ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಆರ್‌ಬಿಐ ನೀತಿಗೆ ಷೇರುಪೇಟೆ ಪ್ರತಿಕ್ರಿಯಿಸುವುದು ಏಕೆ?

ಶರತ್ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

ಷೇರುಗಳಲ್ಲಿ ಹಣ ತೊಡಗಿಸುವವರು ಮುಖ್ಯವಾಗಿ ಗಮನಿಸಬೇಕಾದ ಅಂಶಗಳಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿಯೂ ಒಂದು. ಆರ್‌ಬಿಐ ಹಣಕಾಸಿನ ಕುರಿತಾಗಿ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿ ಸಾಮಾನ್ಯವಾಗಿ ಷೇರುಪೇಟೆ ಸೂಚ್ಯಂಕಗಳು ಏರಿಕೆ ಅಥವಾ ಇಳಿಕೆ ಕಾಣುತ್ತವೆ. ಆರ್‌ಬಿಐ ತೆಗೆದುಕೊಳ್ಳುವ ತೀರ್ಮಾನಗಳಿಗೆ ಷೇರುಪೇಟೆ ಹೀಗೆ ವರ್ತಿಸುವುದು ಏಕೆ ಎನ್ನುವುದನ್ನು ತಿಳಿಯೋಣ ಬನ್ನಿ.

ಷೇರುಪೇಟೆ ಪ್ರಗತಿಗೂ, ಆರ್‌ಬಿಐ ನೀತಿಗೂ ಇದೆ ನಂಟು: ಆರ್‌ಬಿಐ ಪ್ರತಿ ಎರಡು ತಿಂಗಳಿಗೊಮ್ಮೆ ಬಡ್ಡಿ ದರಗಳನ್ನು ಪರಾಮರ್ಶಿಸುತ್ತದೆ. ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವು ಎಷ್ಟಿರಬೇಕು ಎನ್ನುವುದನ್ನು ಆಧರಿಸಿ ಆರ್‌ಬಿಐ ಬಡ್ಡಿ ದರಗಳನ್ನು ನಿಯಂತ್ರಿಸುತ್ತದೆ. ಹೀಗೆ ಬಡ್ಡಿ ದರ ನಿಯಂತ್ರಿಸುವಾಗ ಅರ್ಥವ್ಯವಸ್ಥೆಯ ಬೆಳವಣಿಗೆ ಮತ್ತು ಹಣದುಬ್ಬರದ (ಬೆಲೆ ಏರಿಕೆ) ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ.

ಬಡ್ಡಿ ದರ ಅತಿಯಾಗಿ ಹೆಚ್ಚಾದರೆ ನಗದು ಹರಿವು ಕಡಿಮೆಯಾಗಿ ಕಂಪನಿಗಳ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ. ಬಡ್ಡಿ ದರ ತೀರಾ ಕಡಿಮೆಯಾದರೆ ನಗದು ಹರಿವು ಹೆಚ್ಚಾಗಿ ಹಣದುಬ್ಬರ ಹೆಚ್ಚಾಗುತ್ತದೆ. ಈ ಸಮಸ್ಯೆ ನಿಯಂತ್ರಿಸಲು ರೆಪೊ ದರ, ರಿವರ್ಸ್ ರೆಪೊ ದರ, ನಗದು ಮೀಸಲು ಅನುಪಾತದಂತಹ (ಸಿಆರ್‌ಆರ್) ಲೆಕ್ಕಾಚಾರಗಳನ್ನು ಆರ್‌ಬಿಐ ಬಳಸುತ್ತದೆ.

ರೆಪೊ, ಸಿಆರ್‌ಆರ್ ಮತ್ತು ಷೇರುಪೇಟೆ: ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆದುಕೊಳ್ಳುವ ಸಾಲಕ್ಕೆ ನಿಗದಿಮಾಡುವ ಬಡ್ಡಿ ದರವೇ ರೆಪೊ ದರ. ರೆಪೊ ದರ ಹೆಚ್ಚಳವನ್ನು ಷೇರು ಹೂಡಿಕೆದಾರರು ಸ್ವಾಗತಿಸುವುದಿಲ್ಲ. ಇನ್ನು, ಬ್ಯಾಂಕ್‌ಗಳಿಂದ ಆರ್‌ಬಿಐ ಪಡೆದುಕೊಳ್ಳುವ ಠೇವಣಿಗಳಿಗೆ ನಿಗದಿ ಮಾಡುವ ಬಡ್ಡಿ ದರಕ್ಕೆ ಹೆಸರು ರಿವರ್ಸ್ ರೆಪೊ. ರಿವರ್ಸ್ ರೆಪೊ ದರ ಹೆಚ್ಚಳವಾದರೆ ಬ್ಯಾಂಕ್‌ಗಳು ಕಾರ್ಪೊರೇಟ್ ಕಂಪನಿಗಳಿಗೆ ಸಾಲ ಕೊಡುವ ಬದಲು ಆರ್‌ಬಿಐನಲ್ಲಿಯೇ ಹಣ ಇರಿಸಬಹುದು! ಆಗ ಅರ್ಥ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಕಡಿಮೆಯಾಗಿ ಸಮಸ್ಯೆಯಾಗುತ್ತದೆ. ಇದಲ್ಲದೆ ರಿಸರ್ವ್ ಬ್ಯಾಂಕ್ ಬಳಿ ಪ್ರತಿ ಬ್ಯಾಂಕ್ ಕೂಡ ಒಂದಿಷ್ಟು ನಿಧಿ ಇಡಬೇಕಾಗುತ್ತದೆ. ಅದೇ ನಗದು ಮೀಸಲು ಅನುಪಾತ (ಸಿಆರ್‌ಆರ್). ಈ ದರ ಹೆಚ್ಚಾದರೆ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚು ಹಣದ ಹರಿವು ಇರುವುದಿಲ್ಲ. ಹಾಗಾಗಿ ಮೇಲಿನ ಎಲ್ಲ ವಿದ್ಯಮಾನಗಳನ್ನು ಷೇರುಪೇಟೆ ಹೂಡಿಕೆದಾರರು ಕುತೂಹಲದಿಂದ ಗಮನಿಸುತ್ತಿರುತ್ತಾರೆ.

ಆರ್‌ಬಿಐ ನೀತಿಗೆ ಪ್ರತಿಕ್ರಿಯಿಸುವ ವಲಯಗಳು: ಸಾಮಾನ್ಯವಾಗಿ ಆರ್‌ಬಿಐ ಹಣಕಾಸು ನೀತಿ ಪ್ರಕಟಿಸಿದ ಕೂಡಲೇ ರಿಯಲ್ ಎಸ್ಟೇಟ್, ಬ್ಯಾಂಕ್, ಗೃಹ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ), ವಾಹನ ತಯಾರಿಕೆ, ಲೋಹ ಉತ್ಪಾದನೆ, ಸಿಮೆಂಟ್ ಉತ್ಪಾದನೆ ಕಂಪನಿಗಳ ಷೇರುಗಳು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ.

ಈ ಕಾರಣಗಳಿಂದಾಗಿ ಷೇರು ಹೂಡಿಕೆ ಮಾಡುವಾಗ ನಿರ್ದಿಷ್ಟ ಕಂಪನಿ ಎಷ್ಟು ಉತ್ತಮವಾಗಿ ಬೆಳವಣಿಗೆ ಸಾಧಿಸುತ್ತಿದೆ ಎನ್ನುವುದರ ಜತೆಗೆ ಆರ್‌ಬಿಐ ತೆಗೆದುಕೊಳ್ಳುವ ಹಣಕಾಸಿನ ನಿರ್ಣಯಗಳನ್ನು ಗಮನಿಸುವುದು ಅತಿ ಮುಖ್ಯ.⇒.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು