ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮ್ಯೂಚುವಲ್‌ ಫಂಡ್‌ ಹೂಡಿಕೆ ಪ್ರಯೋಜನ

Last Updated 10 ಡಿಸೆಂಬರ್ 2020, 5:41 IST
ಅಕ್ಷರ ಗಾತ್ರ

ಬೆಂಗಳೂರು: ಹಣದುಬ್ಬರ ದರಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಪ್ರತಿಫಲ ನಿರೀಕ್ಷಿಸುವವರು ಷೇರುಪೇಟೆಯಲ್ಲಿ ಹಣ ಹೂಡುವ ನಿರ್ಧಾರದಿಂದ ಹಿಂದೆ ಸರಿಯಬಾರದು. ಅಲ್ಪಾವಧಿಯಲ್ಲಿನ ಪೇಟೆಯ ಏರಿಳಿತದ ಹೊರತಾಗಿಯೂ, ದೀರ್ಘಾವಧಿಯಲ್ಲಿ ಹಣದುಬ್ಬರ ದರಕ್ಕಿಂತ ಹೆಚ್ಚಿನ ಲಾಭ ತಂದು ಕೊಡುವಲ್ಲಿ ಷೇರುಗಳಲ್ಲಿನ ಹೂಡಿಕೆಯೇ ಉತ್ತಮ ನಿರ್ಧಾರವಾಗಿರಲಿದೆ ಎಂದು ಎಲ್‌ಆ್ಯಂಡ್‌ಟಿ ಮ್ಯೂಚುವಲ್‌ ಫಂಡ್‌ನ ಸಿಇಒ ಕೈಲಾಶ್‌ ಕುಲಕರ್ಣಿ ಅವರು ಹೇಳಿದ್ದಾರೆ.

‘ಉತ್ತಮ ಕಂಪನಿಗಳ ಷೇರು ಬೆಲೆಗಳು ದೀರ್ಘಾವಧಿಯಲ್ಲಿ ಕಂಪನಿಯ ಲಾಭ ಏರಿಕೆಯ ಜತೆಗೆ ಹೆಚ್ಚಳಗೊಳ್ಳುತ್ತವೆ. ಅಲ್ಪಾವಧಿಯಲ್ಲಿ ಷೇರು ಬೆಲೆಗಳು ಏರಿಳಿತಗೊಳ್ಳುತ್ತಿರುತ್ತವೆ. ಷೇರು ಬೆಲೆಗಳಲ್ಲಿನ ತೀವ್ರ ಏರಿಳಿತದ ಕಾರಣಕ್ಕೆ ಅನೇಕರು ಷೇರುಗಳಲ್ಲಿ ತಾವು ಹೂಡಿಕೆ ಮಾಡಿದ ಹಣ ಕಳೆದುಕೊಳ್ಳಬೇಕಾದೀತು ಎನ್ನುವ ಆತಂಕ ಹೊಂದಿರುತ್ತಾರೆ. ಈ ಭೀತಿಯಿಂದ ಹೊರ ಬರುವುದಕ್ಕೆ ಹೂಡಿಕೆದಾರರು ಷೇರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸಿ ನಿಶ್ಚಿಂತೆಯಿಂದ ಇರಬಹುದು‘ ಎಂದು ಅವರು ಸಲಹೆ ನೀಡುತ್ತಾರೆ.

‘ಷೇರು ಮಾರುಕಟ್ಟೆಯು ಹೂಡಿಕೆದಾರರು ನಿಧಾನವಾಗಿ ಶ್ರೀಮಂತರಾಗುವ ಸ್ಥಳ‘ ಎಂದೂ ಕೆಲವರು ಹೇಳುತ್ತಾರೆ. ಈ ಹೇಳಿಕೆಯು ಷೇರುಪೇಟೆಯ ಸ್ವರೂಪವನ್ನು ಸರಿಯಾಗಿ ವಿವರಿಸುತ್ತದೆ. ಷೇರುಗಳಲ್ಲಿ ಹಣ ತೊಡಗಿಸುವ ಮೂಲಕ ಸಿರಿವಂತರಾಗಬಹುದು. ಆದರೆ, ಅಲ್ಪಾವಧಿಯಲ್ಲಿ ಶ್ರೀಮಂತರಾಗುವ ಕನಸು ಕಾಣುವುದು ಮಾತ್ರ ಅವಾಸ್ತವಿಕವಾಗಿರುತ್ತದೆ’ ಎಂದು ಅವರು ಎಚ್ಚರಿಸುತ್ತಾರೆ.

’ಎಚ್ಚರಿಕೆಯಿಂದ ಆಯ್ಕೆ ಮಾಡಿದ ವಿವಿಧ ಷೇರುಗಳಲ್ಲಿ ಹಣ ಹೂಡಿಕೆ ಮಾಡಿ ಉತ್ತಮ ಪ್ರತಿಫಲ ಪಡೆದುಕೊಳ್ಳಬಹುದು. ಹೀಗೆ ಮಾಡಬೇಕಾದರೆ ಹೂಡಿಕೆದಾರರು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಉತ್ತಮ ದರ್ಜೆಯ ಷೇರುಗಳನ್ನು ಆಯ್ಕೆ ಮಾಡಲು ಪೇಟೆಯ ವಹಿವಾಟು ಕುರಿತು ಸಾಕಷ್ಟು ತಿಳಿವಳಿಕೆಯೂ ಇರಬೇಕಾಗುತ್ತದೆ. ಇದಕ್ಕಾಗಿ ಕಠಿಣ ಪರಿಶ್ರಮ ಪಡಬೇಕು. ಸಾಕಷ್ಟು ಸಮಯ ಮೀಸಲಿಡಬೇಕು. ಅನೇಕ ಹೂಡಿಕೆದಾರರು ತಮ್ಮ ಉದ್ಯೋಗ ಮತ್ತು ವೃತ್ತಿಯಲ್ಲಿ ತೊಡಗಿರುವಾಗ ಉತ್ತಮ ಷೇರುಗಳನ್ನು ಆಯ್ಕೆ ಮಾಡಲು ಅಗತ್ಯ ಇರುವ ಪರಿಣತಿ ಹೊಂದಲು ಸಾಧ್ಯವಾಗುವುದಿಲ್ಲ. ಅವರ ಬಳಿ ಸಾಕಷ್ಟು ಸಮಯವೂ ಇರುವುದಿಲ್ಲ. ಇಂಥವರಿಗಾಗಿಯೇ ಷೇರು ಮ್ಯೂಚುವಲ್‌ ಫಂಡ್ಸ್‌ಗಳು ನೆರವಿಗೆ ಬರುತ್ತವೆ.

‘ವಿವಿಧ ವಲಯಗಳ ಷೇರುಗಳಲ್ಲಿ ಹಣ ಹೂಡಿಕೆ ಮಾಡಿ ಉತ್ತಮ ಪ್ರತಿಫಲ ನಿರೀಕ್ಷಿಸಲು ಷೇರು ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಹೂಡಿಕೆಯು ಉತ್ತಮ ವಿಧಾನವಾಗಿರುತ್ತದೆ, ವೃತ್ತಿನಿರತ ನಿಧಿ ನಿರ್ವಾಹಕರ ತಂಡವು ಹೂಡಿಕೆಗಳನ್ನು ಜಾಣತನದಿಂದ ನಿರ್ವಹಿಸಿ ಹೂಡಿಕೆದಾರರಿಗೆ ಲಾಭ ತಂದು ಕೊಡುತ್ತದೆ.

‘ಹೂಡಿಕೆಗೆ ಸಂಬಂಧಿಸಿದ ಮಾಹಿತಿ ಕಲೆಹಾಕುವ, ಸಂಬಂಧಿಸಿದ ಲೆಕ್ಕಪತ್ರಗಳ ನಿರ್ವಹಣೆ ಮತ್ತು ಆಡಳಿತಾತ್ಮಕ ಕೆಲಸಗಳನ್ನು ಸಂಪತ್ತು ನಿರ್ವಹಣಾ ಸಂಸ್ಥೆಯೇ ನಿಭಾಯಿಸುತ್ತದೆ. ಸಂಪತ್ತು ನಿರ್ವಹಣಾ ಕಂಪನಿಯು ನೇಮಿಸಿಕೊಂಡಿರುವ ಹೂಡಿಕೆ ನಿರ್ವಾಹಕರು ಹೂಡಿಕೆ ನಿರ್ಧಾರ ಕೈಗೊಳ್ಳುವಲ್ಲಿ ಪರಿಣತರಾಗಿರುತ್ತಾರೆ. ಈ ಕೆಲಸಕ್ಕೆ ಅಗತ್ಯವಾದ ಅರ್ಹತೆ ಮತ್ತು ಅನುಭವವನ್ನೂ ಅವರು ಹೊಂದಿರುತ್ತಾರೆ. ಈ ಅರ್ಹತೆಗಳ ಜತೆಗೆ, ಅವರು ಹಣದ ನಿರ್ವಹಣೆಗೆ ತಮ್ಮೆಲ್ಲ ಸಮಯವನ್ನೂ ಮೀಸಲು ಇರಿಸಿರುತ್ತಾರೆ. ವೈಯಕ್ತಿಕ ಹೂಡಿಕೆದಾರರಿಗಿಂತ ಈ ವೃತ್ತಿನಿರತರು ಹೂಡಿಕೆಯ ಹಣವನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ.

‘ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಕಠಿಣ ಸ್ವರೂಪದ ನಿಯಂತ್ರಣ ಕ್ರಮಗಳಿಂದಾಗಿ ಷೇರು ಮ್ಯೂಚುವಲ್‌ ಫಂಡ್‌ಗಳು ಷೇರುಪೇಟೆಯ ಏರಿಳಿತದ ಹೊರತಾಗಿಯೂ ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಉತ್ತಮ ಪ್ರತಿಫಲ ತಂದು ಕೊಡುತ್ತವೆ‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT