆ. ಜಿಎಸ್‌ಟಿ ಮಂಡಳಿಯು ಹೋಟೆಲ್‌ ಕೊಠಡಿ ಬಾಡಿಗೆ ಮತ್ತು ಕೆಲವು ಸರಕುಗಳ ತೆರಿಗೆ ದರ ತಗ್ಗಿಸಿರುವುದು ಸೋಮವಾರದ ವಹಿವಾಟಿನ ಮೇಲೆ ಪ್ರಭಾವ ಬೀರಿತು.

ಸಂಪತ್ತು ₹10.35 ಲಕ್ಷ ಕೋಟಿ ವೃದ್ಧಿ

ಷೇರುಪೇಟೆಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಸಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿಯೂ ಏರಿಕೆಯಾಗುತ್ತಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಶುಕ್ರವಾರ ₹6.8 ಲಕ್ಷ ಕೋಟಿ ಹೆಚ್ಚಾಗಿತ್ತು. ಸೋಮವಾರದ ವಹಿವಾಟಿನಲ್ಲಿ ₹3.55 ಲಕ್ಷ ಕೋಟಿ ಹೆಚ್ಚಾಗಿದೆ. ಇದರಿಂದ ಒಟ್ಟಾರೆ ₹10.69 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ಗುರುವಾರ ₹ 138.54 ಲಕ್ಷ ಕೋಟಿ ಇತ್ತು. ಇದು ಸೋಮವಾರದ ಅಂತ್ಯಕ್ಕೆ ₹ 148.89 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಜುಲೈ 5ರಂದು ಕೇಂದ್ರ ಬಜೆಟ್‌ನಲ್ಲಿ ಹೆಚ್ಚುವರಿ ಸರ್ಚಾರ್ಜ್‌ ಘೋಷಿಸಿದ ಬಳಿಕ ಹೂಡಿಕೆದಾರರ ಸಂಪತ್ತಿನಲ್ಲಿ ಅಂದಾಜು ₹14 ಲಕ್ಷ ಕೋಟಿಗೂ ಅಧಿಕ ಮೊತ್ತ ಕರಗಿತ್ತು. ಜುಲೈ 5ರಂದು ಷೇರುಪೇಟೆ ಬಂಡವಾಳ ಮೌಲ್ಯ ₹ 151.35 ಲಕ್ಷ ಕೋಟಿ ಇತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)