ಪಾತಾಳಕ್ಕಿಳಿದ ಧಾರಣೆ; ಹೂವು–ನೋವು

7
ಒಂದೇ ದಿನದ ಅಂತರ; ಬೆಲೆಯಲ್ಲಿ ಭಾರಿ ಇಳಿಮುಖ, ತತ್ತರಿಸಿದ ಬೆಳೆಗಾರ

ಪಾತಾಳಕ್ಕಿಳಿದ ಧಾರಣೆ; ಹೂವು–ನೋವು

Published:
Updated:
Deccan Herald

ವಿಜಯಪುರ: ದೀಪಾವಳಿ ಅಮಾವಾಸ್ಯೆಯಂದು ಹೂ ನಗೆ ಚೆಲ್ಲಿದ್ದ ಬೆಳೆಗಾರ ಪಾಡ್ಯದ ದಿನ ಪೆಚ್ಚು ಮೋರೆ ಹಾಕಿದ ಚಿತ್ರಣ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಗೋಚರಿಸಿತು.

ಬುಧವಾರ ಒಂದು ಕೆ.ಜಿ. ಚೆಂಡು ಹೂವು ₹ 200ರ ಧಾರಣೆಯಿಂದ ಹಿಡಿದು ₹100ರವರೆಗೂ ಮಾರಾಟವಾಗಿತ್ತು. ಗುಲಾಬಿ ₹500, ಸಣ್ಣ ಗುಲಾಬಿ ₹400, ಸೇವಂತಿಗೆ ₹160ರ ಆಸುಪಾಸಿನ ದರದಲ್ಲಿ ಬಿಕರಿಯಾಗಿದ್ದವು.

ಇದರಿಂದ ಸ್ಥಳೀಯ ಮಾರುಕಟ್ಟೆಗೆ ಚೆಂಡು, ಸೇವಂತಿಗೆ, ಗಲಾಟ ಹೂವು ಮಾರಾಟಕ್ಕೆ ತಂದಿದ್ದ ಪುಷ್ಪ ಕೃಷಿಕರ ಮೊಗದಲ್ಲೂ ಮಂದಹಾಸ ಮೂಡಿತ್ತು. ಹೂವಿಗೆ ಬೇಡಿಕೆ ಹೆಚ್ಚಿದ್ದರಿಂದ ಬೆಳೆಗಾರರಿಗೆ ಬಂಪರ್ ಲಾಭ ದೊರಕಿತ್ತು.

ಶುಕ್ರವಾರ ಬಲಿಪಾಡ್ಯಮಿ. ಪಾಡ್ಯದ ಪೂಜೆಯನ್ನು ನಗರವೂ ಸೇರಿದಂತೆ ಜಿಲ್ಲೆಯ ಜನ ವಿಜೃಂಭಣೆಯಿಂದ ಆಚರಿಸುತ್ತಾರೆ. ಪಾಡ್ಯಕ್ಕೂ ಹೂವಿಗೆ ಬೇಡಿಕೆ ಹೆಚ್ಚಿರಲಿದೆ ಎಂಬ ನಿರೀಕ್ಷೆಯಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಹೂವು ತಂದಿದ್ದ ಸ್ಥಳೀಯ ಬೆಳೆಗಾರರಿಗೆ ಧಾರಣೆ ಕುಸಿತ ಮರ್ಮಾಘಾತ ನೀಡಿತು.

‘ಚೆಂಡು ಹೂವು ಒಂದು ಕೆ.ಜಿ.ಗೆ ₹40ರಿಂದ ₹20ರ ಧಾರಣೆಯಲ್ಲಿ ಮಾರಾಟವಾದರೆ, ಸೇವಂತಿಗೆ ₹120ರಿಂದ ₹60ರ ದರಕ್ಕೆ ಮಾರಾಟವಾಯ್ತು. ಇದು ಬೆಳೆಗಾರರಿಗೆ ತೀವ್ರ ಹೊಡೆತ ನೀಡಿತು. ಬೆಂಗಳೂರಿನಿಂದ ಸಣ್ಣ ಗುಲಾಬಿ ಮಾರುಕಟ್ಟೆಗೆ ಬಾರದಿದ್ದರಿಂದ ದೊಡ್ಡ ಗುಲಾಬಿಯ ಧಾರಣೆಯಲ್ಲಿ ವ್ಯತ್ಯಾಸವಾಗಲಿಲ್ಲ’ ಎಂದು ಹೂವಿನ ವ್ಯಾಪಾರಿ ಎ.ಎಂ.ತುರಕಿ ತಿಳಿಸಿದರು.

ಹಬ್ಬದ ಬೆಲೆ ಸಿಗಲಿಲ್ಲ:

‘ಬಲಿಪಾಡ್ಯಮಿ ದಿನ ಬಂಪರ್ ಬೆಲೆ ಸಿಗಲಿದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಯ್ತು. ಅಮಾವಾಸ್ಯೆ ದಿನವೇ ಎಲ್ಲ ಹೂವು ತಂದಿದ್ದರೇ ಇನ್ನಷ್ಟು ಲಾಭ ಹೆಚ್ಚಿಗೆ ಸಿಗುತ್ತಿತ್ತು. ಒಂದೇ ದಿನದ ಅಂತರದಲ್ಲಿ ಅರ್ಧಕ್ಕೂ ಹೆಚ್ಚಿನ ಧಾರಣೆ ಕುಸಿದಿದ್ದು, ಭರಿಸಲಾಗದ ಹೊಡೆತ ನೀಡಿದೆ’ ಎಂದು ಅತಾಲಟ್ಟಿಯ ಪುಷ್ಪ ಬೆಳೆಗಾರ ಬಸು ಸಾವಳಗಿ ಹೇಳಿದರು.

‘ಯುಗಾದಿ ಹಬ್ಬದ ಸಮಯ ಹೂವಿನ ಕೃಷಿಗೆ ಚಾಲನೆ ನೀಡುತ್ತೇವೆ. ಆರು ತಿಂಗಳ ಬಳಿಕ ಮಹಾನವಮಿ ವೇಳೆಗೆ ಹೂವು ಸಿಗಲಾರಂಭಿಸುತ್ತದೆ. ಮಹಾನವಮಿ, ದೀಪಾವಳಿ, ಛಟ್ಟಿ ಅಮಾವಾಸ್ಯೆ ಸಂದರ್ಭ ಚಲೋ ಧಾರಣೆ ಸಿಗಲಿದೆ.

ಅಮಾವಾಸ್ಯೆ, ಹಬ್ಬದ ದಿನಗಳಲ್ಲಿ ದೊರಕುವ ಧಾರಣೆಯೇ ನಮಗೆ ಲಾಭ. ಉಳಿದಂತೆ ನಿತ್ಯ ಬೆಲೆ ಅಷ್ಟಕ್ಕಷ್ಟೇ ಇರುತ್ತದೆ. ಇದು ಹೂವಿನ ಗಿಡಗಳ ನಿರ್ವಹಣೆಗೆ, ಔಷಧಿ ಸಿಂಪಡಣೆ ಖರ್ಚಿಗೆ ಸರಿಯಾಗಲಿದೆ. ಈ ಬಾರಿ ದಸರಾದಲ್ಲೂ ಹೇಳಿಕೊಳ್ಳುವಂಥ ಬೆಲೆ ಸಿಕ್ಕಿರಲಿಲ್ಲ. ದೀಪಾವಳಿ ಅಮಾವಾಸ್ಯೆ ಚಲೋ; ಆದರೆ, ಬಲಿಪಾಡ್ಯಮಿ ಬಂಪರ್ ಬೆಲೆ ಕೊಡಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !