ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೊಡಾಫೋನ್‌ ಐಡಿಯಾ ಪಾವತಿ ಬಾಕಿ; ಸರ್ಕಾರದ ಪಾಲಾಗಲಿದೆ ಶೇ 35.8 ಷೇರು

Last Updated 11 ಜನವರಿ 2022, 6:59 IST
ಅಕ್ಷರ ಗಾತ್ರ

ಬೆಂಗಳೂರು: ತರಂಗಾಂತರಗಳ ಬಳಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕಂಪನಿಯ ಷೇರುಗಳ ಮೂಲಕ ಪಾವತಿಸಲು ದೇಶದ ದೂರಸಂಪರ್ಕ ಸೇವಾದಾರ ಕಂಪನಿ ವೊಡಾಫೋನ್‌ ಐಡಿಯಾ ಲಿಮಿಟೆಡ್‌ ನಿರ್ಧರಿಸಿದೆ. ಷೇರು ರೂಪದಲ್ಲಿ ಬಾಕಿ ಮೊತ್ತ ಪಾವತಿಸಲು ಕಂಪನಿಯ ಮಂಡಳಿಯು ಸಮ್ಮತಿಸಿರುವುದಾಗಿ ವೊಡಾಫೋನ್‌ ಐಡಿಯಾ ಮಂಗಳವಾರ ಹೇಳಿದೆ.

ಕಂಪನಿಯ ಲೆಕ್ಕಾಚಾರದ ಪ್ರಕಾರ, ಸರ್ಕಾರಕ್ಕೆ ಪಾವತಿಸಬೇಕಿರುವ ಬಡ್ಡಿಯ ಮೊತ್ತ ₹16,000 ಕೋಟಿ. ಪಾವತಿಸಬೇಕಿರುವ ಮೊತ್ತವನ್ನು ಷೇರು ರೂಪದಲ್ಲಿ ಪಾವತಿಸಲು ನಿರ್ಧರಿಸಿರುವುದರಿಂದ ವೊಡಾಫೋನ್‌ ಐಡಿಯಾದ ಒಟ್ಟು ಷೇರುಗಳಲ್ಲಿ ಭಾರತ ಸರ್ಕಾರವು ಶೇಕಡ 35.8ರಷ್ಟು ಪಾಲು ಹೊಂದುವ ಸಾಧ್ಯತೆ ಇದೆ. ವೊಡಾಫೋನ್‌ ಸಮೂಹದ ಪ್ರವರ್ತಕ ಷೇರುದಾರರಲ್ಲಿ ಶೇಕಡ 28.5ರಷ್ಟು ಹಾಗೂ ಆದಿತ್ಯ ಬಿರ್ಲಾ ಸಮೂಹವು ಶೇಕಡ 17.8ರಷ್ಟು ಷೇರು ಉಳಿಸಿಕೊಳ್ಳಲಿವೆ.

ಪ್ರಸ್ತುತ ವೊಡಾಫೋನ್‌ ಐಡಿಯಾದ ಪ್ರತಿ ಷೇರು ಬೆಲೆ ಶೇಕಡ 13.4ರಷ್ಟು ಕುಸಿದು ₹12.85 ತಲುಪಿದೆ.

ಮುಕೇಶ್‌ ಅಂಬಾನಿ ಅವರ ರಿಲಯನ್ಸ್ ಜಿಯೊ ಮಾರುಕಟ್ಟೆ ಪ್ರವೇಶದಿಂದಾಗಿ ದೇಶದ ದೂರಸಂಪರ್ಕ ವಲಯದಲ್ಲಿ ಹಲವು ಬದಲಾವಣೆಗಳು ಎದುರಾದವು ಹಾಗೂ ಹಲವು ಟೆಲಿಕಾಂ ಕಂಪನಿಗಳು ಭಾರಿ ಹೊಡೆತಕ್ಕೆ ಒಳಗಾದವು. ಅದರೊಂದಿಗೆ ಸರ್ಕಾರಕ್ಕೆ ದೊಡ್ಡ ಮೊತ್ತ ಪಾವತಿಸುವುದು ಬಾಕಿ ಉಳಿಸಿಕೊಂಡಿರುವುದು ಸಹ ಟೆಲಿಕಾಂ ಕಂಪನಿಗಳ ವಹಿವಾಟು ವಿಸ್ತರಣೆಗೂ ತೊಡಕಾಗಿದೆ.

ವೊಡಾಫೋನ್‌ ಐಡಿಯಾ ಈಗಾಗಲೇ ಸರ್ಕಾರಕ್ಕೆ ₹7,854 ಕೋಟಿ ಪಾವತಿಸಿದ್ದು, ಸುಮಾರು 50,000 ಕೋಟಿ ಪಾವತಿಸುವುದು ಬಾಕಿ ಇದೆ. ಬಾಕಿ ಪಾವತಿಗೆ ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್‌ 2031ರ ಗಡುವು ನೀಡಿದೆ.

ಭಾರ್ತಿ ಏರ್‌ಟೆಲ್‌ ಸಹ ಸರ್ಕಾರಕ್ಕೆ ಪಾವತಿಸುವುದು ಬಾಕಿ ಉಳಿಸಿಕೊಂಡಿದ್ದು, ಷೇರುಗಳ ಮೂಲಕ ಪಾವತಿಸುವುದಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT