ಕರೆ, ಡೇಟಾ ದರ ಹೆಚ್ಚಳ; ಏರಿದ ಏರ್‌ಟೆಲ್, ವೊಡಾಫೋನ್, ರಿಲಯನ್ಸ್ ಷೇರು

ನವದೆಹಲಿ: ದೇಶದ ಖಾಸಗಿ ದೂರಸಂಪರ್ಕ ಸಂಸ್ಥೆಗಳು ಸೇವಾ ದರ ಹೆಚ್ಚಿಸಿದ ಬೆನ್ನಲೇ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಹಾಗೂ ರಿಯಲನ್ಸ್ ಷೇರುಗಳು ಏರಿಕೆ ದಾಖಲಿಸಿವೆ.
ಏರ್‌ಟೆಲ್ ಮತ್ತು ವೊಡಾಫೋನ್ ಕಂಪನಿಯ ಕರೆ ಮತ್ತು ಡೇಟಾ ಬಳಕೆಗೆ ವಿಧಿಸಲಾಗಿರುವ ಹೊಸ ದರಗಳು ಡಿಸೆಂಬರ್ 3ರಿಂದ ಅನ್ವಯವಾಗಲಿದ್ದು, ರಿಲಯನ್ಸ್ ಜಿಯೊ ಡಿಸೆಂಬರ್ 6ರಂದು 'ಆಲ್ ಇನ್ ಒನ್' ಯೋಜನೆ ಪರಿಚಯಿಸುತ್ತಿದೆ. ಭಾನುವಾರ ದೂರಸಂಪರ್ಕ ಹೊಸ ದರ ಪ್ರಕಟಿಸಿದ್ದು, ಹೂಡಿಕೆದಾರರು ಸೋಮವಾರ ಬೆಳಗ್ಗಿನಿಂದಲೇ ಷೇರುಗಳ ಖರೀದಿಗೆ ಉತ್ಸಾಹ ತೋರಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 6ರಿಂದ ಜಿಯೊ: ‘ಆಲ್ ಇನ್ ಒನ್’ ಪ್ಲ್ಯಾನ್
ಸೆನ್ಸೆಕ್ಸ್ ಮತ್ತು ನಿಫ್ಟಿ ಸಂವೇದಿ ಸೂಚ್ಯಂಕಗಳು ಇಳಿಮುಖವಾಗಿದ್ದರೂ ಭಾರ್ತಿ ಏರ್‌ಟೆಲ್ ಷೇರು ಮುಂಬೈ ಷೇರುಪೇಟೆಯಲ್ಲಿ ಶೇ 7.35 ಹಾಗೂ ರಾಷ್ಟ್ರೀಯ ಷೇರುಪೇಟೆಯಲ್ಲಿ ಶೇ 7.36ರಷ್ಟು ಏರಿಕೆಯೊಂದಿಗೆ ₹ 475ರಲ್ಲಿ ವಹಿವಾಟು ನಡೆಯಿತು. ಪ್ರತಿ ಷೇರು ಇಂದು ಗರಿಷ್ಠ ₹ 485.75ಕ್ಕೆ ಮುಟ್ಟಿತ್ತು.
ವೊಡಾಫೋನ್ ಐಡಿಯಾ ಷೇರು ಶೇ 22.63ರಷ್ಟು ಗಳಿಕೆಯೊಂದಿಗೆ ₹ 8.40ರಲ್ಲಿ ವಹಿವಾಟು ಕಂಡಿತು.
ಮೊಬೈಲ್ ಕರೆ ಮತ್ತು ಡೇಟಾ ದರಗಳು ಶೇ 40–ಶೇ 50ರಷ್ಟು ಹೆಚ್ಚಳವಾಗುವುದಾಗಿ ಮೂರೂ ಕಂಪನಿಗಳು ಪ್ರಕಟಿಸಿವೆ. ಜಿಯೊ ಸಹ ರಿಲಯನ್ಸ್ ಇಂಡಸ್ಟ್ರೀಸ್ ಭಾಗವೇ ಆಗಿರುವುದರಿಂದ ರಿಲಯನ್ಸ್ ಷೇರು ಶೇ 2.61ರಷ್ಟು ಹೆಚ್ಚಳದೊಂದಿಗೆ ₹ 1,591.65 ತಲುಪಿತು.
ಇದನ್ನೂ ಓದಿ: ಬಳಕೆದಾರರಿಗೆ ಬರೆ: ನಾಳೆಯಿಂದ ವೊಡಾಫೋನ್ ಐಡಿಯಾ, ಏರ್‌ಟೆಲ್, ಜಿಯೊ ದರ ಏರಿಕೆ
ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕಂಪನಿಗಳ ಒಟ್ಟಾರೆ ₹ 74,000 ಕೋಟಿ ನಷ್ಟ ಪ್ರಕಟಿಸಿಕೊಂಡಿದ್ದವು.
ಏರ್‌ಟೆಲ್ ಷೇರು:
52 ವಾರದ ಕನಿಷ್ಠ– ₹ 258.88
52 ವಾರದ ಗರಿಷ್ಠ– ₹ 485.75
ವೊಡಾಫೋನ್ ಐಡಿಯಾ ಷೇರು:
52 ವಾರದ ಕನಿಷ್ಠ– ₹ 2.40
52 ವಾರದ ಗರಿಷ್ಠ– ₹ 23.47