ವೈಯಕ್ತಿಕ ಸಾಲ ಪಡೆಯುವ ಮುನ್ನ...

7

ವೈಯಕ್ತಿಕ ಸಾಲ ಪಡೆಯುವ ಮುನ್ನ...

Published:
Updated:

‘ಸಾಲ ಮಾಡಿಯಾದ್ರು ತುಪ್ಪ ತಿನ್ನು’ ಅನ್ನೋ ಜಾಯಮಾನ ಅನೇಕರದ್ದು. ಆದರೆ, ಸಾಲ ಮಾಡುವಾಗ ಪೂರ್ವಾಪರ ಯೋಚಿಸದೆ ಮುನ್ನಡೆದರೆ ಸಾಲವೆಂಬ ತುಪ್ಪ, ಬಿಸಿತುಪ್ಪವಾಗಿ ಬಾಯಿ ಸುಡುತ್ತದೆ. ಅದರಲ್ಲೂ ವೈಯಕ್ತಿಕ ಸಾಲ (ಪರ್ಸನಲ್ ಲೋನ್) ಪಡೆಯುವಾಗ ಮುಂದಾಲೋಚನೆ ಇಲ್ಲದೆ ನಿರ್ಧಾರ ಕೈಗೊಂಡರೆ ಬಡ್ಡಿಯೆಂಬ ಭೂತ ನಿದ್ದೆಗೆಡಿಸುತ್ತದೆ.

ಧುತ್ತೆಂದು ಬರುವ ಹಣಕಾಸು ಬಿಕ್ಕಟ್ಟಿನ ತುರ್ತು ನಿಭಾಯಿಸುವ ಶಕ್ತಿ ವೈಯಕ್ತಿಕ ಸಾಲಕ್ಕಿದೆ. ಹೆಸರೇ ಹೇಳುವಂತೆ ಇದು ವೈಯಕ್ತಿಕ ಬಳಕೆಗೆ ಬ್ಯಾಂಕ್‌ನಿಂದ ಪಡೆದುಕೊಳ್ಳುವ ಸಾಲ. ಒಂದರಿಂದ ಐದು ವರ್ಷಗಳ ಅವಧಿಗೆ ಸಿಗುವ ಈ ಸಾಲವನ್ನು ಯಾವ ಉದ್ದೇಶಕ್ಕಾದರೂ ಬಳಸಬಹುದು. ವೇತನ ಅಥವಾ ಆದಾಯದ ಆಧಾರದ ಮೇಲೆ ವೈಯಕ್ತಿಕ ಸಾಲ ಸಿಗುತ್ತದೆ. ಆದಷ್ಟು ತುರ್ತು ಅಗತ್ಯಗಳಿಗೆ ಮಾತ್ರ ಸಾಲ ಪಡೆಯುವುದು ಉತ್ತಮ. ಯಾಕಂದ್ರೆ ವೈಯಕ್ತಿಕ ಸಾಲದಲ್ಲಿ ಸಾಮಾನ್ಯವಾಗಿ ಬ್ಯಾಂಕ್‌ಗಳು ಶೇ 13 ರಿಂದ ಶೇ 16 ರಷ್ಟು ಗರಿಷ್ಠ ಬಡ್ಡಿ ವಿಧಿಸುತ್ತವೆ.

ವೈಯಕ್ತಿಕ ಸಾಲ ಪಡೆಯಬೇಕಾದರೆ ಆದಾಯ ತೆರಿಗೆ ಸಲ್ಲಿಕೆ ವಿವರ, ವೇತನ ವಿವರ ಅಗತ್ಯ. ನಿಮಗೆ ಎಷ್ಟು ಸಂಬಳ ಇದೆ ಎನ್ನುವುದರ ಮೇಲೆ ಎಷ್ಟು ಸಾಲ ನೀಡಬಹುದು ಎನ್ನುವುದನ್ನು ಬ್ಯಾಂಕ್ ತೀರ್ಮಾನಿಸುತ್ತದೆ. ಸಾಲ ಸಿಗಬೇಕಾದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಮಾಡಿ ನಂತರದಲ್ಲಿ ನಿಮ್ಮ ಸಾಲದ ಮೇಲೆ ಬಡ್ಡಿ ದರ ನಿರ್ಧರಿಸಲಾಗುತ್ತದೆ. ಆದಷ್ಟು ಮುಂಗಡ ಪಾವತಿಗೆ ಶುಲ್ಕ ರಹಿತ ಆಯ್ಕೆ ನೀಡುವ ಬ್ಯಾಂಕ್‌ಗಳಿಂದ ವೈಯಕ್ತಿಕ ಸಾಲ ಪಡೆದುಕೊಳ್ಳಿ. ಇದರಿಂದ ಹಣ ಉಳಿಸಬಹುದು.

ಗೃಹ ಸಾಲ ತೀರಿಸಲು ವೈಯಕ್ತಿಕ ಸಾಲ ಬೇಡ: ವೈಯಕ್ತಿಕ ಸಾಲದ ಬಡ್ಡಿ ದರಕ್ಕೆ ಹೋಲಿಕೆ ಮಾಡಿದಾಗ ಗೃಹ ಸಾಲದ ಬಡ್ಡಿದರ ಬಹಳ ಕಡಿಮೆ. ಗೃಹ ಸಾಲದ ಕನಿಷ್ಠ ಬಡ್ಡಿ ದರ ಶೇ 8.25 ರಿಂದ ಶೇ 8.95 ವರೆಗೆ ಇರಬಹುದು. ಹೀಗಾಗಿ ವೈಯಕ್ತಿಕ ಸಾಲ ಮಾಡಿ ಗೃಹ ಸಾಲ ಪಾವತಿ ಸರಿಯಲ್ಲ. ಗೃಹ ಸಾಲದ ಮೇಲಿನ ಬಡ್ಡಿ ಪಾವತಿ ಮತ್ತು ಅಸಲು ಪಾವತಿಗೆ ಆದಾಯ ತೆರಿಗೆ ವಿನಾಯ್ತಿ ಸಿಗುತ್ತದೆ. ನೀವು ವೈಯಕ್ತಿಕ ಸಾಲಮಾಡಿ ಗೃಹ ಸಾಲ ತೀರಿಸಲು ಹೊರಟರೆ ಈ ಅನುಕೂಲ ಸಿಗುವುದಿಲ್ಲ.

ಪೇಟೆಯಲ್ಲಿ ತ್ರೈಮಾಸಿಕ ವರದಿಗಳ ಪ್ರಭಾವ

ಷೇರು ಪೇಟೆಯಲ್ಲಿ ಫಲಿತಾಂಶಗಳ ಪರ್ವ ಶುರುವಾಗಿದೆ. ಇನ್ಫೊಸಿಸ್, ಟಿಸಿಎಸ್ ಸೇರಿ ದೈತ್ಯ ಕಂಪನಿಗಳು ಈಗಾಗಲೇ ತಮ್ಮ ಮೂರನೇ ತ್ರೈಮಾಸಿಕದ ಹಣಕಾಸು ಸಾಧನೆ ವರದಿ ಪ್ರಕಟಿಸಿವೆ. ಇದರ ನೇರ ಪರಿಣಾಮ ಸೂಚ್ಯಂಕದ ಮೇಲಾಗಿದೆ.

ಐದು ದಿನಗಳ ವಹಿವಾಟಿನಲ್ಲಿ ಮೂರು ದಿನಗಳ ಕಾಲ ಸಕಾರಾತ್ಮಕವಾಗಿ ಕಾಣಿಸಿಕೊಂಡಿದ್ದ ಪೇಟೆ, ಕೊನೆಯ ಎರಡು ದಿನಗಳ ಕಾಲ ತ್ರೈಮಾಸಿಕ ಫಲಿತಾಂಶಗಳ ಪ್ರಭಾವಕ್ಕೆ ಸಿಲುಕಿದೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 0.88 ರಷ್ಟು (36,010) ಅಂಶಗಳ ಏರಿಕೆ ದಾಖಲಿಸಿದ್ದರೆ, ನಿಫ್ಟಿ ಶೇ 0.63 ರಷ್ಟು (10,795) ಪ್ರಗತಿ ಕಂಡಿದೆ.

ಪ್ರಮುಖ ಬೆಳವಣಿಗೆ: ತ್ರೈಮಾಸಿಕ ಆರ್ಥಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಟಿಸಿಎಸ್‌ ಷೇರುಗಳು 1.83 ರಷ್ಟು (₹ 1842.55 ಕ್ಕೆ) ಇಳಿಕೆ ಕಂಡಿವೆ. ಕಂಪನಿ ₹ 8,105 ಕೋಟಿ ನಿವ್ವಳ ಲಾಭ ಗಳಿಸಿದ್ದರೂ ಪೇಟೆ ತಜ್ಞರು ಮಾಡಿದ್ದ ಸಾಧನೆಯ ಅಂದಾಜನ್ನು ಕಂಪನಿ ಮುಟ್ಟದಿರುವುದು ಹಿನ್ನಡೆಗೆ ಕಾರಣವಾಗಿದೆ.

ಇನ್ಫೊಸಿಸ್, ತನ್ನ ವರಮಾನದ ಅಂದಾಜನ್ನು ಹೆಚ್ಚಳ ಮಾಡಿದ ಪರಿಣಾಮ ಷೇರುಗಳು ಶೇ 3.4 ರಷ್ಟು (₹ 689.80ಗೆ) ಹೆಚ್ಚಳ ದಾಖಲಿಸಿವೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿ ₹3,610 ಕೋಟಿ ನಿವ್ವಳ ಲಾಭ ಗಳಿಸಿದೆ.

ಗೃಹ ಫೈನಾನ್ಸ್ ಲಿಮಿಟೆಡ್, ಬಂಧನ್ ಬ್ಯಾಂಕ್ ಜತೆ ವೀಲೀನಗೊಳ್ಳುವ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ಷೇರುಗಳ ಬೆಲೆ ಶೇ 24ರಷ್ಟು (₹ 242.25 ಕ್ಕೆ) ಕುಸಿದಿದೆ. ಗೃಹ ಫೈನಾನ್ಸ್‌ನ ಹೂಡಿಕೆದಾರರಿಗೆ ಸಾವಿರ ಷೇರುಗಳಿಗೆ ಪ್ರತಿಯಾಗಿ ಬಂಧನ್ ಬ್ಯಾಂಕ್‌ನ 568 ಷೇರುಗಳು ಸಿಗಲಿವೆ.

ವಾರದ ಅವಧಿಯಲ್ಲಿ  ಬ್ರೆಂಟ್ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ ಬೆಲೆ 62 ಡಾಲರ್‌ಗೆ ಏರಿಕೆಯಾಗಿರುವ ಪರಿಣಾಮ ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಷೇರುಗಳು ಶೇ 6 ರಷ್ಟು ಕುಸಿತ ಕಂಡಿವೆ. ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ‘ನಿಫ್ಟಿ’ 500 ರ ಮುಂಚೂಣಿ ಕಂಪನಿಯಾಗಿ ಕಾಣಿಸಿಕೊಂಡಿದೆ. ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಗಮನಾರ್ಹ ಅನ್ವೇಷಣೆಗಳನ್ನು ಜಾರಿಗೆ ತರುವುದಾಗಿ ಕಂಪನಿ ಹೇಳಿರುವ ಪರಿಣಾಮ ಷೇರುಗಳು ಶೇ 26 ರಷ್ಟು (₹ 152.10) ಏರಿಕೆ ದಾಖಲಿಸಿವೆ.

ಮರು ಖರೀದಿ, ಲಾಭಾಂಶ: ಇನ್ಫೊಸಿಸ್ ₹ 8,260 ಕೋಟಿ ಮೌಲ್ಯದ ಷೇರುಗಳ ಮರು ಖರೀದಿ ನಿರ್ಧಾರ ಪ್ರಕಟಿಸಿದೆ. ಪ್ರತಿ ಷೇರಿನ ಬೆಲೆ ₹ 800 ಮೀರದಂತೆ ಈ ಮರು ಖರೀದಿ ಪ್ರಕ್ರಿಯೆ ನಡೆಯಲಿದೆ. ಪ್ರತಿ ಷೇರಿಗೆ ₹ 4 ರಂತೆ ವಿಶೇಷ ಲಾಭಾಂಶವನ್ನು ಕಂಪನಿ ಘೋಷಿಸಿದ್ದು ಇದೇ ತಿಂಗಳ 28 ರಂದು ವಿತರಿಸಲಿದೆ.

ಟಿಸಿಎಸ್ ತನ್ನ ಹೂಡಿಕೆದಾರರಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರನೇ ಮಧ್ಯಂತರ ಲಾಭಾಂಶ ಘೋಷಣೆ ಮಾಡಿದೆ. ಪ್ರತಿ ಷೇರಿಗೆ ₹ 4ರಂತೆ ಲಾಭಾಂಶ ನೀಡುವುದಾಗಿ ಕಂಪನಿ ತಿಳಿಸಿದ್ದು ಇದೇ 24 ರಂದು ಲಾಭಾಂಶ ವಿತರಿಸಲಿದೆ.

ಮುನ್ನೋಟ: ಈ ವಾರ ಎಚ್‌ಡಿಎಫ್‌ಸಿ, ಹಿಂದೂಸ್ಥಾನ್ ಯುನಿಲಿವರ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಿಪ್ರೊ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಇದೇ 14 ರಂದು ಸಗಟು ಬೆಲೆ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕದ ದತ್ತಾಂಶ ಪ್ರಕಟಗೊಳ್ಳಲಿದೆ. ತ್ರೈಮಾಸಿಕ ಫಲಿತಾಂಶಗಳು, ಜಾಗತಿಕ ವಿದ್ಯಮಾನಗಳು, ರೂಪಾಯಿ ಮೌಲ್ಯ, ತೈಲ ಬೆಲೆ ಏರಿಕೆಗಳು ದೇಶಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !